ಜೆದ್ದಾ: ಸೌದಿ ಅರೇಬಿಯಾದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೆಗಾ ಹರಾಜಿನಲ್ಲಿ ಬಿಹಾರ ಮೂಲದ 13 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ ₹1.10 ಕೋಟಿ ನೀಡಿ ಖರೀದಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್, '13 ವರ್ಷದ ಸೂರ್ಯವಂಶಿಗೆ ಬೆಳೆಯಲು ಪೂರಕವಾದ ವಾತಾವರಣ ಒದಗಿಸಲು ಪ್ರಾಂಚೈಸಿಗೆ ಸಾಧ್ಯವಾಗುತ್ತದೆ' ಎಂದು ನಂಬಿದ್ದೇನೆ ಎಂದು ತಿಳಿಸಿದ್ದಾರೆ.
8ನೇ ತರಗತಿಯ ಹುಡುಗ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಟ್ಯಧಿಪತಿ ಆಗಿರುವ ಅತಿ ಕಿರಿಯ ಆಟಗಾರ ಎನಿಸಿದ್ದಾರೆ.
'ಸೂರ್ಯವಂಶಿ ಉತ್ತಮ ಕೌಶಲ್ಯಗಳನ್ನು ಹೊಂದಿದ್ದಾನೆ. ಇಲ್ಲಿ ಅವನಿಗೆ ಬೆಳೆಯಲು ಉತ್ತಮ ವಾತಾವರಣವಿದೆ ಎಂದು ನಂಬಿದ್ದೇವೆ. ಈಗಷ್ಟೇ ನಮ್ಮ ಶಿಬಿರಕ್ಕೆ ಬಂದು ವೈಭವ್ ಅಭ್ಯಸಿಸಿದ್ದಾರೆ. ಅವರ ಕೌಶಲ್ಯದಿಂದ ನಾವು ಪ್ರಭಾವಿತರಾಗಿದ್ದೇವೆ' ಎಂದು ದ್ರಾವಿಡ್ ಹೇಳಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ತಂಡದ (19 ವರ್ಷದೊಳಗಿನವರ) ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ವೈಭವ್ ಕೇವಲ 62 ಎಸೆತಗಳಲ್ಲಿ 104 ರನ್ ಗಳಿಸಿ ಗಮನ ಸೆಳೆದಿದ್ದರು.
ಈಗಷ್ಟೇ ಆರಂಭವಾಗಿರುವ ಸೈಯದ್ ಮುಶ್ತಾಕ್ ಅಲಿ ಟ್ರೋಫಿಯಲ್ಲಿ ಬಿಹಾರ ಪರ ಪದಾರ್ಪಣೆ ಮಾಡಿದ್ದಾರೆ.
ಕಳೆದ ವರ್ಷ ರಣಜಿ ಟ್ರೋಫಿಯಲ್ಲಿ 12ನೇ ಹರೆಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆ ಮೂಲಕ ರಣಜಿ ಟ್ರೋಫಿಯಲ್ಲಿ ಆಡಿದ ಅತಿ ಕಿರಿಯ ಆಟಗಾರ ಎನಿಸಿದ್ದರು.
ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ತಂಡದ ಯೋಜನೆ ಕುರಿತು ವಿವರಿಸಿದ ದ್ರಾವಿಡ್, 'ಪ್ರಮುಖ ಬ್ಯಾಟರ್‌ಗಳನ್ನು ಉಳಿಸಿಕೊಂಡು ನಾವು ಈ ಹರಾಜಿಗೆ ಬಂದಿದ್ದೆವು. ಹಾಗಾಗಿ ಉತ್ತಮ ಬೌಲರ್‌ಗಳನ್ನು ಪಡೆಯುವುದು ಯೋಜನೆಯಾಗಿತ್ತು. ಅದನ್ನು ನಾವು ಸಾಧಿಸಿದ್ದೇವೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.