ಜೊಹಾನೆಸ್‌ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಟಿ20 ಕ್ರಿಕೆಟ್ ಸರಣಿಯನ್ನು ಜಯಿಸುವುದು ವಿಶೇಷ ಸಾಧನೆ ಎಂದು ಭಾರತ ತಂಡದ ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು 3–1ರಿಂದ ಸರಣಿ ಜಯಿಸಿತು. ಶುಕ್ರವಾರ ನಡೆದ ಕೊನೆಯ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರಿಬ್ಬರ ಅಬ್ಬರದ ಶತಕಗಳಿಂದಾಗಿ ತಂಡವು ಭಾರಿ ಅಂತರದ ಜಯ ಸಾಧಿಸಿತು.
‘ಆಟಗಾರರು ಆಡಿದ ರೀತಿ ಮತ್ತು ಅವರ ಹುಮ್ಮಸ್ಸು ನೋಡಿ ಹೆಮ್ಮೆಯೆನಿಸುತ್ತದೆ. ಇಡೀ ಸರಣಿಯಲ್ಲಿ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಉತ್ತಮವಾಗಿ ಮುನ್ನಡೆಸಿದರು. ಸಂಜು ಸ್ಯಾಮ್ಸನ್, ವರ್ಮಾ ಅವರನ್ನು ತಡೆಯುವವರು ಯಾರೂ ಇರಲಿಲ್ಲ. ಸ್ಪಿನ್ನರ್ ವರುಣ್ ಚಕ್ರವರ್ತಿ ಅತ್ಯಮೋಘವಾಗಿ ಆಡಿದರು’ ಎಂದು ಲಕ್ಷ್ಮಣ್ ಎಕ್ಸ್‌ನಲ್ಲಿ ಸಂದೇಶ ಹಾಕಿ ಶ್ಲಾಘಿಸಿದರು.
‘ತಂಡದ ಎಲ್ಲರೂ ಪರಸ್ಪರ ಒಬ್ಬರಿನ್ನೊಬ್ಬರ ಯಶಸ್ಸನ್ನು ಸಂಭ್ರಮಿಸಿದರು. ಪ್ರತಿ ಹಂತದಲ್ಲಿಯೂ ತಂಡಸ್ಫೂರ್ತಿ ಮೆರೆದರು. ಎಲ್ಲರಿಗೂ ಅಭಿನಂದನೆಗಳು’ ಎಂದು ಉಲ್ಲೇಖಿಸಿದ್ದಾರೆ.
ವರ್ಮಾಗೆ ಮೆಚ್ಚುಗೆ ಮಳೆ
ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ ಇಬ್ಬರು ಬ್ಯಾಟರ್‌ಗಳೆಂದರೆ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ.
ನಾಲ್ಕು ಪಂದ್ಯಗಳ ಈ ಸರಣಿಯಲ್ಲಿ ಇಬ್ಬರೂ ತಲಾ 2 ಶತಕ ಬಾರಿಸಿದರು. ಅದರಲ್ಲೂ ತಿಲಕ್ ವರ್ಮಾ ಅವರ ನಿರ್ಭಿಡೆಯ ಬೀಸಾಟವು ಹೊಸ ಸಂಚಲನ ಮೂಡಿಸಿತು.
ಮೂರನೇ ಕ್ರಮಾಂಕದಲ್ಲಿ ಬ್ಯಾಟರ್ ಹುಡುಕಾಟದಲ್ಲಿದ್ದ ತಂಡಕ್ಕೆ ಉತ್ತರವಾಗಿ ತಿಲಕ್ ಲಭಿಸಿದ್ಧಾರೆ. ತಮ್ಮ ಪ್ರಯೋಗ ಯಶಸ್ವಿಯಾಗಿದ್ದಕ್ಕೆ ನಾಯಕ ಸೂರ್ಯಕುಮಾರ್ ಸಂತಸಗೊಂಡಿದ್ದಾರೆ. ಸೂರ್ಯ ಅವರು ತಾವು ಆಡುತ್ತಿದ್ದ ಮೂರನೇ ಸ್ಥಾನವನ್ನು ವರ್ಮಾಗೆ ಬಿಟ್ಟಿದ್ದರು.
‘ಯುವ ಆಟಗಾರನಿಗೆ ತನ್ನ ಸಾಮರ್ಥ್ಯ ತೋರಿಸಲು ಇದು ಉತ್ತಮ ಅವಕಾಶವಾಗಿತ್ತು. ಅದನ್ನು ಅವರು ಸಮರ್ಥವಾಗಿ ನಿಭಾಯಿಸಿದರು. ತಮ್ಮ ಹೊಣೆಯನ್ನು ಅರಿತು ಆಡಿದ ಅವರ ನಿರ್ಭಯವಾದ ಸ್ವಭಾವವು ಅಮೋಘವಾಗಿದೆ. ಸೂಪರ್‌ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಅವರ ಬ್ಯಾಟಿಂಗ್ ಅದ್ಭುತವಾಗಿತ್ತು. ಇದೇ ಲಯವನ್ನು ಅವರು ಮುಂದಿನ ಎಲ್ಲ ಮಾದರಿಗಳಲ್ಲಿಯೂ ನಿರಂತರವಾಗಿ ಮುಂದುವರಿಸುತ್ತಾರೆಂಬ ಭರವಸೆ ಇದೆ’ ಎಂದರು.
ಶುಕ್ರವಾರದ ಪಂದ್ಯದಲ್ಲಿ ವರ್ಮಾ ಅವರು 47 ಎಸೆತಗಳಲ್ಲಿ ಅಜೇಯ 120 ರನ್ ಗಳಿಸಿದ್ದರು. ಸಂಜು ಸರಣಿಯ ಮೊದಲ ಪಂದ್ಯದಲ್ಲಿ ಶತಕ ಗಳಿಸಿದ್ದರು. ನಂತರ ಎರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದರು. ಆದರೆ ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿದರು. ವರ್ಮಾ ಮತ್ತು ಸಂಜು ಎರಡನೇ ವಿಕೆಟ್ ಜೊತೆಯಾಟದಲ್ಲಿ 210 ರನ್ (86ಎಸೆತ) ಸೇರಿಸಿದರು. ತಂಡವು 20 ಓವರ್‌ಗಳಲ್ಲಿ 1 ವಿಕೆಟ್‌ಗೆ 283 ರನ್ ಗಳಿಸಿತ್ತು. ಸೂರ್ಯ ಬಳಗವು 135 ರನ್‌ಗಳ ಅಂತರದಿಂದ ಪಂದ್ಯ ಗೆದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.