ದುಬೈ: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್ (114;100 ಎಸೆತ, 2 ಸಿಕ್ಸರ್, 16 ಬೌಂಡರಿ) ಮತ್ತು ರೋಹಿತ್ ಶರ್ಮಾ (ಅಜೇಯ 111; 119 ಎ, 4 ಸಿ, 7 ಬೌಂ) ಅವರ ಅಮೋಘ ಬ್ಯಾಟಿಂಗ್ ನೆರವಿ ನಿಂದ ಭಾರತ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಪಾಕಿಸ್ತಾನವನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿತು.
ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ 238 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಭಾರತ 39.3 ಓವರ್‌ಗಳಲ್ಲಿ ಜಯ ಗಳಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡವು ಜಸ್‌ಪ್ರೀತ್ ಬೂಮ್ರಾ ಮತ್ತು ಕುಲದೀಪ್ ಯಾದವ್ ಅವರ ಶಿಸ್ತಿನ ಬೌಲಿಂಗ್ ಎದುರು ಪರದಾಡಿತು.
ಶೋಯಬ್ ಮಲಿಕ್ ಅವರ ಅರ್ಧಶತಕದ ಬಲದಿಂದ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 237 ರನ್ ಗಳಿಸಿತು.
ಲೀಗ್ ಹಂತದ ಪಂದ್ಯದಲ್ಲಿ ಭಾರತ ತಂಡವು ಪಾಕ್ ವಿರುದ್ಧ ಸುಲಭ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇಮಾಮ್ ಉಲ್ ಹಕ್ ಮತ್ತು ಫಖ್ರ್ ಜಮಾನ್ ಎಚ್ಚರಿಕೆಯಿಂದ ಇನಿಂಗ್ಸ್ ಆರಂಭಿಸಿದರು. ಆದರೆ, ಎಂಟನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಯಜುವೇಂದ್ರ ಚಾಹಲ್ ಅವರು ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಇಮಾಮ್ ಔಟಾದರು.
ಎಂಟು ಓವರ್‌ಗಳ ನಂತರ ಚೈನಾಮೆನ್ ಬೌಲರ್ ಕುಲದೀಪ್ ಯಾದವ್ ಮೋಡಿ ಮಾಡಿದರು. 31 ರನ್ ಗಳಿಸಿದ್ದ ಜಮಾನ್ ಕೆಳಹಂತದ ಎಸೆತವನ್ನು ಆಡುವ ಪ್ರಯತ್ನದಲ್ಲಿ ಜಾರಿ ಬಿದ್ದರು. ಜೊತೆಗೆ ಎಲ್‌ಬಿಡಬ್ಲ್ಯು ಬಲೆಯಲ್ಲಿಯೂ ಸಿಕ್ಕಿಕೊಂಡರು.
ನಂತರದ ಓವರ್‌ನಲ್ಲಿ ಬಾಬರ್ ಅಜಮ್ ಅವರು ರನ್‌ಔಟ್ ಆದರು. ಇದರಿಂದಾಗಿ ತಂಡವು ಸಂಕಷ್ಷಕ್ಕೆ ಸಿಲುಕಿಕೊಂಡಿತು.
ಈ ಹಂತದಲ್ಲಿ ನಾಯಕ ಸರ್ಫರಾಜ್ ಅಹಮದ್ ಮತ್ತ್ತು ಅನುಭವಿ ಬ್ಯಾಟ್ಸ್‌ಮನ್ ಶೋಯಬ್ ಮಲಿಕ್ ಜೊತೆಗೂಡಿದರು.
ಆಕರ್ಷಕ ಹೊಡೆತಗಳನ್ನು ಆಡಿದ ಇಬ್ಬರೂ ತಂಡಕ್ಕೆ ಚೇತರಿಕೆ ನೀಡಿದರು. ಸರ್ಫರಾಜ್ ತಾಳ್ಮೆಯ ಅಟವಾಡಿದರು. ಆದರೆ ಮಲಿಕ್ ಹೆಚ್ಚು ಬಿರುಸು ಆಟಕ್ಕೆ ಒತ್ತು ನೀಡಿದರು. ಅವರು ಸಿಡಿಸಿದ ಎರಡು ಆಕರ್ಷಕ ಸಿಕ್ಸರ್‌ಗಳು ಪಾಕ್ ಅಭಿಮಾನಿಗಳಿಗೆ ರಸದೌತಣ ನೀಡಿದವು.
ಸರ್ಫರಾಜ್ (44; 66ಎಸೆತ) 39ನೇ ಓವರ್‌ನಲ್ಲಿ ಕುಲದೀಪ್ ಎಸೆತವನ್ನು ಹೊಡೆಯುವ ಯತ್ನದಲ್ಲಿ ರೋಹಿತ್ ಶರ್ಮಾಗೆ ಸುಲಭ ಕ್ಯಾಚ್ ನೀಡಿದರು. 107 ರನ್‌ಗಳ ನಾಲ್ಕನೇ ವಿಕೆಟ್ ಜೊತೆಯಾಟಕ್ಕೆ ತೆರೆಬಿತ್ತು.
44ನೇ ಓವರ್‌ನಲ್ಲಿ ಮಲಿಕ್ (78; 90ಎಸೆತ, 4ಬೌಂಡರಿ, 2ಸಿಕ್ಸರ್) ಅವರ ಆಟಕ್ಕೆ ಬೂಮ್ರಾ ತಡೆಯೊಡ್ಡಿದರು. ಅವರ ರಿವರ್ಸ್ ಸ್ವಿಂಗ್ ಕೆಣಕಿದ ಮಲಿಕ್ ಅವರು ವಿಕೆಟ್‌ಕೀಪರ್ ಧೋನಿಗೆ ಕ್ಯಾಚಿತ್ತರು.
ನಂತರ ಜೊತೆಗೂಡಿದ ಅಸಿಫ್ ಅಲಿ ಮತ್ತು ಶಾದಾಬ್ ಖಾನ್ ಅವರು ರನ್ ಗಳಿಸಲು ಯತ್ನಿಸಿದರು. ಈ ಜೊತೆಯಾಟವನ್ನೂ ಬೂಮ್ರಾ ಮುರಿದರು. ಶಾದಾಬ್ ಕ್ಲೀನ್‌ಬೌಲ್ಡ್ ಆದರು. ಅಸಿಫ್ ಅವರ ವಿಕೆಟ್ ಅನ್ನು ಚಾಹಲ್ ಕಬಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.