ADVERTISEMENT

ಕ್ರಿಕೆಟ್ ಟೂರ್ನಿ: ಕೆಎಸ್‌ಸಿಎ ಇಲೆವನ್‌ಗೆ ಕಠಿಣ ಗುರಿ

ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ: ರೋಚಕ ಘಟ್ಟದಲ್ಲಿ ಬಾಂಗ್ಲಾ–ಛತ್ತೀಸಗಡ ಪಂದ್ಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 20:08 IST
Last Updated 30 ಜುಲೈ 2019, 20:08 IST
ಕೆಎಸ್‌ಸಿಎ ಇಲೆವನ್ ತಂಡದ ಸ್ಪಿನ್ನರ್ ಜೆ. ಸುಚಿತ್ ಬೌಲಿಂಗ್ ವೈಖರಿ –ಪ್ರಜಾವಾಣಿ ಚಿತ್ರ/ಆರ್‌. ಶ್ರೀಕಂಠ ಶರ್ಮಾ
ಕೆಎಸ್‌ಸಿಎ ಇಲೆವನ್ ತಂಡದ ಸ್ಪಿನ್ನರ್ ಜೆ. ಸುಚಿತ್ ಬೌಲಿಂಗ್ ವೈಖರಿ –ಪ್ರಜಾವಾಣಿ ಚಿತ್ರ/ಆರ್‌. ಶ್ರೀಕಂಠ ಶರ್ಮಾ   

ಬೆಂಗಳೂರು: ಆತಿಥೇಯ ಕೆಎಸ್‌ಸಿಎ ಇಲೆವನ್ ತಂಡವು ಈ ಬಾರಿಯ ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಬೇಕಾದರೆ ಕಠಿಣ ಸವಾಲನ್ನು ಮೀರಿ ನಿಲ್ಲಬೇಕಿದೆ.

ಆಲೂರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದ ಮೂರನೇ ದಿನವಾದ ಮಂಗಳವಾರ ಆಂಧ್ರ ಕ್ರಿಕೆಟ್ ಸಂಸ್ಥೆಯು ಕೆಎಸ್‌ಸಿಎಗೆ 319 ರನ್‌ಗಳ ಗೆಲುವಿನ ಗುರಿ ಒಡ್ಡಿದೆ. ಮೊದಲ ಇನಿಂಗ್ಸ್‌ನಲ್ಲಿ 38 ರನ್‌ಗಳ ಹಿನ್ನಡೆ ಅನುಭವಿಸಿದ್ದ ಕೆಎಸ್‌ಸಿಎ ಎರಡನೇ ಇನಿಂಗ್ಸ್‌ನಲ್ಲಿ ಆಂಧ್ರ ತಂಡವನ್ನು 280 ರನ್‌ಗಳಿಗೆ ಕಟ್ಟಿಹಾಕಿತು.

ಸೋಮವಾರ ಸಂಜೆ 4 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಆಂಧ್ರ ತಂಡಕ್ಕೆ ಇಂದು ರಿಕಿ ಭುಯ್ (57 ರನ್), ಶೋಯಬ್ ಮೊಹಮ್ಮದ್ ಖಾನ್ (87ರನ್) ಮತ್ತು ಜಿ. ಮನೀಷ್ (76 ರನ್) ಅರ್ಧಶತಕ ಗಳಿಸಿ ಆಸರೆಯಾದರು. ಎಡಗೈ ಸ್ಪಿನ್ನರ್ ಜೆ. ಸುಚಿತ್ (58ಕ್ಕೆ4) ಅವರ ದಾಳಿಯಿಂದಾಗಿ ಆಂಧ್ರಕ್ಕೆ 280 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು.

ADVERTISEMENT

ಪಂದ್ಯದ ನಾಲ್ಕನೇ ದಿನವಾದ ಬುಧವಾರ ಈ ಗೆಲುವಿನ ಗುರಿಯನ್ನು ಸಾಧಿಸಿದರೆ ಕೆಎಸ್‌ಸಿಎ ಇಲೆವನ್ ತಂಡವು ಫೈನಲ್ ತಲುಪಲಿದೆ. ಸೋತರೆ ಅಥವಾ ಪಂದ್ಯವು ಡ್ರಾದಲ್ಲಿ ಮುಕ್ತಾಯಗೊಂಡರೆ ಮೊದಲ ಇನಿಂಗ್ಸ್‌ ಮುನ್ನಡೆಯ ಆಧಾರದ ಮೇಲೆ ಆಂಧ್ರ ತಂಡವು ಫೈನಲ್‌ ಪ್ರವೇಶಿಸುತ್ತದೆ. ಸ್ಪಿನ್ನರ್‌ಗಳಿಗೆ ನೆರವು ನೀಡುತ್ತಿರುವ ಪಿಚ್‌ನಲ್ಲಿ ಊಟದ ವಿರಾಮಕ್ಕೂ ಮುನ್ನದ ಅವಧಿಯಲ್ಲಿ ವಿಕೆಟ್‌ಗಳನ್ನು ಕಾಯ್ದುಕೊಂಡು ರನ್‌ ಗಳಿಸುವ ಸವಾಲನ್ನು ಎದುರಿಸುವಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳು ಸಫಲರಾದರೆ ಪಂದ್ಯದ ಮೇಲೆ ಆತಿಥೇಯರು ಹಿಡಿತ ಸಾಧಿಸಬಹುದು.

ಮೊದಲ ಇನಿಂಗ್ಸ್‌ನಲ್ಲಿ ಪ್ರಸಿದ್ಧಕೃಷ್ಣ ಅವರ ಉತ್ತಮ ಬೌಲಿಂಗ್‌ ಮುಂದೆ ಕುಸಿದಿದ್ದ ಆಂಧ್ರವು ರಿಕಿ ಭುಯ್ ಗಳಿಸಿದ್ದ ದ್ವಿಶತಕದ ಬಲದಿಂದ 293 ರನ್ ಗಳಿಸಿತ್ತು. ಆದರೆ ಕೆಎಸ್‌ಸಿಎ ತಂಡವು ಅದಕ್ಕುತ್ತರವಾಗಿ ಕೇವಲ 255 ರನ್‌ ಗಳಿಸಿ ಆಲೌಟ್‌ ಆಗಿತ್ತು. ಎರಡನೇ ಇನಿಂಗ್ಸ್‌ನಲ್ಲಿಯೂ ರಿಕಿ ಅರ್ಧಶತಕ ಬಾರಿಸಿದರು. ಪ್ರಸಿದ್ಧಕೃಷ್ಣ, ಡೇವಿಡ್ ಮಥಾಯಿಸ್ ಮತ್ತು ಎಂ.ಜಿ. ನವೀನ್ ತಲಾ ಎರಡು ವಿಕೆಟ್ ಗಳಿಸಿದರು.

ರೋಚಕ ಘಟ್ಟದಲ್ಲಿ ಪಂದ್ಯ: ಬಾಂಗ್ಲಾದೇಶ ಕ್ರಿಕೆಟ್ ತಂಡ ಮತ್ತು ಛತ್ತೀಸಗಡ ರಾಜ್ಯ ಕ್ರಿಕೆಟ್ ಸಂಘ ಮುಖಾಮುಖಿಯಾಗಿರುವ ಇನ್ನೊಂದು ಸೆಮಿಫೈನಲ್‌ ಪಂದ್ಯವು ರೋಚಕ ಘಟ್ಟ ತಲುಪಿದೆ.

ಬಾಂಗ್ಲಾ ತಂಡವು ಛತ್ತೀಸಗಡ ತಂಡಕ್ಕೆ 227 ರನ್‌ಗಳ ಗುರಿ ನೀಡಿದೆ. ಒಂದು ದಿನದಲ್ಲಿ ಈ ಗುರಿ ಸಾಧಿಸುವುದು ಕಷ್ಟವೇನಲ್ಲ. ಬೌಲರ್‌ಗಳೂ ಕೂಡ ಹತ್ತು ವಿಕೆಟ್ ಉರುಳಿಸುವ ಸಾಧ್ಯತೆ ಇದೆ. ಡ್ರಾ ಆಗುವ ಸಾಧ್ಯತೆ ತೀರ ಕಡಿಮೆ ಇದೆ. ರೋಚಕ ಹೋರಾಟ ನಡೆಯುವ ಎಲ್ಲ ಲಕ್ಷಣಗಳೂ ಇವೆ. ಬಾಂಗ್ಲಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 334 ರನ್‌ ಗಳಿಸಿತ್ತು. ಅದಕ್ಕುತ್ತರವಾಗಿ ಛತ್ತೀಸಗಡ ತಂಡವು 257 ರನ್ ಗಳಿಸಿ ಹಿನ್ನಡೆ ಅನುಭವಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಶುಭಂ ಅಗರವಾಲ್ ಮತ್ತು ಪುನಿತ್ ದಾತೆ ಅವರು ಕ್ರಮವಾಗಿ ನಾಲ್ಕು ಮತ್ತು ಮೂರು ವಿಕೆಟ್ ಗಳಿಸಿ ಮಿಂಚಿದರು. ಬಾಂಗ್ಲಾ ತಂಡವನ್ನು 150 ರನ್‌ಗಳಿಗೆ ಕಟ್ಟಿಹಾಕಿದರು.

ಸಂಕ್ಷಿಪ್ತ ಸ್ಕೋರು: ಆಲೂರು ಕ್ರೀಡಾಂಗಣ (2) ಆಂಧ್ರ ಕ್ರಿಕೆಟ್ ಸಂಸ್ಥೆ: 293 ಮತ್ತು 92.5 ಓವರ್‌ಗಳಲ್ಲಿ 280 (ರಿಕಿ ಭುಯ್ 57, ಶೋಯಬ್ ಮೊಹಮ್ಮದ್ ಖಾನ್ 87, ಜಿ. ಮನೀಷ್ 76, ಪ್ರಸಿದ್ಧಕೃಷ್ಣ 62ಕ್ಕೆ2, ಜೆ. ಸುಚಿತ್ 58ಕ್ಕೆ4, ಡೇವಿಡ್ ಮಥಾಯಿಸ್ 31ಕ್ಕೆ2, ಎಂ.ಜಿ. ನವೀನ್ 19ಕ್ಕೆ2); ಕೆಎಸ್‌ಸಿಎ ಇಲೆವನ್: ಮೊದಲ ಇನಿಂಗ್ಸ್‌ 255.

ಆಲೂರು ಕ್ರೀಡಾಂಗಣ (1): ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ: 334 ಮತ್ತು 62.1 ಓವರ್‌ಗಳಲ್ಲಿ 150 (ಅರೀಫುಲ್ ಹಕ್ 63, ಖಾಜಿ ನೂರುಲ್ ಹುಸೇನ್ 30, ಪುನಿತ್ ದಾತೆ 18ಕ್ಕೆ3, ವೀರಪ್ರತಾಪ್ ಸಿಂಗ್ 34ಕ್ಕೆ2, ಶುಭಂ ಅಗರವಾಲ್ 51ಕ್ಕೆ4) ಛತ್ತೀಸಗಡ ಕ್ರಿಕೆಟ್ ಸಂಘ: ಮೊದಲ ಇನಿಂಗ್ಸ್: 77.3 ಓವರ್‌ಗಳಲ್ಲಿ 257.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.