ADVERTISEMENT

ಭಾರತ ತಂಡಕ್ಕಾಗಿಯೇ ಟಿ20 ಕ್ರಿಕೆಟ್ ವಿಶ್ವಕಪ್ ಆಯೋಜನೆ: ಮೈಕೆಲ್ ವಾನ್ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 15:50 IST
Last Updated 27 ಜೂನ್ 2024, 15:50 IST
<div class="paragraphs"><p>ಮೈಕೆಲ್ ವಾನ್&nbsp;</p></div>

ಮೈಕೆಲ್ ವಾನ್ 

   

–ಎಕ್ಸ್‌ ಚಿತ್ರ

ಲಂಡನ್: ಈ ಬಾರಿಯ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನು ಭಾರತ ತಂಡಕ್ಕಾಗಿಯೇ ಮಾಡಲಾಗುತ್ತಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸ್ವಲ್ಪವಾದರೂ ನ್ಯಾಯಸಮ್ಮತವಾಗಿರಬೇಕಿತ್ತು ಎಂದು  ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ವೀಕ್ಷಕ ವಿವರಣೆಗಾರ ಮೈಕೆಲ್ ವಾನ್ ಟೀಕಿಸಿದ್ದಾರೆ.

ADVERTISEMENT

ಆರ್ಥಿಕವಾಗಿ ಬಲಾಢ್ಯವಾಗಿರುವ ಬಿಸಿಸಿಐ ಮತ್ತು ಭಾರತವು  ಐಸಿಸಿ ಮೇಲೆ ಪ್ರಭಾವ ಬೀರುತ್ತಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಈ ಟೂರ್ನಿಯು ಭಾರತ ತಂಡದ್ದೇ ಆಗಿದೆ ಅಲ್ಲವೇ? ತಮಗೆ ಅನುಕೂಲವಾದ ಸಮಯಕ್ಕೆ ಪಂದ್ಯಗಳನ್ನು ನಿಗದಿ ಮಾಡಿಸಿಕೊಂಡಿದ್ದಾರೆ. ವೇಳಾಪಟ್ಟಿಯು ಅವರ ಅನುಕೂಲಕ್ಕೆ ತಕ್ಕಂತೆ ಇದೆ. ಭಾರತ ತಂಡವು ಆಡಿದ ಪ್ರತಿಯೊಂದು ಪಂದ್ಯವೂ ಇಲ್ಲಿ (ಆತಿಥ್ಯದ ತಾಣ) ಬೆಳಗಿನ  ಅವಧಿಯಲ್ಲಿಯೇ ಆಯೋಜನೆಗೊಂಡಿವೆ. ಭಾರತದಲ್ಲಿ ಜನರು  ರಾತ್ರಿ ಹೊತ್ತು ಟಿ.ವಿ. ಯಲ್ಲಿ ಪಂದ್ಯದ ನೇರಪ್ರಸಾರ ನೋಡಲು ಸಾಧ್ಯವಾಗಲೆಂದು ಈ ರೀತಿ ಮಾಡಲಾಗಿದೆ. ಅದೇ ರೀತಿ ಅವರ (ಭಾರತ) ಸೆಮಿಫೈನಲ್ ಕೂಡ ಬೆಳಿಗ್ಗೆಯೇ ಇದೆ’ ಎಂದು ‘ಯೂಟ್ಯೂಬ್ ಚಾನೆಲ್ ಕ್ಲಬ್ ಕ್ಲಬ್ ಪ್ರಯರೀ ಫೈರ್‘  ಪಾಡ್‌ಕಾಸ್ಟ್‌ನಲ್ಲಿ ಅವರು ಆಸ್ಟ್ರೇಲಿಯಾದ ದಿಗ್ಗಜ ಆ್ಯಡಂ ಗಿಲ್‌ಕ್ರಿಸ್ಟ್‌ ಅವರೊಂದಿಗಿನ ಮಾತುಕತೆಯಲ್ಲಿ ಹೇಳಿದ್ದಾರೆ. 

‘ಐಸಿಸಿಯು ಎಲ್ಲ ದೇಶಗಳ ತಂಡಗಳಿಗೂ ಸಮಾನ ಆದ್ಯತೆ ನೀಡಬೇಕಿತ್ತು. ವಿಶ್ವಕಪ್ ಟೂರ್ನಿ ಎಂದ ಮೇಲೆ ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು. ಯಾರೊಬ್ಬರ ಬಗ್ಗೆ  ಕರುಣೆ ಅಥವಾ ಒಲವು ಇರುವುದು ಸರಿಯಲ್ಲ’ ಎಂದು ವಾನ್ ಹೇಳಿದ್ದಾರೆ. 

ವಾನ್ ಹೇಳಿಕೆಯನ್ನು ಸಮರ್ಥಿಸಿದ ಗಿಲ್‌ಕ್ರಿಸ್ಟ್‌, ‘ಕ್ರಿಕೆಟ್‌ ಬಗ್ಗೆ  ನಿಜವಾದ ಪ್ರೀತಿ ಇಟ್ಟುಕೊಂಡ ಅಭಿಮಾನಿಗಳೂ ಅಪಾರ ಸಂಖ್ಯೆಯಲ್ಲಿದ್ದಾರೆ.  ವೇಳಾಪಟ್ಟಿಯಲ್ಲಿ ರಾಜೀ ಮಾಡಿಕೊಳ್ಳಲಾಗಿದೆ ಎಂಬುದು ಅವರೆಲ್ಲರಿಗೂ ಗೊತ್ತಿದೆ. ಇಲ್ಲಿ ಭಾರತ ಉತ್ತಮ ತಂಡವಾಗಿದೆ. ಟೂರ್ನಿಯಲ್ಲಿ ಇದುವರೆಗೂ ಒಂದೂ ಪಂದ್ಯ ಸೋತಿಲ್ಲ. ದಕ್ಷಿಣ ಆಫ್ರಿಕಾ ಕೂಡ ಅಷ್ಟೇ. ಆದರೆ ಈ ಟೂರ್ನಿಯಲ್ಲಿ ಭಾರತ ಗೆದ್ದು ತೋರಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.