ನವದೆಹಲಿ: ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ ತಮ್ಮ ಎಂಟು ವರ್ಷಗಳ ಕ್ರಿಕೆಟ್ ವೃತ್ತಿ ಜೀವನದಿಂದ ದೂರವುಳಿದ ಸರ್ ಡಾನ್ ಬ್ರಾಡ್ಮನ್ ಅವರನ್ನು ನೋಡಿ ಈಗಿನ ಕ್ರೀಡಾಪಟುಗಳು ಕಲಿಯುವುದು ಬಹಳಷ್ಟಿದೆ ಎಂದು ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಬ್ರಾಡ್ಮನ್ ಅವರ 112ನೇ ಜಯಂತಿ ಅಂಗವಾಗಿ ಟ್ವೀಟ್ ಮಾಡಿರುವ ಸಚಿನ್, 'ಕೊರೊನಾ ವೈರಸ್ ಹಾವಳಿ ತಡೆಗೆ ವಿಧಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ಸುಮಾರು ಮೂರು ತಿಂಗಳು ಆಟದಿಂದ ದೂರ ಉಳಿದಿದ್ದ ಕ್ರೀಡಾಪಟುಗಳು ಹತಾಶರಾಗಬಾರದು.ತಮ್ಮ ಆಟದ ಉತ್ತುಂಗ ಸಾಧನೆಯ ಹಂತದಲ್ಲಿದ್ದಾಗಲೇ ಬ್ರಾಡ್ಮನ್ 1938 ರಿಂದ 1945ರವರೆಗೆ ಯುದ್ಧದ ಕಾರಣ ಕ್ರಿಕೆಟ್‌ನಿಂದ ದೂರ ಉಳಿದರು. ಆದರೂ ಇವತ್ತಿಗೂ ಅವರ ರನ್ ಗಳಿಕೆಯ ಸರಾಸರಿ ಶ್ರೇಷ್ಠವಾಗಿದೆ'ಎಂದಿದ್ದಾರೆ.
'ಇವತ್ತು ಕ್ರೀಡಾಪಟುಗಳು ಅನಿಶ್ಚಿತ ವಾತಾವರಣದಲ್ಲಿ ಬದುಕಬೇಕಿದೆ. ಇಷ್ಟೊಂದು ದೀರ್ಘ ಬಿಡುವಿನಿಂದ ಮಾನಸಿಕ ಮತ್ತು ದೈಹಿಕ ಕ್ಷಮತೆ ಕುಂದುವ ಅಪಾಯ ಇರುತ್ತದೆ. ಅದನ್ನು ಕಾಪಾಡಿಕೊಳ್ಳುವ ಮತ್ತು ಕಣಕ್ಕೆ ಮರಳಿದಾಗ ಮೊದಲಿನಂತೆ ಆಡುವ ಸವಾಲು ಎದುರಿಸಬೇಕಾಗುತ್ತದೆ'ಎಂದು ಸಚಿನ್ ಹೇಳಿದ್ದಾರೆ.
'1990ರ ದಶಕದಲ್ಲಿ ಭಾರತದಲ್ಲಿ ಪ್ರತಿವರ್ಷ ಭಾರತದಲ್ಲಿ ನಾಲ್ಕೈದು ಟೆಸ್ಟ್‌ಗಳು ನಡೆಯುತ್ತಿದ್ದವು. ಅದರಲ್ಲಿಯೂ 1994 ರಿಂದ 1995ರ ಅಕ್ಟೋಬರ್ ಅವಧಿಯಲ್ಲಿ ನಾವು ಕೇವಲ ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದೆವು. ಆಗ ಹೆಚ್ಚು ಬಿಡುವು ಸಿಗುತ್ತಿದ್ದದ್ದು ಸಾಮಾನ್ಯ ಸಂಗತಿಯಾಗಿತ್ತು. ಆ ಸಂದರ್ಭವನ್ನು ನಿಭಾಯಿಸುವುದು ನಮಗೆ ರೂಢಿಗತವಾಗಿತ್ತು. ಆದರೆ ಈಗ ಕ್ರಿಕೆಟ್ ಪಂದ್ಯಗಳು ಬಹಳಷ್ಟು ಸಂಖ್ಯೆಯಲ್ಲಿ ನಡೆಯುತ್ತಿವೆ. ಅದರಿಂದಾಗಿ ಈ ರೀತಿಯ ದೀರ್ಘ ಬಿಡುವು ಸಿಕ್ಕಾಗ ಒತ್ತಡ ಸಹಜ'ಎಂದು ಬ್ಯಾಟಿಂಗ್ ಚಾಂಪಿಯನ್ ಸಚಿನ್ ಹೇಳಿದ್ದಾರೆ.
ಬ್ರಾಡ್ಮನ್ ಅವರು 1928ರಲ್ಲಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 1948ರಲ್ಲಿ ನಿವೃತ್ತರಾಗಿದ್ದರು. ಅದರಲ್ಲಿ ಅವರು 52 ಟೆಸ್ಟ್‌ಗಳನ್ನು ಆಡಿದ್ದರು. 99.94 ಸರಾಸರಿಯಲ್ಲಿ 6996 ರನ್ ಗಳಿಸಿದ್ದರು. 29 ಶತಕ, 12 ದ್ವಿಶತಕ ಮತ್ತು ಒಂದು ತ್ರಿಶತಕ, 13 ಅರ್ಧಶತಕಗಳನ್ನೂ ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.