ಸಿಡ್ನಿ: ಏಳು ದಶಕಗಳಿಂದ ಕಾದಿದ್ದ ಕ್ಷಣ ಸೋಮವಾರ ಬಂದಿತು. ಆಸ್ಟ್ರೇಲಿಯಾದ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ಭಾರತ ತಂಡವು ಕುಣಿದು ಕುಪ್ಪಳಿಸಿತು. ಮಿರಿಮಿರಿ ಮಿರುಗುವ ಟ್ರೋಫಿಗೆ ಮುತ್ತಿಕ್ಕಿ ಸಂಭ್ರಮಿಸಿತು.
ಆಸ್ಟ್ರೇಲಿಯಾ ತಂಡವನ್ನು ವಿಶ್ವದ ಯಾವುದೇ ಭಾಗದಲ್ಲಿಯೂ ಸೋಲಿಸುವುದು ಕಠಿಣ ಸವಾಲು. ಇನ್ನು ಅದರ ನೆಲದಲ್ಲಿಯೇ ಮಣಿಸುವುದು ಸಣ್ಣ ಮಾತೇನಲ್ಲ. ಆದರೆ ಅ ಸಾಧನೆಯನ್ನು ವಿರಾಟ್ ಕೊಹ್ಲಿ ನಾಯಕತ್ವದ ಬಳಗವು ಈ ಬಾರಿ ಮಾಡಿತು.
1948ರಲ್ಲಿ ಮೊದಲ ಬಾರಿಗೆ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಆಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಜಯ ಮಾತ್ರ ಒಲಿದಿರಲಿಲ್ಲ. ಆದರೆ ಇದೀಗ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ 2–1ರಿಂದ ಭಾರತವು ಗೆದ್ದಿತು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಕೊನೆಯ ಪಂದ್ಯದ ಬಹುತೇಕ ಅವಧಿಯು ಮಳೆಯಲ್ಲಿ ಕೊಚ್ಚಿಹೋಯಿತು. ಇಲ್ಲದಿದ್ದರೆ 3–1ರ ಅಂತರ ಜಯ ಸಾಧಿಸುವ ಸಾಧ್ಯತೆ ಭಾರತಕ್ಕೆ ಇತ್ತು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ವಿರಾಟ್ ಪಡೆಯು 7 ವಿಕೆಟ್‌ಗಳಿಗೆ 622 ರನ್ ಗಳಿಸಿ ಡಿಕ್ಲೆರ್ ಮಾಡಿಕೊಂಡಿತ್ತು. ಚೈನಾಮನ್ ಬೌಲರ್ ಕುಲದೀಪ್ ಯಾದವ್ ಮೋಡಿಗೆ ತತ್ತರಿಸಿದ್ದ ಆಸ್ಟ್ರೇಲಿಯಾವು ಕೇವಲ 300 ರನ್ ಗಳಿಗೆ ಪತನವಾಗಿತ್ತು.
ಭಾನುವಾರ ಫಾಲೋ ಆನ್ ಅನುಭವಿಸಿತ್ತು. ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿತ್ತು. ಆದರೆ ಸೋಮವಾರ ಬೆಳಿಗ್ಗೆಯಿಂದ ಸುರಿದ ಮಳೆಯಿಂದಾಗಿ ಒಂದು ಎಸೆತದ ಆಟವೂ ನಡೆಯಲಿಲ್ಲ. ಮಧ್ಯಾಹ್ನದವರೆಗೆ ಕಾದು ನೋಡಿದ ಅಂಪೈರ್‌ಗಳು ಪಂದ್ಯ
ಸ್ಥಗಿತಗೊಳಿಸಿದರು.
ಸರಣಿಯ ಮೊದಲ ಮತ್ತು ಮೂರನೇ ಪಂದ್ಯವನ್ನು ಗೆದ್ದಿದ್ದ ಭಾರತ ತಂಡವು ಇತಿಹಾಸ ಬರೆಯಿತು.
ಒಟ್ಟು 521 ರನ್ ಗಳಿಸಿದ ಚೇತೇಶ್ವರ್ ಪೂಜಾರ ಸರಣಿ ಶ್ರೇಷ್ಠ ಗೌರವ ಗಳಿಸಿದರು. ಅವರು ಮೂರು ಶತಕಗಳನ್ನು ದಾಖಲಿಸಿದ್ದರು. ಅವರು ಪ್ರಶಸ್ತಿ ಸ್ವೀಕರಿಸಲು ವೇದಿಕೆ ಏರಿದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಭಾರತ ಮತ್ತು ಆಸ್ಟ್ರೇಲಿಯಾದ ಬೆಂಬಲಿಗರು ಚಪ್ಪಾಳೆ ತಟ್ಟಿ ಶುಭ ಕೋರಿದರು.
ಪೂಜಾರ ಬ್ಯಾಟಿಂಗ್ ಮತ್ತು ನೃತ್ಯದ ಝಲಕ್: ಸೋಮವಾರ ಸರಣಿ ಗೆಲುವಿನ ಸಂಭ್ರಮ ಆರಂಭವಾಗಿದ್ದು ಭಾರತದ ಆಟಗಾರರ ಡ್ಯಾನ್ಸ್ ಮೂಲಕ. ರಿಷಭ್ ಪಂತ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಉಳಿದ ಆಟಗಾರರು ಹೆಜ್ಜೆ ಹಾಕಿದರು. ವಿನೂತನ ರೀತಿಯಲ್ಲಿ ಈ ನೃತ್ಯವನ್ನು ಪ್ರದರ್ಶಿಸಿದರು. ಆದರೆ, ಚೇತೇಶ್ವರ್ ಪೂಜಾರ ಅವರು ಡ್ಯಾನ್ಸ್ ಮಾಡಲು ನಾಚಿಕೊಂಡರು.
ನಂತರ ಸುದ್ದಿಗೋಷ್ಠಿಯಲ್ಲಿ ಈ ನೃತ್ಯದ ಕುರಿತು ಮಾತನಾಡಿದ ವಿರಾಟ್, ‘ಪೂಜಾರ ನಡೆಯುವಾಗ ಕೈಗಳನ್ನು ಹೆಚ್ಚು ಅಲುಗಾಡಿಸುವುದಿಲ್ಲ. ಅವರು ನೇರವಾಗಿ ನಡೆಯುತ್ತಾರೆ. ಅವರ ನಡಿಗೆಯನ್ನೇ ಅನುಕರಿಸುವಂತಹ ನೃತ್ಯವನ್ನು ರಿಷಭ್ ಪಂತ್ ಸಂಯೋಜಿಸಿದ್ದರು. ಅವರನ್ನೇ ಕೇಳಬೇಕು’ ಎಂದರು. ಇಡೀ ಗೋಷ್ಠಿಯು ನಗೆಗಡಲಲ್ಲಿ ತೇಲಿತು.
ಮಯಂಕ್‌ಗೆ ಟ್ರೋಫಿ ನೀಡಿದ ವಿರಾಟ್
ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಅಲನ್ ಬಾರ್ಡರ್ ಅವರಿಂದ ಟ್ರೋಫಿ ಸ್ವೀಕರಿಸಿದ ವಿರಾಟ್ ಕೊಹ್ಲಿ ಅವರು, ನೇರ ತಂಡದ ಆಟಗಾರರ ಬಳಿ ತೆರಳಿ ಮಯಂಕ್ ಅಗರವಾಲ್ ಕೈಗಿತ್ತರು. ಒಂದು ಕ್ಷಣ ಪುಳಕಿತರಾದ ಮಯಂಕ್ ನಂತರ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದರು. ಅವರೊಂದಿಗೆ ಉಳಿದ ಆಟಗಾರರು ಕುಣಿದಾಡಿದರು.
ಈ ಸರಣಿಯಲ್ಲಿ ಕರ್ನಾಟಕದ ಮಯಂಕ್ ಪದಾರ್ಪಣೆ ಮಾಡಿದ್ದರು. ಮೆಲ್ಬರ್ನ್‌ನಲ್ಲಿ ತಮ್ಮ ಮೊದಲ ಇನಿಂಗ್ಸ್‌ನಲ್ಲಿಯೇ 76 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 42 ರನ್ ದಾಖಲಿಸಿದ್ದರು. ಸಿಡ್ನಿಯಲ್ಲಿಯೂ ಅವರು ಅರ್ಧಶತಕ ಹೊಡೆದಿದ್ದರು.
ಹೋದ ವರ್ಷ ಭಾರತ ತಂಡವು ಏಷ್ಯಾ ಕಪ್ ಗೆದ್ದಿತ್ತು. ಆ ಸಂದರ್ಭದಲ್ಲಿ ನಡೆದಿದ್ದ ವಿಜಯೋತ್ಸವದಲ್ಲಿ ಯುವ ಆಟಗಾರ ಖಲೀಲ್ ಅಹಮದ್ ಅವರ ಕೈಗೆ ಟ್ರೋಫಿ ನೀಡುವಂತೆ ನಾಯಕ ರೋಹಿತ್ ಶರ್ಮಾ ಅವರಿಗೆ ಮಹೇಂದ್ರಸಿಂಗ್ ಧೋನಿ ಹೇಳಿದ್ದರು. ಟೂರ್ನಿಯ ನಂತರ ಸ್ವತಃ ಖಲೀಲ್ ಈ ವಿಷಯ ಬಹಿರಂಗ ಮಾಡಿದ್ದರು.
ಪ್ರೀತಿಯ ಎಡವಟ್ಟು
ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ಭಾರತ ತಂಡ ವನ್ನು ಅಭಿನಂದಿಸುವ ಭರದಲ್ಲಿ ಬಾಲಿ ವುಡ್ ನಟಿ ಪ್ರೀತಿ ಜಿಂಟಾ ಅವರು ಲೋಪ ವೊಂದನ್ನು ಮಾಡಿ ಟ್ವಿಟರ್ ನಲ್ಲಿ ಟೀಕೆಗೊಳಗಾಗಿದ್ದಾರೆ.
‘ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯ ಜಯಿಸಿದ ಏಷ್ಯಾದ ಮೊದಲ ತಂಡ, ಭಾರತಕ್ಕೆ ಅಭಿನಂದನೆ’ ಎಂದು ಪ್ರೀತಿ ಟ್ವೀಟ್ ಮಾಡಿದ್ದರು. ಆದರೆ ಅವರು ಪಂದ್ಯ ಎಂದು ಬಳಸುವ ಬದಲು ಸರಣಿ ಎಂದು ಬಳಸಬೇಕಿತ್ತು. ಇದನ್ನು ಗಮ ನಿಸಿದ್ದ ಕೆಲವರು ಪ್ರೀತಿಯವರನ್ನು ವ್ಯಂಗ್ಯ ಮಾಡಿದ್ದಾರೆ. ನಟಿ ಪ್ರೀತಿ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸಹಮಾಲೀಕರಾಗಿದ್ದಾರೆ.
**
ಇದು ಐತಿಹಾಸಿಕ ದಿನ
ಭಾರತ ಕ್ರಿಕೆಟ್ ಇತಿಹಾಸದಲ್ಲಿ ಇವತ್ತು ಐತಿಹಾಸಿಕ ದಿನ.ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿಶಾಸ್ತ್ರಿ ಮತ್ತು ಆಟಗಾರರು ಉತ್ತಮವಾಗಿ ಆಡಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಬಹಳಷ್ಟು ರನ್‌ಗಳನ್ನು ಗಳಿಸಿದ್ದ ಮಯಂಕ್ ಅಗರವಾಲ್ ಅವರಿಗೆ ಅವಕಾಶ ಸಿಕ್ಕಿತ್ತು. ಅವರೂ ತಮ್ಮ ಸಾಮರ್ಥ್ಯವನ್ನು ಸಾಬೀತುಮಾಡಿದರು. ಜಸ್‌ಪ್ರೀತ್ ಬೂಮ್ರಾ, ಚೇತೇಶ್ವರ್ ಪೂಜಾರ ಅವರ ಆಟವೂ ಅಮೋಘವಾಗಿತ್ತು. ನಮ್ಮಲ್ಲಿ ದೇಶಿ ಕ್ರಿಕೆಟ್ ಪದ್ಧತಿ ಬಲಿಷ್ಠವಾಗಿದೆ. ವಯೋಮಿತಿಯ ವಿಭಾಗಗಳು ಮತ್ತು ಬೇರೆ ಬೇರೆ ಟೂರ್ನಿಗಳು ನಡೆಯುತ್ತವೆ. ಇದರಿಂದಾಗಿ ಪ್ರತಿಭಾನ್ವಿತ ಆಟಗಾರರು ರೂಪುಗೊಳ್ಳುತ್ತಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿ ಹೆಚ್ಚಿದೆ. ಅಧ್ದರಿಂದ ಉತ್ತಮ ಆಟ ಹೊರಹೊಮ್ಮುತ್ತಿದೆ. ಇದರಿಂದಾಗಿ ಭಾರತದ ಕ್ರಿಕೆಟ್ ಭವಿಷ್ಯ ಉಜ್ವಲವಾಗಿದೆ.
-ಬ್ರಿಜೇಶ್ ಪಟೇಲ್,ಹಿರಿಯ ಕ್ರಿಕೆಟಿಗ
**
ಆಲ್‌ರೌಂಡ್ ಆಟದ ಸಿಹಿಫಲ
ಭಾರತ ತಂಡವು ಶ್ರೇಷ್ಠ ಆಟವಾಡಿದೆ. ಆಲ್‌ರೌಂಡ್ ಪ್ರದರ್ಶನ ನೀಡಿ ಐತಿಹಾಸಿಕ ಸರಣಿ ಜಯ ಸಾಧಿಸಿದೆ. ಹೀಗೆ ಉತ್ತಮ ಆಟ ಮುಂದುವರಿಸಿಕೊಂಡು ಹೋದರೆ ಸಾಕು. ಖಚಿತವಾದ ಯೋಜನೆ ಮತ್ತು ತಂತ್ರಗಾರಿಕೆಯಿಂದ ನಿಶ್ಚಿತವಾಗಿಯೂ ಉತ್ತಮ ಫಲಿತಾಂಶ ಸಿಗುತ್ತದೆ. ಪ್ರತಿಯೊಂದು ಸರಣಿಯೂ ಭಿನ್ನವಾದದ್ದು. ಏಕೆಂದರೆ ಎದುರಾಳಿ ಆಟಗಾರರು ಬೇರೆ ಬೇರೆ ಆಗಿರುತ್ತಾರೆ. ಆದ್ದರಿಂದ ಹೋಲಿಕೆ ಸರಿಯಾಗುವುದಿಲ್ಲ.
-ಬಿ.ಎಸ್. ಚಂದ್ರಶೇಖರ್,ಹಿರಿಯ ಕ್ರಿಕೆಟಿಗ
*
ಅವಿಸ್ಮರಣೀಯ ಕ್ಷಣ
ಭಾರತ ಕ್ರಿಕೆಟ್‌ನಲ್ಲಿಯೇ ಇದು ಅತ್ಯಂತ ಅವಿಸ್ಮರಣಿಯ ಮತ್ತು ಐತಿಹಾಸಿಕ ಕ್ಷಣ. ತಂಡದ ಎಲ್ಲ ಆಟಗಾರರೂ ಅಮೋಘ ಸಾಧನೆ ಮಾಡಿದ್ದಾರೆ.
-ಸುನಿಲ್ ಗಾವಸ್ಕರ್
**
ಭರವಸೆಯ ಆಟಗಾರ ಪಂತ್
ಈ ಸರಣಿಯಲ್ಲಿ ಭಾರತಕ್ಕೆ ಲಭಿಸಿರುವ ಅತ್ಯುತ್ತಮ ಆಟಗಾರ ರಿಷಭ್ ಪಂತ್. ಅವರು ಭವಿಷ್ಯದಲ್ಲಿ ಬೆಳಗುವ ಭರವಸೆ ಮೂಡಿಸಿದ್ದಾರೆ. ವಿದೇಶದ ಪಿಚ್‌ಗಳಲ್ಲಿ ಚೆನ್ನಾಗಿ ಆಡುವ ಕಲೆ ಕರಗತ ಮಾಡಿಕೊಂಡಿದ್ದಾರೆ.
-ಸೌರವ್ ಗಂಗೂಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.