ADVERTISEMENT

ಕ್ರಿಕೆಟಿಗರ ನೋವು ಅಸಲಿ ಕಾರಣಗಳಿವು...

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2023, 20:30 IST
Last Updated 11 ನವೆಂಬರ್ 2023, 20:30 IST
<div class="paragraphs"><p>ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ವಿಶ್ವಕಪ್‌ 2023ರ ಟೂರ್ನಿಯಿಂದಲೇ ಹೊರಬಿದ್ದರು...</p></div>

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ವಿಶ್ವಕಪ್‌ 2023ರ ಟೂರ್ನಿಯಿಂದಲೇ ಹೊರಬಿದ್ದರು...

   

ಕ್ರಿಕೆಟಿಗರು ಅದರಲ್ಲೂ ಬೌಲರ್‌ಗಳು ಯಾತನೆ ಅನುಭವಿಸುವುದು ಇತ್ತೀಚೆಗೆ ಯಾಕೆ ಹೆಚ್ಚಾಗುತ್ತಿದೆ? ಕ್ರಿಕೆಟ್‌ ತಂಡದ ವೈದ್ಯರೇ ಅದಕ್ಕೆ ಕಾರಣಗಳನ್ನು ಇಲ್ಲಿ ಚರ್ಚಿಸಿದ್ದಾರೆ.

ವಿಶ್ವಕಪ್‌ ಕ್ರಿಕೆಟ್‌ನ ಕೊನೆಯ ಘಟ್ಟದಲ್ಲಿ ನಾವಿದ್ದೇವೆ. ಸೆಮಿಫೈನಲ್‌ಗೆ ಲಗ್ಗೆಇಟ್ಟಿರುವ ತಂಡಗಳ ಮೇಲೆ ಕಣ್ಣಿಟ್ಟಿರುವಂತೆಯೇ, ಗಾಯ ಅಥವಾ ನೋವಿನಿಂದ ಟೂರ್ನಿಯಿಂದಲೇ ಹೊರಗುಳಿದವರನ್ನೂ ಗಮನಿಸಿದವರಿದ್ದಾರೆ. ಹೊಸ ತಲೆಮಾರಿನ ಕ್ರಿಕೆಟರ್‌ಗಳಲ್ಲಿ ಗಾಯಗೊಳ್ಳುವ ಅಥವಾ ನೋವಿನಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅನೇಕರಿಗೆ ಅನಿಸುತ್ತಿದೆ. ಹೀಗೆ ಯಾಕೆ ಆಗುತ್ತಿದೆ ಎಂದು ಆಳಕ್ಕಿಳಿದು, ತಿಳಿದುಕೊಳ್ಳುವ ಯತ್ನ ಮಾಡೋಣ.

ADVERTISEMENT

ಗಾಯಗೊಳ್ಳುವುದು ಏಕೆ ಎಂದಾಗಲೆಲ್ಲ, ‘ರಿಸ್ಕ್‌ ಫ್ಯಾಕ್ಟರ್‌’ ಎಂಬ ಪದಪುಂಜಗಳು ಕಣ್ಣಿಗೆ ರಾಚುತ್ತವೆ. ಹೆಚ್ಚು ರಿಸ್ಕ್‌ ತೆಗೆದುಕೊಂಡಷ್ಟೂ ಗಾಯ ಅಥವಾ ನೋವು ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಂತ ಗಾಯಗೊಳ್ಳಲು ಇದೊಂದೇ ಕಾರಣ ಎಂದೇನೂ ಅಲ್ಲ. ಕ್ರಿಕೆಟಿಗರು ನೋವಿನಿಂದ ಬಳಲುತ್ತಿದ್ದರೆ, ಅದಕ್ಕೆ ಪೂರಕವಾದ ಹಲವು ಅಂಶಗಳಿವೆ ಎಂದೇ ಅರ್ಥ. ‘ರಿಸ್ಕ್‌ ಫ್ಯಾಕ್ಟರ್‌’ಗಳಲ್ಲಿ ಮಾರ್ಪಡಿಸಿಕೊಳ್ಳಬಹುದಾದ ಹಾಗೂ ಮಾರ್ಪಡಿಸಲಾಗದ ಎಂಬ ಎರಡು ಬಗೆಗಳಿವೆ. ಉದಾಹರಣೆಗೆ, ವಯಸ್ಸು, ಲಿಂಗ, ಜನಾಂಗ ಇವುಗಳಿಂದ ತಾನೇತಾನಾಗಿ ಬರುವಂತಹ ‘ರಿಸ್ಕ್‌ ಫ್ಯಾಕ್ಟರ್‌’ಗಳನ್ನು ಸುಧಾರಿಸಲು ಅಥವಾ ಮಾರ್ಪಡಿಸಲು ಸಾಧ್ಯವಿಲ್ಲ. ತರಬೇತಿಯ ಒತ್ತಡ, ಆಡುವ ತಂತ್ರ, ಪೂರಕ ತರಬೇತಿ, ವಿಶ್ರಾಂತಿ, ಚೇತರಿಕೆ, ಪೌಷ್ಟಿಕಾಂಶ, ಆಟಗಾರರ ದೇಹ ಪ್ರಕೃತಿ ಇವೆಲ್ಲವೂ ಮಾರ್ಪಾಟು ಮಾಡಿಕೊಳ್ಳಬಹುದಾದ ‘ರಿಸ್ಕ್‌ ಫ್ಯಾಕ್ಟರ್‌’ಗಳ ಸಾಲಿಗೆ ಸೇರುತ್ತವೆ. ಗಾಯಗೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮಾತನಾಡುವಾಗ, ಮಾರ್ಪಾಟು ಮಾಡಬಹುದಾದ ಈ ‘ರಿಸ್ಕ್‌ ಫ್ಯಾಕ್ಟರ್‌’ಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು.

ಗಾಯ ಅಥವಾ ನೋವಿಗೆ ಏನೆಲ್ಲ ಕಾರಣಗಳಿರಬಹುದು ಎಂಬುದೀಗ ನಮಗೆ ಗೊತ್ತು. ಈ ಕಾಲಮಾನದಲ್ಲಿಯೇ ಯಾಕೆ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ನೋವು ಅನುಭವಿಸುತ್ತಿದ್ದಾರೆ ಎನ್ನುವ ವಿಷಯದ ಆಳಕ್ಕೆ ಇಳಿಯೋಣ. ವಿಪರೀತ ಕ್ರಿಕೆಟ್‌ ಆಡುತ್ತಿರುವುದರಿಂದ ಹೀಗಾಗುತ್ತಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಹೊತ್ತಿದು. ಬೇರೆಲ್ಲ ಆಟಗಳಲ್ಲಿ ಮೈದಾನಕ್ಕೆ ಇಳಿಯದ ಋತುಮಾನಗಳು ಆಟಗಾರರಿಗೆ ಇರುತ್ತವೆ. ಅವಕ್ಕೆ ಹೋಲಿಸಿದರೆ, ಭಾರತದಲ್ಲಿ ಕ್ರಿಕೆಟ್‌ನಲ್ಲಿ ಆಟಗಾರರಿಗೆ ಬಿಡುವು ತುಂಬಾ ಕಡಿಮೆ. ದೇಹಕ್ಕೆ ವಿಶ್ರಾಂತಿ ಅತಿ ಕಡಿಮೆಯಾದಾಗ ಸ್ನಾಯುಗಳು ದಣಿಯುತ್ತವೆ. ಗಾಯ ಅಥವಾ ನೋವಿಗೆ ಇದೂ ಕಾರಣ. ಆಟುವುದರ ಜೊತೆಗೆ ಆಟಗಾರರು ವಿವಿಧೆಡೆ ಪ್ರಯಾಣಿಸುತ್ತಲೇ ಇರುತ್ತಾರೆ. ಇದು ಕೂಡ ಆಯಾಸವನ್ನು ಹೆಚ್ಚು ಮಾಡಿ, ದೈಹಿಕ ಕ್ಷಮತೆಗೆ ಸವಾಲೊಡ್ಡುತ್ತದೆ.

ಇಂಗ್ಲೆಂಡ್‌ ಎದುರು ಇದೇ ವಿಶ್ವಕಪ್‌ ಪಂದ್ಯ ಆಡುವಾಗ ನೋವಿನಿಂದ ಮುಖ ಕಿವುಚಿದ್ದ ಭಾರತದ ಬೌಲರ್ ಮೊಹಮ್ಮದ್ ಸಿರಾಜ್

‘ನಾವು ಕ್ರಿಕೆಟ್‌ ಆಡುತ್ತಿದ್ದಾಗ ಭಾರ ಎತ್ತುವ ತರಬೇತಿ ಇರಲಿಲ್ಲ. ಹಾಗಿದ್ದೂ ಇಡೀ ದಿನ ನಾವು ಕ್ರಿಕೆಟ್ ಆಡುತ್ತಲೇ ಇದ್ದೆವು. ಭಾರ ಎತ್ತುವುದು ವಿರಾಟ್‌ ಕೊಹ್ಲಿ ಅವರಿಗೆ ಸಲೀಸು ಇರಬಹುದು. ಎಲ್ಲರೂ ವಿರಾಟ್‌ ಕೊಹ್ಲಿ ಅಲ್ಲ. ನಿಮ್ಮ ದೇಹಕ್ಕೆ ತಕ್ಕಂತಹ ತರಬೇತಿ ಕಾರ್ಯಕ್ರಮವನ್ನು ಸಿದ್ಧಪಡಿಸಿಕೊಳ್ಳಬೇಕು’ ಎಂದು ವೀರೇಂದ್ರ ಸೆಹ್ವಾಗ್‌ ಇತ್ತೀಚೆಗೆ ಹೇಳಿದ್ದರು. ಅವರ ಮಾತು ಸತ್ಯವಾದರೂ, ಯಾರೂ ಭಾರ ಎತ್ತುವ ವ್ಯಾಯಾಮವನ್ನು ಮಾಡಲೇಬಾರದು ಎಂದು ಹೇಳುವುದು ತಪ್ಪಾಗುತ್ತದೆ. ಪ್ರತಿದಿನ ಜಿಮ್‌ಗೆ ಹೋಗಿ ವ್ಯಾಯಾಮ ಮಾಡುವುದು, ಭಾರ ಎತ್ತುವುದು ಈಗ ಅನಿವಾರ್ಯ. ಹೊಸಕಾಲದ ಕ್ರಿಕೆಟರ್‌ಗಳು ದೇಹಾಕಾರ ಕಾಪಾಡಿಕೊಂಡು, ಕ್ಷಮತೆಯಿಂದ ಆಟದ ಹೊಸ ಸವಾಲುಗಳಿಗೆ ತೆರೆದುಕೊಂಡೂ ಗುಣಮಟ್ಟ ಕಾಯ್ದುಕೊಳ್ಳಲು ಇದರಿಂದ ಸಾಧ್ಯವಾಗುತ್ತಿದೆ. ತುಂಬಾ ಒಳ್ಳೆಯದು ಅಂದುಕೊಂಡದ್ದು ಕೆಟ್ಟದ್ದೂ ಆಗಬಹುದು. ಜಿಮ್‌ನಲ್ಲಿ ಭಾರ ಎತ್ತುವುದನ್ನೂ ಕ್ರಿಕೆಟ್‌ ಆಡುವ ತರಬೇತಿಯ ಒತ್ತಡವನ್ನೂ ತೂಗಿಸಿಕೊಂಡು ಹೋಗಬೇಕು. ಜಿಮ್‌ನಲ್ಲಿ ಕಸರತ್ತು ಮಾಡಿದ ತಕ್ಷಣವೇ ನೆಟ್ಸ್‌ನಲ್ಲಿ ಸುದೀರ್ಘಾವಧಿ ಅಭ್ಯಾಸ ಮಾಡುವುದು ಅಪಾಯವನ್ನು ಆಹ್ವಾನಿಸಿದಂತೆಯೇ ಸರಿ.

ಕ್ರಿಕೆಟ್‌ನಲ್ಲಿ ಬೇರೆ ಆಟಗಾರರಿಗೆ ಹೋಲಿಸಿದರೆ, ವೇಗ ಹಾಗೂ ಮಧ್ಯಮ ವೇಗದ ಬೌಲರ್‌ಗಳು ಹೆಚ್ಚು ನೋವನ್ನು ಅನುಭವಿಸುತ್ತಾರೆ. ವೇಗದ ಬೌಲಿಂಗ್ ಬೇಡುವಷ್ಟು ದೈಹಿಕ ಸಾಮರ್ಥ್ಯವನ್ನು ಕ್ರಿಕೆಟ್‌ನ ಬೇರೆ ಯಾವ ವಿಭಾಗವೂ ಕೇಳುವುದಿಲ್ಲ. ಬೌಲಿಂಗ್‌ ಶೈಲಿ ಕೂಡ ನೋವಿಗೆ ಎಡೆಮಾಡಿಕೊಟ್ಟಿರುವುದಕ್ಕೆ ಉದಾಹರಣೆಗಳಿವೆ. ಮುಖ್ಯವಾಗಿ ವೇಗದ ಬೌಲಿಂಗ್‌ ಶೈಲಿಯಲ್ಲಿ ಎರಡು ಬಗೆಗಳಿವೆ. ಒಂದು, ‘ಸೈಡ್‌ ಆನ್ ಬೌಲಿಂಗ್’. ಇದರಲ್ಲಿ ಬೌಲರ್‌ಗಳು ಎಸೆತ ಹಾಕುವ ಕ್ಷಣದಲ್ಲಿ ಹಿಂದಿನ ಪಾದವು ಬೌಲಿಂಗ್‌ ಕ್ರೀಸ್‌ಗೆ ಪರ್ಯಾಯವಾಗಿ ಇರುತ್ತದೆ. ಬ್ಯಾಟ್ಸ್‌ಮನ್‌ ನಿಂತ ದಿಕ್ಕಿನಿಂದ ಗಮನಿಸಿದರೆ, ಬೌಲರ್‌ ಸಮಭುಜದ ಸ್ಥಿತಿಯಲ್ಲಿ ಇರುತ್ತಾರೆ. ದಿಗ್ಗಜ ಬೌಲರ್‌, ಆಸ್ಟ್ರೇಲಿಯಾದ ಡೆನ್ನಿಸ್ ಲಿಲ್ಲಿ ಮಾಡುತ್ತಿದ್ದ ಬೌಲಿಂಗ್ ಈ ಶೈಲಿಗೆ ಒಳ್ಳೆಯ ಉದಾಹರಣೆ. ಇನ್ನೊಂದು, ‘ಫ್ರಂಟ್ ಆನ್‌ ಬೌಲಿಂಗ್‌’. ಈ ಬೌಲಿಂಗ್‌ ಶೈಲಿಯಲ್ಲಿ ಎಸೆತ ಹಾಕುವ ಸಂದರ್ಭದಲ್ಲಿ ಹಿಂದಿನ ಕಾಲಿನ ಪಾದವು ಹಿಮ್ಮಡಿಯನ್ನು ಎತ್ತಿದ ಸ್ಥಿತಿಯಲ್ಲಿ ಇರುತ್ತದೆ, ‘ಪಾಯಿಂಟೆಡ್‌ ಫಾರ್ವರ್ಡ್‌’ ಎಂದು ಇದನ್ನು ಕರೆಯುತ್ತೇವೆ. ಬ್ಯಾಟ್ಸ್‌ಮನ್‌ ಇರುವ ದಿಕ್ಕಿಗೆ ವಕ್ಷಭಾಗವು ತೆರೆದ ಅಥವಾ ಅರೆತೆರೆದ ಸ್ಥಿತಿಯ ಶೈಲಿಯೂ ಇದಾಗಿದೆ. ವೆಸ್ಟ್‌ ಇಂಡೀಸ್‌ನ ವೇಗದ ಬೌಲರ್‌ ಮಾಲ್ಕಂ ಮಾರ್ಷಲ್ ಈ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿದ್ದರು. ಈ ಎರಡೂ ಬೌಲಿಂಗ್‌ ಶೈಲಿಗಳಿಗೆ ಅನುಕೂಲ, ಅನನುಕೂಲ ಎರಡೂ ಇವೆ. ಅವುಗಳ ತಾಂತ್ರಿಕ ಅಂಶಗಳ ವಿವರಣೆ ಇಲ್ಲಿ ಅನಗತ್ಯ. ಆದರೆ, ಈ ಕಾಲಮಾನದಲ್ಲಿ ಅನೇಕ ಬೌಲರ್‌ಗಳು ಮಿಶ್ರ ಶೈಲಿಯಲ್ಲಿ ಬೌಲಿಂಗ್‌ ಮಾಡುತ್ತಿದ್ದಾರೆ. ಅದು ಸೈಡ್‌ ಆನ್‌ ಅಲ್ಲ; ಫ್ರಂಟ್‌ ಆನ್‌ ಕೂಡ ಅಲ್ಲ. ದೇಹದ ಸಹಜ ರಚನೆ–ಚಲನೆಗೆ ಪೂರಕವಲ್ಲದ ಶೈಲಿ ಇದು. ಹೀಗಾಗಿ ಇಂತಹ ಶೈಲಿಯಲ್ಲಿ ಬೌಲಿಂಗ್‌ ಮಾಡುವವರಿಗೆ ನೋವು ಹೆಚ್ಚು ಕಾಡುತ್ತದೆ. ಹೀಗಾದ ಮೇಲೆ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸರಿಯಾದ ಕ್ರಮ ಅನುಸರಿಸದೇ ಇದ್ದರೆ ಕಷ್ಟ. ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳದಿದ್ದರೆ ಅಥವಾ ಪೌಷ್ಟಿಕ ಆಹಾರ ಸೇವನೆಯ ಪ್ರಮಾಣ ಕಡಿಮೆಯಾದರೆ ನೋವು ಉಲ್ಬಣವಾಗುತ್ತದೆ. ನಿದ್ರಾಹೀನತೆಯೂ ಕಾಡಬಹುದು. ಇಂತಹ ಸ್ಥಿತಿ ಮನೋಯಾತನೆಗೆ ದೂಡುತ್ತದೆ. ಕ್ರಿಕೆಟರ್‌ಗಳು ಈಗ ಪ್ರಯಾಣಿಸುವ ದಿನಗಳು, ದೂರ, ಆಡುವ ಕ್ರಿಕೆಟ್‌ನ ಪ್ರಮಾಣ ನೋಡಿದರೆ ಇವೆಲ್ಲವನ್ನೂ ನಿಭಾಯಿಸುವುದು ಸವಾಲೇ ಹೌದು.

ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಗಾಯಗೊಂಡಿದ್ದಾಗ ಹಾಕಿಕೊಂಡಿದ್ದ ಬ್ಯಾಂಡೇಜ್

ಈಗಿನ ಕ್ರಿಕೆಟಿಗರು ಆಡುವ ಮೊದಲು ಕಠಿಣ ಪರೀಕ್ಷೆಗಳನ್ನು ಎದುರಿಸಬೇಕಿದೆ. ಫಿಟ್‌ನೆಸ್‌ ಟೆಸ್ಟ್‌, ಸ್ಕ್ರೀನಿಂಗ್ ಇವೆಲ್ಲವೂ ಹಿಂದೆಂದಿಗಿಂತಲೂ ಸವಾಲನ್ನು ಒಡ್ಡುವಂತಿವೆ. ಅವನ್ನೆಲ್ಲ ಎದುರಿಸಿ ಕ್ಷಮತೆ ಇದೆ ಎಂದು ಸಾಬೀತುಪಡಿಸಿದರಷ್ಟೆ ಆಡಲು ಯೋಗ್ಯರೆಂದು ನಿರ್ಧರಿಸುತ್ತಾರೆ. ಇಂತಹ ಪರೀಕ್ಷೆಗಳಿಗೆ ಒಳಗಾಗುವಾಗ ಸಣ್ಣಪುಟ್ಟ ನೋವು, ಗಾಯ ಇದ್ದರೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಮುಂದೆ ಸಮಸ್ಯೆ ಗಂಭೀರ ಸ್ವರೂಪ ತಾಳದಂತೆ ತಡೆಗಟ್ಟಲು ಇದು ಸಹಕಾರಿ. ಆಟಗಾರರಿಗೆ, ಯಾವುದೇ ಬಾಧೆ, ದೈಹಿಕ ಸಂಕಟ ಇದ್ದರೆ ಅದನ್ನು ತಂಡದ ವೈದ್ಯರಿಗೆ ಮುಕ್ತವಾಗಿ ತಿಳಿಸುವ ಕಾಲವಿದು. ಮುಂಜಾಗ್ರತೆ ವಹಿಸಲು ಇದು ಅನಿವಾರ್ಯ. ಹಿಂದೆ ಇಷ್ಟು ಸೂಕ್ಷ್ಮವಾದ ಪರೀಕ್ಷೆಗಳು ಇರಲಿಲ್ಲ. ಕ್ರೀಡಾವೈದ್ಯರ ತಂಡ ಕೂಡ ಇರುತ್ತಿರಲಿಲ್ಲ. ಇದರಿಂದಾಗಿ ಎಷ್ಟೋ ನೋವು, ಗಾಯಗಳನ್ನು ಉಪೇಕ್ಷಿಸಿಯೇ ಎಷ್ಟೋ ಕ್ರಿಕೆಟಿಗರು ಆಡುತ್ತಿದ್ದರು. ಆ ದಿನಗಳಿಗೆ ಹೋಲಿಸಿ, ಈಗ ನೋವು ಹೆಚ್ಚಾಗಿದೆ ಎಂದು ನಾವು ತೀರ್ಮಾನಕ್ಕೆ ಬರುತ್ತೇವೆ. ಇದು ಕೂಡ ವಾಸ್ತವವಲ್ಲ.

ಭಾರತದ ಜಸ್‌ಪ್ರೀತ್‌ ಬೂಮ್ರಾ, ಹಾರ್ದಿಕ್‌ ಪಾಂಡ್ಯ, ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ ಇವರೆಲ್ಲ ಯಾವ ಸ್ವರೂಪದ ನೋವನ್ನು ಅನುಭವಿಸಿದ್ದಾರೆ ಎನ್ನುವುದು ನಮಗೆಲ್ಲರಿಗೆ ಸ್ಪಷ್ಟವಿದೆ. ಮತ್ತೆ ಅವರು ಹಳೆಯ ಲಯದಲ್ಲಿ ಆಡಲು ಸಾಧ್ಯವಾಗುತ್ತಿರುವುದು ಸಮರ್ಪಕ ಚೇತರಿಕೆಯ ಕ್ರಮಗಳನ್ನು ಅನುಸರಿಸುತ್ತಿರುವುದರಿಂದ ಎನ್ನುವುದನ್ನೂ ನಾವೆಲ್ಲ ಅರಿಯಬೇಕು.

(ಲೇಖಕರು 2023ರ ವಿಶ್ವಕಪ್‌ನಲ್ಲಿ ಆಡುತ್ತಿರುವ ನೆದರ್‌ಲ್ಯಾಂಡ್ಸ್‌ ಕ್ರಿಕೆಟ್‌ ತಂಡದ ವೈದ್ಯರು. 2020–22ರ ಅವಧಿಯಲ್ಲಿ ಐಪಿಎಲ್‌ ಆಡಿದ ಕಿಂಗ್ಸ್‌ ಇಲೆವೆನ್‌ ಪಂಜಾಬ್ ತಂಡಕ್ಕೂ ವೈದ್ಯರಾಗಿದ್ದರು.
‘ಎಲಿವೇಟ್‌ ಪರ್ಫಾರ್ಮೆನ್ಸ್‌’ನ ಸಹ ಸ್ಥಾಪಕರೂ ಹೌದು.)

ಕನ್ನಡಕ್ಕೆ: ವಿಶಾಖ ಎನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.