ADVERTISEMENT

ಸ್ಟುವರ್ಟ್‌ ಬ್ರಾಡ್‌ಗೆ ‘ಕೊನೆ’ ವಿಕೆಟ್; ಇಂಗ್ಲೆಂಡ್‌ಗೆ ರೋಚಕ ಗೆಲುವು

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 18:40 IST
Last Updated 31 ಜುಲೈ 2023, 18:40 IST
   

ಲಂಡನ್‌: ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್‌ ಬ್ರಾಡ್ ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ‘ಫಿನಿಷರ್’ ಕಾರ್ಯವನ್ನು ಅಚ್ಚುಕಟ್ಟಾಗಿ ಮುಗಿಸಿದರು.

ಇಲ್ಲಿ ನಡೆದ ಆ್ಯಷಸ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಕ್ರಿಸ್‌ ವೋಕ್ಸ್‌ (50ಕ್ಕೆ4) ಮತ್ತು ಮೊಯೀನ್‌ ಅಲಿ (76ಕ್ಕೆ3) ಅವರು ಆಸ್ಟ್ರೇಲಿಯಾ ತಂಡದ ಪ್ರಮುಖ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳಿಸಿದರು. ಕೊನೆಯ ಘಟ್ಟದಲ್ಲಿ ಬೌಲರ್‌ಗಳಿಗೆ ಸವಾಲೊಡ್ಡಿದ ಟಾಡ್‌ ಮರ್ಫಿ ಮತ್ತು ಅಲೆಕ್ಸ್ ಕ್ಯಾರಿ ಅವರ ವಿಕೆಟ್ ಪಡೆಯುವ ಮೂಲಕ ಸ್ಟುವರ್ಟ್ ಬ್ರಾಡ್ ಪಂದ್ಯಕ್ಕೆ ತೆರೆಯೆಳೆದರು. ಅದರೊಂದಿಗೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಕೂಡ ಹೇಳಿದರು.

ಇಂಗ್ಲೆಂಡ್ ತಂಡವು 49 ರನ್‌ಗಳಿಂದ ಗೆದ್ದಿತು.  ಐದು ಪಂದ್ಯಗಳ ಸರಣಿಯಲ್ಲಿ 2–2ರಲ್ಲಿ ಸಮಬಲ ಸಾಧಿಸಿತು.  ಆದರೆ ಕಳೆದ ಬಾರಿಯ ಸರಣಿ ಗೆದ್ದಿರುವ ಆಸ್ಟ್ರೇಲಿಯಾ ತಂಡ, ಆ್ಯಷಸ್‌ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು.

ADVERTISEMENT

ದಿ ಓವಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 384 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಅಂತಿಮ ದಿನವಾದ ಸೋಮವಾರ  94.4 ಓವರ್‌ಗಳಲ್ಲಿ 334 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.

ವಿಕೆಟ್‌ ನಷ್ಟವಿಲ್ಲದೆ 135 ರನ್‌ಗಳಿಂದ ಆಟ ಆರಂಭಿಸಿದ್ದ ಆಸ್ಟ್ರೇಲಿಯಾ, ಇಬ್ಬರೂ ಆರಂಭಿಕ ಬ್ಯಾಟರ್‌ಗಳನ್ನು ಬೇಗನೇ ಕಳೆದುಕೊಂಡಿತು. ಡೇವಿಡ್‌ ವಾರ್ನರ್‌ 60 ರನ್‌ ಗಳಿಸಿ ಔಟಾದರೆ, ಉಸ್ಮಾನ್‌ ಖ್ವಾಜಾ 72 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. ಇಬ್ಬರನ್ನೂ ಕ್ರಿಸ್‌ ವೋಕ್ಸ್‌ ಪೆವಿಲಿಯನ್‌ಗೆ ಕಳುಹಿಸಿದರು. ಮಾರ್ನಸ್‌ ಲಾಬುಶೇನ್‌ (13) ಕೂಡಾ ಹೆಚ್ಚುಹೊತ್ತು ನಿಲ್ಲಲಿಲ್ಲ.

ಸ್ಟೀವ್ ಸ್ಮಿತ್‌ (54) ಮತ್ತು ಟ್ರಾವಿಸ್‌ ಹೆಡ್‌ (43) ಅವರು ನಾಲ್ಕನೇ ವಿಕೆಟ್‌ಗೆ 95 ರನ್‌ ಸೇರಿಸಿ ಆಸ್ಟ್ರೇಲಿಯಾದ ಗೆಲುವಿನ ಕನಸನ್ನು ಜೀವಂತವಾಗಿರಿಸಿಕೊಂಡರು. ಆದರೆ ಹೆಡ್‌ ವಿಕೆಟ್‌ ಪಡೆದು ಈ ಜತೆಯಾಟ ಮುರಿದ ಮೊಯೀನ್‌, ಇಂಗ್ಲೆಂಡ್‌ಗೆ ಮೇಲುಗೈ ತಂದಿತ್ತರು. 11 ರನ್‌ಗಳ ಅಂತರದಲ್ಲಿ ಮೂರು ವಿಕೆಟ್‌ಗಳು ಬಿದ್ದ ಕಾರಣ ಆಸ್ಟ್ರೇಲಿಯಾ ಒತ್ತಡಕ್ಕೆ ಸಿಲುಕಿತು. ಮಳೆಯ ಕಾರಣ ಅಂತಿಮ ದಿನದಾಟ ತಡವಾಗಿ ಆರಂಭವಾಯಿತು. ಭೋಜನ ಮತ್ತು ಚಹಾ ವಿರಾಮದ ನಡುವಿನ ಆಟವೂ ಮಳೆಯಿಂದ ನಡೆಯಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್: ಇಂಗ್ಲೆಂಡ್‌ 283. ಆಸ್ಟ್ರೇಲಿಯಾ 295. ಎರಡನೇ ಇನಿಂಗ್ಸ್: ಇಂಗ್ಲೆಂಡ್‌ 395. ಆಸ್ಟ್ರೇಲಿಯಾ 94.4 ಓವರ್‌ಗಳಲ್ಲಿ 334 (ಡೇವಿಡ್‌ ವಾರ್ನರ್ 60, ಉಸ್ಮಾನ್‌ ಖ್ವಾಜಾ 72, ಸ್ಟೀವ್‌ ಸ್ಮಿತ್‌ 54, ಟ್ರಾವಿಸ್‌ ಹೆಡ್‌ 43, ಅಲೆಕ್ಸ್ ಕ್ಯಾರಿ 28; ಕ್ರಿಸ್‌ ವೋಕ್ಸ್‌ 50ಕ್ಕೆ 4, ಮೊಯೀನ್‌ ಅಲಿ 76ಕ್ಕೆ 3, ಸ್ಟುವರ್ಟ್‌ ಬ್ರಾಡ್‌ 62ಕ್ಕೆ 2)

ಫಲಿತಾಂಶ: ಇಂಗ್ಲೆಂಡ್‌ಗೆ 49 ರನ್‌ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.