ADVERTISEMENT

ಬೆಂಗಳೂರು ಅಭಿಮಾನಿಗಳಿಗೆ ಆಭಾರಿ: ರೋಹಿತ್ ಶರ್ಮಾ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 15:26 IST
Last Updated 20 ಅಕ್ಟೋಬರ್ 2024, 15:26 IST
<div class="paragraphs"><p>ರೋಹಿತ್ ಶರ್ಮಾ&nbsp;</p></div>

ರೋಹಿತ್ ಶರ್ಮಾ 

   

ಬೆಂಗಳೂರು: ‘ಪಂದ್ಯದ ಮೊದಲ ದಿನವಿಡೀ ಮಳೆ ಸುರಿಯಿತು. ಆದರೆ ಕ್ರಿಕೆಟ್ ಅಭಿಮಾನಿಗಳು ಆಟದ ಆರಂಭಕ್ಕಾಗಿ ಕಾಯುತ್ತಲೇ ಇದ್ದರು. ಪಂದ್ಯ ನಡೆದ ಎಲ್ಲ ದಿನವೂ ಅಪಾರ ಸಂಖ್ಯೆಯಲ್ಲಿ ಸೇರಿ ನಮ್ಮನ್ನು ಬೆಂಬಲಿಸಿದರು. ಅವರಿಗೆ ನಾನು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ಅವರ ಅಭಿಮಾನಕ್ಕೆ ಆಭಾರಿಯಾಗಿರುವೆ’–

ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಕ್ತಾಯವಾದ ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ ಮಾತುಗಳಿವು. 

ADVERTISEMENT

ಕಳೆದ ಬುಧವಾರ ಬೆಳಿಗ್ಗೆ ಮಳೆ ಸುರಿಯುತ್ತಿದ್ದರೂ ಅಭಿಮಾನಿಗಳು ಕ್ರೀಡಾಂಗಣಕ್ಕೆ ಲಗ್ಗೆ ಇಟ್ಟಿದ್ದರು. ಇಡೀ ದಿನ ಪಂದ್ಯ ಆರಂಭವಾಗದಿದ್ದರೂ ಸುಮಾರು 600ಕ್ಕೂ ಹೆಚ್ಚು ಜನರು ಗ್ಯಾಲರಿಯಲ್ಲಿ ಕಾದಿದ್ದರು. ಮೈದಾನದ ಹೊರಗೂ ತಮ್ಮ ನೆಚ್ಚಿನ ಆಟಗಾರರ ಆಗಮನ, ನಿರ್ಗಮನ ನೋಡಲು ಕಾದು ನಿಂತಿದ್ದರು. ಎರಡನೇ ದಿನ ಸುಮಾರು 7 ರಿಂದ 8 ಸಾವಿರ ಜನ ಸೇರಿದ್ದರು. ಕೊನೆಯ ಮೂರು ದಿನಗಳಲ್ಲಿ ಮಾತ್ರ 15 ರಿಂದ 17 ಸಾವಿರ ಜನರು ಪಂದ್ಯ ವೀಕ್ಷಿಸಿದರು. 

‘ಕ್ರಿಕೆಟ್‌ ಅಭಿಮಾನಿಗಳ ಬೆಂಬಲದಿಂದಲೇ ಆಟ ಬೆಳೆಯುತ್ತದೆ. ಆಟಗಾರರ ಬೆಳವಣಿಗೆಗೂ ಅವರ ಪ್ರೋತ್ಸಾಹವೇ ಕಾರಣ. ಈ ನಗರದ ಆಟಗಾರರು ತಮ್ಮ ನೆಚ್ಚಿನ ತಂಡಗಳನ್ನು ಬೆಂಬಲಿಸುವ ರೀತಿ ಅನನ್ಯವಾಗಿದೆ. ಅದರಲ್ಲೂ ಟೆಸ್ಟ್‌ ಕ್ರಿಕೆಟ್‌ಗೆ ಇಂತಹ ಬೆಂಬಲ ಸಂತಸ ತಂದಿದೆ’ ಎಂದರು. 

ಪಂದ್ಯದ ಫಲಿತಾಂಶದ ಕುರಿತು ಮಾತನಾಡಿದ ಅವರು, ‘ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೊದಲ ಪಂದ್ಯ ಸೋತಿದ್ದೆವು. ನಂತರ ನಾಲ್ಕು ಪಂದ್ಯಗಳನ್ನೂ ಜಯಿಸಿದ್ದೆವು. ಸೋಲಿನ ಬಗ್ಗೆ ಯೋಚಿಸುವುದಿಲ್ಲ. ಮುಂದಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಗೆಲ್ಲುವುದರ ಬಗ್ಗೆ ಮಾತ್ರ ಚಿಂತನೆ ನಡೆಸುತ್ತೇವೆ.  ಈ ಪಂದ್ಯದಲ್ಲಿ ಆ ಮೂರು ತಾಸುಗಳ ಆಟ (46ಕ್ಕೆ ಆಲೌಟ್) ನಮ್ಮ ಮನೋಬಲವನ್ನು ಕುಗ್ಗಿಸಲು ಬಿಡುವುದಿಲ್ಲ’ ಎಂದರು.

ಭಾನುವಾರ ಪಂದ್ಯ ವೀಕ್ಷಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳು  –ಪ್ರಜಾವಾಣಿ ಚಿತ್ರ

ಟೆಸ್ಟ್ ಕ್ರಿಕೆಟ್: ಭಾರತ ತಂಡಕ್ಕೆ ವಾಷಿಂಗ್ಟನ್ ಸುಂದರ್

ನ್ಯೂಜಿಲೆಂಡ್ ಎದುರಿನ ಸರಣಿಯ ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಲಾಗಿದೆ. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆ ಸ್ಥಾನ ನೀಡಲಾಗಿದೆ. 

ರಣಜಿ ಟ್ರೋಫಿ ಟೂರ್ನಿಯಲ್ಲಿ ದೆಹಲಿ ವಿರುದ್ಧದ ಪಂದ್ಯದಲ್ಲಿ ತಮಿಳುನಾಡಿನ ವಾಷಿಂಗ್ಟನ್ ಅವರು 152 ರನ್‌ ಗಳಿಸಿದ್ದರು. ಅದರ ನಂತರ ಅವರನ್ನು ಭಾರತ ತಂಡಕ್ಕೆ ಆಯ್ಕೆಗಾರರು ಪರಿಗಣಿಸಿದ್ದಾರೆ. 2021ರಲ್ಲಿ ಗಾಬಾದಲ್ಲಿ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ಭಾರತದ  ಐತಿಹಾಸಿಕ ಜಯದಲ್ಲಿ ವಾಷಿಂಗ್ಟನ್‌ ಮಹತ್ವದ ಪಾತ್ರ ವಹಿಸಿದ್ದರು. 25 ವರ್ಷದ ವಾಷಿಂಗ್ಟನ್ ನಾಲ್ಕು ಟೆಸ್ಟ್ 22 ಏಕದಿನ ಮತ್ತು 52 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದೇ 24ರಿಂದ ಪುಣೆಯಲ್ಲಿ ಎರಡನೇ ಟೆಸ್ಟ್ ಆರಂಭವಾಗುವುದು. 

ಮಳೆಯಿಂದ ಪಂದ್ಯ ವಿಳಂಬ ಭಾನುವಾರ ಬೆಳಿಗ್ಗೆ ಮಳೆ ಸುರಿದ ಕಾರಣ ಕೊನೆಯ ದಿನದಾಟವು ವಿಳಂಬವಾಗಿ ಶುರುವಾಯಿತು. 9.15ಕ್ಕೆ ಆರಂಭವಾಗಬೇಕಿದ್ದ ಆಟವನ್ನು 10.15ಕ್ಕೆ ಆರಂಭಿಸಲಾಯಿತು. ಬೆಂಗಳೂರಿನಲ್ಲಿ ಬೆಳಗಿನ ಜಾವದಿಂದಲೇ ಮಳೆ ಆರಂಭವಾಗಿತ್ತು.  9.45ಕ್ಕೆ ಕ್ರೀಡಾಂಗಣವನ್ನು ಪರಿಶೀಲಿಸಿದ ಅಂಪೈರ್‌ಗಳು ಪಂದ್ಯ ನಡೆಸಲು ಸೂಚನೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.