ಕರಾಚಿ: ಪಾಕ್ ಟೆಸ್ಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಅವರನ್ನು ಪಾಕಿಸ್ತಾನ ತಂಡದ ನಿರ್ದೆಶಕರನ್ನಾಗಿ ನೇಮಕ ಮಾಡಲಾಗಿದೆ. ತಮ್ಮ ನೇಮಕಕ್ಕೆ ಸಂತಸ ವ್ಯಕ್ತಪಡಿಸಿರುವ ಹಫೀಜ್ ಎಲ್ಲರ ಜೊತೆಗೂಡಿ ತಂಡದ ಯಶಸ್ಸಿಗೆ ಶ್ರಮಿಸುವುದಾಗಿ ಹೇಳಿದ್ದಾರೆ.
ಏಕದಿನ ವಿಶ್ವಕಪ್ ಲೀಗ್ ಹಂತದಲ್ಲೇ ತಂಡದ ನಿರ್ಗಮನದ ನಂತರ ತಂಡವನ್ನು ಪುನರ್‌ರೂಪಿಸುವ ಹೊಣೆಯನ್ನು ಹಫೀಜ್ ಹೆಗಲಿಗೆ ವಹಿಸಲಾಗಿದೆ. ಪಾಕ್ ಕ್ರಿಕೆಟ್ ಮಂಡಳಿಯು ಪಾಕ್ ತಂಡಕ್ಕೆ ನಿರ್ದೇಶಕ ಸ್ಥಾನ ಕಲ್ಪಿಸಿದ್ದು ಇದೇ ಮೊದಲು. ಕಳೆದ ವರ್ಷದ ಜನವರಿಯಲ್ಲಿ ಹಫೀಜ್ ಅವರು ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
ಹಫೀಜ್ ಅವರಿಗೆ ಕೋಚಿಂಗ್ ಹೊಣೆಯನ್ನೂ ವಹಿಸಲಾಗಿದ್ದು, ತಂಡಕ್ಕೆ ನೆರವು ಸಿಬ್ಬಂದಿ ನೇಮಕದ ವೇಳೆ ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ), ಅವರೊಂದಿಗೆ ಸಮಾಲೋಚನೆ ನಡೆಸಲಿದೆ. ಪಾಕಿಸ್ತಾನವು, ಮುಂದೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ.
2019ರಲ್ಲಿ ಮಿಸ್ಬಾ ಉಲ್ ಹಕ್ ಅವರನ್ನು ಮುಖ್ಯ ಕೋಚ್ ಮತ್ತು ಮುಖ್ಯ ಆಯ್ಕೆಗಾರನನ್ನಾಗಿ ನೇಮಕ ಮಾಡಲಾಗಿತ್ತು ಆದರೆ ವರ್ಷ ಕಳೆಯುವುದರೊಳಗೆ ಅವರು ಚೀಫ್ ಸೆಲೆಕ್ಟರ್ ಸ್ಥಾನ ತ್ಯಜಿಸಿದ್ದರು.
ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಅವರು ಲಾಹೋರ್‌ನಲ್ಲಿ ತಂಡದ ನಿರ್ಗಮಿತ ನಾಯಕ ಬಾಬರ್ ಆಜಂ ಅವರನ್ನು ಬುಧವಾರ ಭೇಟಿ ಮಾಡಿ ವಿಶ್ವಕಪ್‌ನಲ್ಲಿ ತಂಡದ ಹಿನ್ನಡೆಗೆ ವಿವರಣೆ ಕೇಳಿದ ಬಳಿಕ ಹಫೀಜ್ ನೇಮಕ ನಿರ್ಧಾರ ಹೊರಬಿದ್ದಿದೆ. ಈ ಭೇಟಿಯ ಬೆನ್ನಲ್ಲೇ, ಮೂರೂ ಮಾದರಿಗಳಲ್ಲಿ ತಂಡದ ನಾಯಕ ಸ್ಥಾನ ತೊರೆಯುವುದಾಗಿ ಬಾಬರ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪ್ರಕಟಿಸಿದ್ದರು.
ಟೆಸ್ಟ್ ತಂಡಕ್ಕೆ ಶಾನ್ ಮಸೂದ್ ಅವರನ್ನು ನೂತನ ನಾಯಕನನ್ನಾಗಿ ನೇಮಕ ಮಾಡಲಾಗಿದೆ. ಟಿ–20 ಕ್ರಿಕೆಟ್ ತಂಡಕ್ಕೆ ಶಹೀನ್ ಶಾ ಅಫ್ರೀದಿ ಅವರಿಗೆ ನಾಯಕತ್ವದ ಹೊಣೆ ವಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.