ತರೂಬಾ (ಟ್ರಿನಿಡಾಡ್): ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ವಿಶ್ವಕಪ್ ಸೆಮಿಫೈನಲ್ ಆಡಲು ಬಳಸಿದ ಪಿಚ್ ಬಗ್ಗೆ ಅಫ್ಗಾನಿಸ್ತಾನದ ಕೋಚ್ ಜೊನಾಥನ್ ಟ್ರಾಟ್ ಆಕ್ರೋಶಗೊಂಡಿದ್ದಾರೆ. ಇಂಥ ದೊಡ್ಡಮಟ್ಟದ ಪಂದ್ಯಕ್ಕೆ ಈ ಪಿಚ್ ಯೋಗ್ಯವಾಗಿರಲಿಲ್ಲ ಎಂದಿದ್ದಾರೆ.
ಇಲ್ಲಿನ ಬ್ರಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದ ಪಿಚ್ ಅಸಮಾನ ಬೌನ್ಸ್ ಮತ್ತು ಅನಿರೀಕ್ಷಿತ ಸೀಮ್ ಮೂವ್‌ಮೆಂಟ್‌ಗಳಿಂದ ಬ್ಯಾಟ್ಸ್‌ಮನ್ನರ ಪಾಲಿಗೆ ದುಃಸ್ವಪ್ನವಾಗಿತ್ತು ಎಂದು ಅವರು ಟೀಕಿಸಿದರು. ಅಫ್ಗಾನಿಸ್ತಾನ ಮೊದಲು ಆಡಿ 56 ರನ್‌ಗಳಿಗೆ ಪತನಗೊಂಡಿತ್ತು.
ದಕ್ಷಿಣ ಆಫ್ರಿಕಾ ಒಂದು ವಿಕೆಟ್ ನಷ್ಟದಲ್ಲಿ ಗುರಿ ತಲುಪಿದರೂ ಆ ತಂಡದ ಬ್ಯಾಟರ್‌ಗಳೂ ಪರದಾಡಿದರು. ಗೆಲ್ಲಲು 53 ಎಸೆತಗಳು ಬೇಕಾದವು.
‘ಪಿಚ್ ಸ್ಪಿನ್ ಅಥವಾ ಸೀಮ್ ಚಲನೆಗೆ ಅವಕಾಶವಿಲ್ಲದೇ ಪೂರ್ಣ ಸಪಾಟು ಇರಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಬ್ಯಾಟರ್‌ಗಳಿಗೆ ಮುಂದಡಿ ಇಟ್ಟು ಆಡಲು ಯೋಚಿಸುವಂತೆ ಆಗಬಾರದು ಎಂದಷ್ಟೇ ನನ್ನ ಮಾತಿನ ಅರ್ಥ’ ಎಂದು ವಿವರಿಸಿದರು.
‘ಟಿ20 ಕ್ರಿಕೆಟ್ ಇರುವುದೇ ಆಕ್ರಮಣದ ಆಟವಾಡಲು, ರನ್‌ಗಳನ್ನು ಪೇರಿಸಲು ಮತ್ತು ವಿಕೆಟ್‌ಳನ್ನು ಪಡೆಯುವುದಕ್ಕೆ. ಹೇಗೆ ಅಸ್ತಿತ್ವ ಕಂಡುಕೊಳ್ಳಬೇಕು ಎನ್ನುವ ರೀತಿ ಇರಬಾದರು’ ಎಂದು ಇಂಗ್ಲೆಂಡ್‌ನ ಮಾಜಿ ಆಟಗಾರ ಹೇಳಿದರು.
ತರೂಬಾ ಪಿಚ್‌ನಲ್ಲಿ ಈ ಬಾರಿ ಐದು ಪಂದ್ಯಗಳು ನಡೆದಿವೆ. ಮೊದಲು ಆಡಿದ ತಂಡ ಒಮ್ಮೆ ಮಾತ್ರ 100 ರನ್ ದಾಟಿದೆ. ಆ ಸಂದರ್ಭದಲ್ಲಿ ವೆಸ್ಟ್ ಇಂಡೀಸ್, ಇಲ್ಲಿ ನ್ಯೂಜಿಲೆಂಡ್ ವಿರುದ್ಧ 6 ವಿಕೆಟ್‌ಗೆ 149 ರನ್ ಗಳಿಸಿತ್ತು.
ಮತ್ತೆ ಬಯಸಲ್ಲ: ಇದೇ ಪಿಚ್‌ನಲ್ಲಿ ಮತ್ತೊಂದು ಪಂದ್ಯ ಆಡಲು ಬಯಸುವುದಿಲ್ಲ ಎಂದು ದಕ್ಷಿಣ ಆಫ್ರಿಕಾ ನಾಯಕ ಏಡನ್ ಮರ್ಕರಂ ಹೇಳಿದರು. ಆದರೆ ಸವಾಲಿನ ಪಿಚ್‌ನಲ್ಲಿ ತಂಡ ಗೆದ್ದು ನಿಟ್ಟುಸಿರುಬಿಡುವಂತೆ ಮಾಡಿದೆ ಎಂದರು.
ಪಿಚ್‌ನಲ್ಲಿ ಚೆಂಡು ಬೌನ್ಸ್ ಆದ ಮೇಲೆ ಸಾಕಷ್ಟು ಹೊರಳುತ್ತಿದ್ದು, ದಕ್ಷಿಣ ಆಫ್ರಿಕಾದ ವೇಗಿಗಳು ಪರಿಸ್ಥಿತಿಯ ಲಾಭವನ್ನು ಗರಿಷ್ಠ ಮಟ್ಟಿಗೆ ಪಡೆದರು.
‘ದಣಿದಿದ್ದರು’
ಅಫ್ಗನ್ ಆಟಗಾರರು ದಣಿದಿದ್ದರು. ಭಾವನಾತ್ಮಕವಾಗಿ ಬಳಲಿದ್ದರು. ಆದರೆ ಸೋಲಿಗೆ ಅದೇ ನೆಪವೆಂದು ಹೇಳುವುದಿಲ್ಲ ಎಂದರು. ಮೊದಲ ಬಾರಿ ಸೆಮಿಫೈನಲ್ ಆಡುವ 40 ಗಂಟೆಗಳ ಮೊದಲು ತಂಡಕ್ಕೆ ಸರಿಯಾಗಿ ಬಿಡುವು ದೊರೆಯಲಿಲ್ಲ ಎಂದೂ ಹೇಳಿದರು.
ಕಿಂಗ್ಸ್‌ಟೌನ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಮಂಗಳವಾರ ರಾತ್ರಿ ಸೂಪರ್ ಎಂಟು ಹಂತದ ಪಂದ್ಯ ಆಡಿದ ನಂತರ ಅಫ್ಗಾನಿಸ್ತಾನ ತಂಡ ನಸುಕಿನ 3 ಗಂಟೆಗೆ ಹೋಟೆಲ್ ತಲುಪಿತ್ತು. ಎಂಟು ಗಂಟೆಗೆ ಮತ್ತೆ ಹೋಟೆಲ್‌ನಿಂದ ಹೊರಡಬೇಕಾಗಿತ್ತು. ಹೀಗಾಗಿ ಆಟಗಾರರಿಗೆ ಸರಿಯಾಗಿ ನಿದ್ದೆಯಾಗಿರಲಿಲ್ಲ. ಆಟಗಾರರಿಗೆ ಈ ಪರಿಸರ ಹೊಸದು. ಅವರು ದಣಿದಿದ್ದರು ಎಂದು ಟ್ರಾಟ್ ಹೇಳಿದರು.
ತರೂಬಾಕ್ಕೆ ತೆರಳಬೇಕದ ವಿಮಾನ ನಾಲ್ಕು ಗಂಟೆ ವಿಳಂಬವಾಯಿತು. ‘ಹೀಗಾಗಿ ಆಟಗಾರರಿಗೆ ಸರಿಯಾಗಿ ನಿದ್ದೆ ಆಗಿಲ್ಲ‘ ಎಂದು ರಶೀದ್ ಖಾನ್ ಟಾಸ್ ವೇಳೆ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.