ನವದೆಹಲಿ: ಪಂಜಾಬ್ ಕಿಂಗ್ಸ್ ಫ್ರಾಂಚೈಸ್, ಕಳೆದ ಋತುವಿನಲ್ಲಿ ತಂಡವನ್ನು ಮುನ್ನಡೆಸಿದ್ದ ಕರ್ನಾಟಕದ ಆರಂಭಿಕ ಬ್ಯಾಟರ್ ಮಯಂಕ್ ಅಗರವಾಲ್ ಅವರನ್ನು ಕೈಬಿಟ್ಟಿರುವುದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಬೇಸರ ವ್ಯಕ್ತಪಡಿಸಿದ್ದಾರೆ.
‘ನನ್ನ ಪ್ರಕಾರ ಮಯಂಕ್ ಅವರು ಕಳೆದ ಋತುಗಳಲ್ಲಿ ಕೆ.ಎಲ್.ರಾಹುಲ್ ಅವರೊಂದಿಗೆ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದು, ಉತ್ತಮ ಪ್ರದರ್ಶನ ತೋರಿದ್ದರು. ಆದರೆ, ಕಳೆದ ಬಾರಿ ಪಂಜಾಬ್ ತಂಡದಿಂದ ಹೊರಗುಳಿದಿದ್ದ ರಾಹುಲ್, ಲಖನೌ ತಂಡದ ನಾಯಕರಾಗಿದ್ದರು. ರಾಹುಲ್ ಬದಲು ಮಯಂಕ್ ಪಂಜಾಬ್ ತಂಡವನ್ನು ಮುನ್ನಡೆಸಿದ್ದರು. ನಾಯಕರಾಗಿ ಮಯಂಕ್ ಅವರಿಗೆ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ಇನ್ನೂ ಒಂದು ವರ್ಷ ಕಾಲಾವಕಾಶ ನೀಡಬೇಕಿತ್ತು’ ಎಂದು ಸಂಜಯ್ ಅಭಿಪ್ರಾಯಪಟ್ಟಿದ್ದಾರೆ.
‘ಒಂದು ಹಂತದಲ್ಲಿ ಆರಂಭಿಕ ಸ್ಥಾನವನ್ನು ಬಿಟ್ಟುಕೊಟ್ಟಿದ್ದ ಮಯಂಕ್ ಅವರಿಗೆ ಪರಿಣಾಮಕಾರಿಯಾಗಿ ಬ್ಯಾಟ್ ಬೀಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಒತ್ತಡಕ್ಕೆ ಒಳಗಾಗಿದ್ದ ಅವರು ರನ್ ಗಳಿಕೆಯಲ್ಲಿ ಹಿಂದೆ ಬಿದ್ದಿದ್ದರು. ಮಯಂಕ್‌ರನ್ನು ಪಂಜಾಬ್ ತಂಡ ಕೈಬಿಟ್ಟಿರುವುದರ ಬಗ್ಗೆ ವಿಷಾದಿಸುತ್ತೇನೆ. ಈ ಆಟ ಒಳ್ಳೆಯ ಆಟಗಾರಿಗೆ ಅಲ್ಲ ಎನ್ನಿಸುತ್ತದೆ. ಆದರೆ, ಆರಂಭಿಕ ಆಟಗಾರರಿಗಾಗಿ ಹುಡುಕಾಟ ನಡೆಸುತ್ತಿರುವ ಇತರ ತಂಡಗಳಿಗೆ ಮಯಂಕ್ ಉತ್ತಮ ಆಯ್ಕೆ ಎಂದೇ ಹೇಳಬಹುದು ಎಂದು ಸಂಜಯ್ ಹೇಳಿದ್ದಾರೆ.
ಮಯಂಕ್ ಅವರು 150, 160 ಸ್ಟ್ರೈಕ್ ರೇಟ್‌ನಲ್ಲಿ ಹೆಚ್ಚು ಸ್ಕೋರ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಸಂಜಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ 13 ಪಂದ್ಯಗಳನ್ನು ಆಡಿದ್ದ ಮಯಂಕ್, 16.33 ಸರಾಸರಿಯಲ್ಲಿ 196 ರನ್ ಗಳಿಸಿದ್ದರು.
ಡಿ.23 ರಂದು ಕೊಚ್ಚಿಯಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜಿಗೆ ಮುನ್ನ ಫ್ರಾಂಚೈಸಿಗಳು ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ಬಿಟ್ಟುಕೊಡುವ ಆಟಗಾರರ ಪಟ್ಟಿಯನ್ನು ನೀಡಲು ಮಂಗಳವಾರ ಕೊನೆಯ ದಿನವಾಗಿತ್ತು.
ಈ ಹಿನ್ನೆಲೆಯಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸ್, ಉಳಿಸಿಕೊಳ್ಳುವ ಮತ್ತು ಬಿಟ್ಟುಕೊಡುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ.
ಮಿನಿ ಹರಾಜಿನಲ್ಲಿ ಹೊಸ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪಂಜಾಬ್ ಕಿಂಗ್ಸ್ ₹32.2 ಕೋಟಿ, ಲಖನೌ ಸೂಪರ್ ಜೈಂಟ್ಸ್ ಹರಾಜಿನಲ್ಲಿ ₹ 23.35 ಕೋಟಿ, ಆರ್‌ಸಿಬಿ ₹ 8.75 ಕೋಟಿ ಖರ್ಚು ಮಾಡಬಹುದು.
ಪಂಜಾಬ್ ಕಿಂಗ್ಸ್ ಉಳಿಸಿಕೊಂಡ ಆಟಗಾರರು: ಶಿಖರ್ ಧವನ್, ಶಾರುಖ್ ಖಾನ್, ರಾಹುಲ್ ಚಾಹರ್, ಅರ್ಷದೀಪ್ ಸಿಂಗ್, ಹರ್‌ಪ್ರೀತ್ ಬ್ರಾರ್, ರಾಜ್ ಅಂಗದ್ ಬಾವಾ, ಪ್ರಭು ಸಿಮ್ರಾನ್ ಸಿಂಗ್, ರಿಷಿ ಧವನ್, ಜಿತೇಶ್ ಶರ್ಮಾ, ಬಲ್ತೇಜ್ ಸಿಂಗ್, ಅಥರ್ವ ಟೈಡೆ, ಲಿಯಾಮ್ ಲಿವಿಂಗ್‌ಸ್ಟೋನ್, ಕಗಿಸೊ ರಬಾಡ, ಜಾನಿ ನಾಥನ್ ಬೇರ್‌ಸ್ಟಾವ್ ಎಲ್ಲಿಸ್, ಭಾನುಕಾ ರಾಜಪಕ್ಸೆ
ಬಿಡುಗಡೆಗೊಳಿಸಿದ ಆಟಗಾರರು: ಮಯಂಕ್ ಅಗರವಾಲ್, ಒಡಿಯನ್ ಸ್ಮಿತ್, ವೈಭವ್ ಅರೋರಾ, ಬೆನ್ನಿ ಹೋವೆಲ್, ಇಶಾನ್ ಪೊರೆಲ್, ಪ್ರೇರಕ್ ಮಂಕಡ್, ಸಂದೀಪ್ ಶರ್ಮಾ, ವೃತಿಕ್ ಚಟರ್ಜಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.