ರಾಂಚಿ: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ತಮ್ಮ ಮೇಲೆ ನಂಬಿಕೆ ಇಟ್ಟು ಆಡಲು ಅವಕಾಶ ನೀಡಿದ್ದಕ್ಕಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರಿಗೆ ವಿಕೆಟ್ ಕೀಪರ್ ಧ್ರುವ್ ಜುರೆಲ್ ಧನ್ಯವಾದ ಸಲ್ಲಿಸಿದ್ದಾರೆ.
‘ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ರೋಹಿತ್ ಭಯ್ಯಾ, ರಾಹುಲ್ ಸರ್‌ಗೆ ಧನ್ಯವಾದ’ ಎಂದು ಜುರೆಲ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಂಚಿಯಲ್ಲಿ ಇಂಗ್ಲೆಂಡ್ ಎದುರು ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಇದರೊಂದಿಗೆ ಭಾರತವು ಐದು ಪಂದ್ಯಗಳ ಸರಣಿಯನ್ನು 3–1ರಿಂದ ಕೈವಶ ಮಾಡಿಕೊಂಡಿತು. ಸ್ವದೇಶದಲ್ಲಿ ಸತತ 17ನೇ ಟೆಸ್ಟ್ ಸರಣಿ ಜಯದ ದಾಖಲೆಯನ್ನೂ ಬರೆಯಿತು.
192 ರನ್‌ಗಳ ಗುರಿ ಸಾಧಾರಣ ಎಂದು ಮೇಲ್ನೋಟಕ್ಕೆ ಕಂಡಿತು. ಆದರೆ, ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ನಾಲ್ಕನೇ ದಿನದಾಟ ಸುಲಭವಾಗಿರಲಿಲ್ಲ. ಭಾರತದ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 84 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿದರು. ಬಳಿಕ (ಅಜೇಯ 52; 124ಎ) ಮತ್ತು ಧ್ರುವ ಜುರೇಲ್ (39; 77ಎ) ಅವರು ಉತ್ತಮ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಈ ಪಂದ್ಯದಲ್ಲಿ ವಿಜಯದ ರನ್ ಗಳಿಸಿದ ಧ್ರುವ ತಮ್ಮ ಜೀವನದ ಎರಡನೇ ಟೆಸ್ಟ್‌ನಲ್ಲಿಯೇ ಪಂದ್ರಶ್ರೇಷ್ಠ ಗೌರವ ಗಳಿಸಿದರು.
ಗಂಡು ಮಗುವಿನ ತಂದೆಯಾದ ಸಂಭ್ರಮದಲ್ಲಿರುವ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಸೋಮವಾರ ಭಾರತ ತಂಡದ ಜಯವನ್ನು ಶ್ಲಾಘಿಸಿದ್ದಾರೆ.
‘ಹೌದು (ಭಾರತದ ಬಾವುಟ) ಯುವ ತಂಡದಿಂದ ಅದ್ಭುತ ಸರಣಿ ಗೆಲುವು. ಕೆಚ್ಚು, ಧೃಡತೆ ಹಾಗೂ ಪುಟಿದೇಳುವ ಛಾತಿಯ ಯುವಪಡೆ ಇದು’ ಎಂದು ಕೊಹ್ಲಿ ‘ಎಕ್ಸ್’ನಲ್ಲಿ ಸಂದೇಶ ಹಾಕಿದ್ದಾರೆ. ವಿರಾಟ್ ಈ ಸರಣಿಯಲ್ಲಿ ಆಡಿಲ್ಲ.
ಭಾರತ ತಂಡದ ಜಯವನ್ನು ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
‘ಈಗ ಸ್ಕೋರು 3–ವನ್ (ಜಯ). ಮತ್ತೊಮ್ಮೆ ಭಾರತ ತಂಡವು ಒತ್ತಡದ ಪರಿಸ್ಥಿತಿಯಿಂದ ಮೇಲೆದ್ದು ಬಂದು ಜಯಿಸಿದೆ. ಇದು ಯುವಪಡೆಯ ಗೆಲುವು. ತಮ್ಮ ಟೆಸ್ಟ್ ಜೀವನದ ಮೊದಲ ಸ್ಪೆಲ್‌ನಲ್ಲಿಯೇ ಮಿಂಚಿದ ಆಕಾಶ ದೀಪ್, ಧ್ರುವ ಜುರೇಲ್ ಅವರು ಕುಲದೀಪ್ ಯಾದವ್ ಅವರೊಂದಿಗಿನ ಜೊತೆಯಾಟ, ಶುಭಮನ್ ಗಿಲ್ ಆಟ ಅಮೋಘ. ಸೀನಿಯರ್ ಆಟಗಾರರಾದ ಅಶ್ವಿನ್, ಜಡೇಜ ಮತ್ತು ರೋಹಿತ್ ಅವರೂ ತಮ್ಮ ಹೊಣೆಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.