ADVERTISEMENT

ಟೆಸ್ಟ್‌ ಸರಣಿ | ಸ್ಪಿನ್ ಬಲೆಗೆ ಬಿದ್ದ ಇಂಗ್ಲೆಂಡ್: ಪಾಕಿಸ್ತಾನಕ್ಕೆ ಸರಣಿ ಜಯ

ಏಜೆನ್ಸೀಸ್
Published 26 ಅಕ್ಟೋಬರ್ 2024, 14:08 IST
Last Updated 26 ಅಕ್ಟೋಬರ್ 2024, 14:08 IST
<div class="paragraphs"><p>ಸರಣಿ ಗೆದ್ದ ‍ಪಾಕಿಸ್ತಾನ</p></div>

ಸರಣಿ ಗೆದ್ದ ‍ಪಾಕಿಸ್ತಾನ

   

– ರಾಯಿಟರ್ಸ್ ಚಿತ್ರ

ರಾವಲ್ಪಿಂಡಿ: ಸ್ಪಿನ್ನರ್‌ಗಳಾದ ನೊಮಾನ್ ಅಲಿ ಮತ್ತು ಸಾಜಿದ್ ಖಾನ್‌ ದಾಳಿಗೆ ಇಂಗ್ಲೆಂಡ್ ತಂಡ ಕುಸಿಯಿತು. ಪಾಕಿಸ್ತಾನ ತಂಡ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಮೂರನೇ ದಿನವಾದ ಶನಿವಾರ ಭೋಜನವಿರಾಮಕ್ಕೆ ಮೊದಲೇ 9 ವಿಕೆಟ್‌ಗಳಿಂದ ಗೆದ್ದುಕೊಂಡಿತು.

ADVERTISEMENT

ಎಡಗೈ ಸ್ಪಿನ್ನರ್ ನೊಮಾನ್ ಅಲಿ 42 ರನ್ನಿಗೆ 6 ವಿಕೆಟ್‌ ಪಡೆದರೆ, ಆಫ್‌ ಬ್ರೇಕ್‌ ಬೌಲರ್‌ ಸಾಜಿದ್ ಖಾನ್ 69 ರನ್ನಿಗೆ 4 ವಿಕೆಟ್ ಪಡೆದು ಇಂಗ್ಲೆಂಡ್‌ನ ಎಲ್ಲ ವಿಕೆಟ್‌ಗಳನ್ನು ತಮ್ಮೊಳಗೆ ಹಂಚಿಕೊಂಡರು. 3 ವಿಕೆಟ್‌ಗೆ 24 ರನ್‌ಗಳೊಡನೆ ದಿನದಾಟ ಮುಂದುವರಿಸಿದ ಇಂಗ್ಲೆಂಡ್ 37.2 ಓವರುಗಳಲ್ಲಿ 112 ರನ್‌ಗಳಿಗೆ ಕುಸಿಯಿತು. ಶುಕ್ರವಾರ ಅಜೇಯರಾಗಿದ್ದ ಜೋ ರೂಟ್‌ (33, 52ಎ) ಮತ್ತು ಹ್ಯಾರಿ ಬ್ರೂಕ್ (26, 40ಎ) ನಾಲ್ಕನೇ ವಿಕೆಟ್‌ಗೆ 46 ರನ್ ಸೇರಿದರು. ನಂತರ ಇಂಗ್ಲೆಂಡ್‌ ಕುಸಿಯಿತು.

ಮೊದಲ ಇನಿಂಗ್ಸ್‌ನಲ್ಲಿ 77 ರನ್‌ ಮುನ್ನಡೆ ಸಂಪಾದಿಸಿದ್ದ ಪಾಕಿಸ್ತಾನ ಗೆಲುವಿಗೆ ಬೇಕಿದ್ದ 36 ರನ್‌ಗಳನ್ನು 3.1 ಓವರುಗಳಲ್ಲಿ 1 ವಿಕೆಟ್‌ ನಷ್ಟದಲ್ಲಿ ತಲುಪಿತು. ನಾಯಕ ಶಾನ್ ಮಸೂದ್ ಲಗಬಗನೇ ಆಡಿ ನಾಲ್ಕು ಬೌಂಡರಿ, ಒಂದು ಸಿಕ್ಸರ್ ಇದ್ದ ಅಜೇಯ 23 ರನ್ ಗಳಿಸಿದರು.

ಪಾಕಿಸ್ತಾನ ಸರಣಿಯನ್ನು 2–1 ರಿಂದ ಗೆದ್ದುಕೊಂಡಿತು.

ಮುಲ್ತಾನ್‌ನಲ್ಲಿ ಮೊದಲ ಟೆಸ್ಟ್‌ ಪಂದ್ಯವನ್ನು ಇನಿಂಗ್ಸ್‌ ಅಂತರದಲ್ಲಿ ಸೋತ ಬಳಿಕ ಹಿರಿಯ ಕ್ರಿಕೆಟಿಗರ ಆಕ್ರೋಶಕ್ಕೆ ಒಳಗಾದ ಪಾಕಿಸ್ತಾನ ಆಯ್ಕೆ ಮಂಡಳಿ, ಶಾಹಿನ್ ಶಾ ಅಫ್ರೀದಿ ಮತ್ತು ನಸೀಮ್ ಶಾ ಅವರನ್ನು ಕೈಬಿಟ್ಟಿತು. ಅವರ ಬದಲು ತಂಡ ಸೇರಿಕೊಂಡ ನೊಮಾನ್ ಮತ್ತು ಸಾಜಿದ್ 2 ಟೆಸ್ಟ್‌ಗಳಲ್ಲಿ 39 ವಿಕೆಟ್‌ಗಳನ್ನು ತಮ್ಮೊಳಗೆ ಬಾಚಿಕೊಂಡರು.

ಸ್ಕೋರುಗಳು: ಇಂಗ್ಲೆಂಡ್‌: 267 ಮತ್ತು 37.2 ಓವರುಗಳಲ್ಲಿ 112 (ಜೋ ರೂಟ್‌ 33, ಹ್ಯಾರಿ ಬ್ರೂಕ್‌ 26; ನೊಮಾನ್ ಅಲಿ 42ಕ್ಕೆ6, ಸಾಜಿದ್ ಖಾನ್‌ 69ಕ್ಕೆ4); ಪಾಕಿಸ್ತಾನ: 344 ಮತ್ತು 3.1 ಓವರುಗಳಲ್ಲಿ 1 ವಿಕೆಟ್‌ಗೆ 37 (ಶಾನ್ ಮಸೂದ್‌ ಔಟಾಗದೇ 23). ಪಂದ್ಯದ ಆಟಗಾರ: ಸಾದ್ ಶಕೀಲ್ (134).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.