ಜೋಹಾನ್ಸ್‌ಬರ್ಗ್:ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ವಿವಾದಾತ್ಮಕ ರನೌಟ್ ತೀರ್ಪಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಬ್ಯಾಟ್ಸ್‌ಮನ್ ಫಕ್ರ್ ಜಮಾನ್ ಸ್ಪಷ್ಟನೆ ನೀಡಿದ್ದು, 'ನನ್ನದೇ ತಪ್ಪು' ಎಂದು ಹೇಳಿದ್ದಾರೆ.
ಎದುರಾಳಿ ತಂಡದ ಕ್ವಿಂಟನ್ಡಿ ಕಾಕ್, ತಪ್ಪು ಸನ್ನೆ ಮಾಡಿದ್ದರಿಂದ ಫಕ್ರ್ ಔಟಾಗಿದ್ದಾರೆಂಬುದು ಭಾರಿ ಚರ್ಚೆಯಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಫಕ್ರ್, 'ಡಿ ಕಾಕ್ ಯಾವುದೇ ತಪ್ಪು ಎಸಗಿದ್ದಾರೆಂದು ನನಗನಿಸುತ್ತಿಲ್ಲ' ಎಂದಿದ್ದಾರೆ.
ಪಾಕಿಸ್ತಾನ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 17 ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು.ದಕ್ಷಿಣ ಆಫ್ರಿಕಾ ಒಡ್ಡಿದ 342 ರನ್ ಗುರಿ ಬೆನ್ನತ್ತಿದ ಪಾಕಿಸ್ತಾನ, ಎಡಗೈ ಆರಂಭಿಕ ಫಕ್ರ್ ಜಮಾನ್ (193) ದಿಟ್ಟ ಹೋರಾಟದ ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 324 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
193 ರನ್ ಗಳಿಸಿದ್ದ ಫಕ್ರ್ ಜಮಾನ್ ಅವರು ವಿವಾದಾತ್ಮಕ ರೀತಿಯಲ್ಲಿ ರನೌಟ್ ಆಗಿದ್ದರು. ಇದುವೇ ಪಂದ್ಯದ ತಿರುವಿಗೆ ಕಾರಣವಾಗಿತ್ತು. ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಮೋಸ ಮಾಡಿದ ಕಾರಣ ಫಕ್ರ್ ಔಟಾಗಿದ್ದರು ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ:ಫಕ್ರ್ ಜಮಾನ್ ಹೋರಾಟ ವ್ಯರ್ಥ: ಪಾಕಿಸ್ತಾನಕ್ಕೆ ಸೋಲು
ಫಕ್ರ್ ಎರಡನೇ ರನ್ ಕದಿಯಲೆತ್ನಿಸುವಾಗ ವಿಕೆಟ್ ಬಳಿಯಿದ್ದ ಡಿ ಕಾಕ್, ಥ್ರೋ ನಾನ್-ಸ್ಟ್ರೈಕರ್‌ನತ್ತ ಸಾಗುತ್ತಿದೆ ಎಂಬುದನ್ನು ಸನ್ನೆ ಮಾಡುತ್ತಾರೆ. ಈ ಸಂದರ್ಭದಲ್ಲಿಓಟವನ್ನು ನಿಧಾನಗೊಳಿಸಿದ ಫಕ್ರ್ ಹಿಂತಿರುಗಿ ನೋಡುತ್ತಾರೆ. ಇನ್ನೊಂದೆಡೆ ಏಡೆನ್ ಮಾರ್ಕ್ರಂಅವರ ಥ್ರೋ ನೇರವಾಗಿ ವಿಕೆಟ್‌ಗೆ ಬಂದಪ್ಪಳಿಸುತ್ತದೆ. ಪರಿಣಾಮ ಫಕ್ರ್ ರನೌಟ್ ಆಗಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಾರೆ.
ಡಿ ಕಾಕ್ ಮೋಸ ಮಾಡಿದ್ದು, ಅವರ ವಿರುದ್ಧ ಐಸಿಸಿ ಕ್ರಮ ಕೈಗೊಳ್ಳಬೇಕೆಂದು ಬಲವಾದ ಬೇಡಿಕೆ ವ್ಯಕ್ತವಾಗಿದೆ. ಈ ನಡುವೆ ಫಕ್ರ್ ವಿವಾದದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
'ನನ್ನದೇ ತಪ್ಪು, ಮಗದೊಂದು ತುದಿಯಲ್ಲಿ ಹ್ಯಾರಿಸ್ ರೌಫ್ ತಲುಪಿದ್ದಾರೆಯೇ ಎಂಬುದನ್ನು ನೋಡುವುದರಲ್ಲೇ ಮಗ್ನವಾಗಿದ್ದೆ. ಅವರು ಎರಡನೇ ರನ್ ತಡವಾಗಿ ಓಡಲು ಆರಂಭಿಸಿದ್ದರು ಎಂದು ಭಾವಿಸಿದ್ದೆ. ಹಾಗಾಗಿ ಅವರು ಸಮಸ್ಯೆಯಲ್ಲಿದ್ದಾರೆಂದು ಅನಿಸಿತ್ತು. ಉಳಿದವು ಪಂದ್ಯ ರೆಫರಿಗೆ ಬಿಟ್ಟಿದ್ದು. ಕ್ವಿಂಟನ್ ಡಿ ಕಾಕ್ ಯಾವುದೇ ತಪ್ಪು ಎಸಗಿದ್ದಾರೆಂದು ನನಗನಿಸುತ್ತಿಲ್ಲ' ಎಂದು ಹೇಳಿದ್ದಾರೆ.
'ದ್ವಿಶತಕ ಬಾರಿಸಲು ಸಾಧ್ಯವಾಗದೇ ಇರುವುದಕ್ಕೆ ನನಗೆ ಯಾವುದೇ ಬೇಸರವಿಲ್ಲ. ಪಂದ್ಯ ಸೋತಿರುವುದಕ್ಕೆ ಬೇಸರವಾಗಿದೆ. ಈ ಪಂದ್ಯ ಗೆದ್ದಿದ್ದರೆ ವಿಶೇಷವೆನಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ ದ್ವಿಶತಕದ ಬಗ್ಗೆ ಯೋಚಿಸದೆ ಪಂದ್ಯ ಗೆಲ್ಲಲು ಪ್ರಯತ್ನಿಸುತ್ತೇವೆ. ನನಗೆ ಪಂದ್ಯ ಗೆಲ್ಲಿಸಿಕೊಡಲು ಸಾಧ್ಯವಾಗಲಿಲ್ಲ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.