ಭಾರತೀಯ ಕ್ರಿಕೆಟ್‌ನ ವಿಕೆಟ್‌ಕೀಪರ್‌ಗಳಾದ ಪಾರ್ಥಿವ್ ಪಟೇಲ್ ಮತ್ತು ದಿನೇಶ್ ಕಾರ್ತಿಕ್ ಒಂದೇ ’ದೋಣಿ‘ಯ ಪಯಣಿಗರು.
ಪ್ರತಿಭೆ, ಕೌಶಲ ಮತ್ತು ಅನುಭವ ಬೆನ್ನಿಗೆ ಇದ್ದರೂ ಸಮಕಾಲೀನರ ಮತ್ತು ಯುವ ಆಟಗಾರರ ಪೈಪೋಟಿಯ ನಡುವೆ ಕಳೆದುಹೋಗುತ್ತಿದ್ದಾರೆ. ಗುಜರಾತಿನ ಪಾರ್ಥಿವ್,ತಮಿಳುನಾಡಿನ ದಿನೇಶ್ ಅವರಿಬ್ಬರಿಗೂ ಈಗ 35 ವರ್ಷಗಳಾಗಿದೆ. ಇದು ಅವರ ವೃತ್ತಿಜೀವನದ ಸಂಧ್ಯಾಕಾಲ. ಆದರೆ, ತಮ್ಮ ವೃತ್ತಿಜೀವನದ ಆರಂಭದ ಕಾಲದಲ್ಲಿಯೇ ಅವಕಾಶಗಳಿಲ್ಲದೇ ಹೊರಗುಳಿದ ಇಬ್ಬರೂ ಕಾಲಕ್ಕೆ ತಕ್ಕಂತೆ ತಮ್ಮನ್ನು ಹುರಿಗೊಳಿಸಿಕೊಳ್ಳುತ್ತಲೇ ಬಂದಿದ್ದಾರೆ.
ಆದರೂ ’ಯುವ ತಂಡ‘ ಕಟ್ಟುವ ಆಯ್ಕೆ ಸಮಿತಿಯ ಕಣ್ಣಿಗೆ ಈ ಸೀನಿಯರ್ ಆಟಗಾರರು ಬಿದ್ದಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಸರಣಿಯಲ್ಲಿ ಆಡುವ ಮೂರು ಮಾದರಿಗಳ ಭಾರತ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಈ ಇಬ್ಬರ ಹೆಸರುಗಳೂ ಇಲ್ಲ.
ಕೇರಳದ ಸಂಜು ಸ್ಯಾಮ್ಸನ್ ಟಿ20 ತಂಡಕ್ಕೆ ಆಯ್ಕೆಯಾಗಿದ್ದಾರೆ. ಟೆಸ್ಟ್‌ನಲ್ಲಿ ವೃದ್ಧಿಮಾನ್ ಸಹಾ ಮತ್ತು ರಿಷಭ್ ಪಂತ್ ವಿಕೆಟ್‌ಕೀಪರ್‌ಗಳಾಗಿ ಆಯ್ಕೆಯಾಗಿದ್ದಾರೆ. ಮೂರು ತಂಡಗಳಲ್ಲಿಯೂ ಕನ್ನಡಿಗ ಕೆ.ಎಲ್. ರಾಹುಲ್ ವಿಕೆಟ್‌ಕೀಪರ್ ಆಗಿ ಕಣಕ್ಕಿಳಿಯಲಿದ್ದಾರೆ. ಪಂದ್ಯ ಮತ್ತು ಪರಿಸ್ಥಿತಿಗೆ ತಕ್ಕಂತೆ ಅವರ ಪಾತ್ರ ನಿರ್ಧಾರವಾಗಲಿದೆ.
ಈಗ ದಿನೇಶ್ ಮತ್ತು ಪಾರ್ಥಿವ್ ವಿಷಯಕ್ಕೆ ಬರೋಣ. ಇವರು ಭಾರತ ತಂಡದಲ್ಲಿ ತಮ್ಮ ಛಾಪು ಮೂಡಿಸುವ ಸಮಯದಲ್ಲಿ ಮಹೇಂದ್ರಸಿಂಗ್ ಧೋನಿಯ ಯುಗ ಆರಂಭವಾಯಿತು. ಕೀಪಿಂಗ್‌ನಲ್ಲಿ ಹಲವು ಹೊಸತನಗಳನ್ನು ಹುಟ್ಟುಹಾಕಿದ ಧೋನಿ, ಬ್ಯಾಟ್ಸ್‌ಮನ್ ಮತ್ತು ಕೂಲ್ ಕ್ಯಾಪ್ಟನ್ ಆಗಿ ಬೆಳೆದಿದ್ದು ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಸ್ವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ.
ತಮ್ಮ ಸಾಧನೆಗಳಿಂದಾಗಿ ತಂಡದಲ್ಲಿ ಧೋನಿ ಗಟ್ಟಿಯಾಗಿದ್ದರಿಂದ ವಿಕೆಟ್ ಕೀಪಿಂಗ್‌ಗೆ ಬರುವವರಿಗೆ ಒಂದು ರೀತಿಯಲ್ಲಿ ಅವಕಾಶವೇ ಇಲ್ಲದಂತಾಗಿತ್ತು. ಏಕೆಂದರೆ ಧೋನಿಯನ್ನು ಹಿಂದಿಕ್ಕುವಂತಹ ಕೌಶಲಗಳನ್ನು ತೋರಿಸುವಲ್ಲಿ ಯುವ ವಿಕೆಟ್‌ಕೀಪರ್‌ಗಳಷ್ಟೇ ಅಲ್ಲ. ಅನುಭವಿಗಳು ಸಫಲರಾಗಿರಲಿಲ್ಲ.
ಅದರಲ್ಲಿ ಪಾರ್ಥಿವ್ ಮತ್ತು ದಿನೇಶ್ ಕೂಡ ಇದ್ದರು. ಆದರೂ ಛಲ ಬಿಡದ ಅವರು ಯುವ ಆಟಗಾರರೊಂದಿಗೆ ಸರಿಸಮನಾಗಿ ಸ್ಪರ್ಧಿಸುತ್ತಿದ್ದಾರೆ. ಟಿ20 ತಂಡಕ್ಕೆ ಈ ಬಾರಿಯ ಐಪಿಎಲ್ ಸಾಧನೆಯನ್ನೇ ಆಯ್ಕೆ ಸಮಿತಿಯು ಪರಿಗಣಿಸಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿರುವ ದಿನೇಶ್ 12 ಪಂದ್ಯಗಳಲ್ಲಿ ಆಡಿ ಐದು ಕ್ಯಾಚ್ ಪಡೆದಿದ್ದಾರೆ. 148 ರನ್ ಗಳಿಸಿದ್ದಾರೆ. ಅದರಲ್ಲಿ ಒಂದು ಅರ್ಧಶತಕ ಇದೆ. ಸಂಜು ಸ್ಯಾಮ್ಸನ್ ಅವರೇನೂ ದಿನೇಶ್‌ಗಿಂತ ದೊಡ್ಡ ಸಾಧನೆ ಮಾಡಿಲ್ಲ. ಆದರೂ ಅವರಿಗೆ ಹಿಂದೆಯೇ ನೀಡಬೇಕಿದ್ದ ಆದ್ಯತೆಯನ್ನು ಈಗ ನೀಡುವ ಪ್ರಯತ್ನ ಮಾಡಲಾಗಿದೆ.
ಆದರೆ ಈ ಐಪಿಎಲ್‌ನಲ್ಲಿ ಪಾರ್ಥಿವ್ ಪಟೇಲ್‌ಗೆ ಮಾತ್ರ ಬೆಂಚ್ ಬಿಟ್ಟು ಕಣಕ್ಕಿಳಿಯುವ ಅವಕಾಶವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಟ್ಟೇ ಇಲ್ಲ. ಏಕೆಂದರೆ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಜೊತೆಗೆ ಕೀಪಿಂಗ್ ಹೊಣೆಯನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಕರ್ನಾಟಕದ ಹುಡುಗ ದೇವದತ್ತ ಪಡಿಕ್ಕಲ್ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಗಟ್ಟಿತನ ತೋರಿಸುತ್ತಿದ್ದಾರೆ. ಇದರಿಂದಾಗಿ ಪಾರ್ಥಿವ್‌ಗೆ ಅವಕಾಶ ಸಿಕ್ಕಿಲ್ಲ.
ಪಾರ್ಥಿವ್ ಭಾರತ ಟೆಸ್ಟ್ ತಂಡದಲ್ಲಿ ಎರಡು ವರ್ಷಗಳ ಹಿಂದೆ ಕೊನೆಯ ಸಲ ಕಾಣಿಸಿಕೊಂಡಿದ್ದರು. ಏಕದಿನ ತಂಡದಲ್ಲಿ 2012 ಮತ್ತು ಟಿ 20 ತಂಡದಲ್ಲಿ 2011ರಲ್ಲಿ ಕೊನೆಯ ಪಂದ್ಯ ಆಡಿದ್ದರು. ಕಳೆದ 8–9 ವರ್ಷಗಳಲ್ಲಿ ಪಾರ್ಥಿವ್ ನಾಯಕತ್ವದ ಗುಜರಾತ್ ರಣಜಿ ತಂಡವು ಒಂದು ಸಲ ಚಾಂಪಿಯನ್ ಆಗಿತ್ತು. 2018ರಲ್ಲಿ ವೃದ್ಧಿಮಾನ್ ಸಹಾ ಅನುಪಸ್ಥಿತಿಯಲ್ಲಿ ಭಾರತ ತಂಡದಲ್ಲಿ ಟೆಸ್ಟ್ ಆಡುವ ಅವಕಾಶವನ್ನು ಪಾರ್ಥಿವ್ ಪಡೆದಿದ್ದರು. 2002ರಲ್ಲಿ ಪಾರ್ಥಿವ್ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 2003ರಲ್ಲಿ ಏಕದಿನ ತಂಡದಲ್ಲಿದ್ದರು. ನಯನ್ ಮೊಂಗಿಯಾ, ಸಾಬಾ ಕರೀಂ, ದೀಪ್‌ದಾಸ್ ಗುಪ್ತಾ, ಅಜಯ್ ರಾತ್ರಾ ಅವರ ನಂತರ ಪಾರ್ಥಿವ್ ಮತ್ತು ದಿನೇಶ್ ಭಾರತ ತಂಡದ ಭರವಸೆಯ ವಿಕೆಟ್‌ಕೀಪರ್‌ಗಳಾಗಿ ಕಂಡುಬಂದಿದ್ದರು. ಆದರೆ ಅದು ಅಸ್ಥಿರವಾಗಿತ್ತು.
ಮಹೇಂದ್ರಸಿಂಗ್ ಧೋನಿ ಹೊಳಪಿನ ಮುಂದೆ ಇವರಿಬ್ಬರೂ ಮಂಕಾದರು. 2014ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದಾಗ, ’ಬಂಗಾಳಿ ಬಾಬು‘ ವೃದ್ಧಿಮಾನ್ ಸಹಾ ಬೆಳಕಿಗೆ ಬಂದರು. ಟೆಸ್ಟ್ ವಿಕೆಟ್‌ಕೀಪಿಂಗ್‌ನಲ್ಲಿ ಒಂದೊಂದೇ ಮೆಟ್ಟಿಲೇರುತ್ತಿರುವ ಆಟಗಾರ ಸಹಾ. ಆದರೂ ಧೋನಿಯ ಸರಿಸಮಕ್ಕೆ ಬರಲು ಇನ್ನೂ ಬಹಳ ದೂರದ ಹಾದಿ ಸಾಗಬೇಕು ಇವರು. ಫಿಟ್‌ನೆಸ್ ಸವಾಲು ಕೂಡ ಇವರ ಮುಂದಿದೆ. ಆದ್ದರಿಂದ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಇವರಿಗೆ ಹೆಚ್ಚು ಅವಕಾಶ ಸಿಗುತ್ತಿಲ್ಲ.
ಇದೆಲ್ಲದರ ನಡುವೆ ದೆಹಲಿಯ ರಿಷಭ್ ಪಂತ್ ಐಪಿಎಲ್ ಮತ್ತು ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಬ್ಯಾಟಿಂಗ್ ಹಾಗೂ ಸ್ಟೈಲಿಷ್ ಕೀಪಿಂಗ್ ಮೂಲಕ ಗಮನ ಸೆಳೆದರು. ಧೋನಿಯ ವಾರಸುದಾರ ಎಂದೇ ಬಿಂಬಿತವಾದರು. ಇಂಗ್ಲೆಂಡ್, ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯದೊಂದಿಗೆ ಮಿಂಚಿದರು. ಆದರೆ ವಿಕೆಟ್‌ಕೀಪಿಂಗ್ ನಲ್ಲಿ ಪರಿಪಕ್ವತೆ ಕಾಣಲಿಲ್ಲ. ಹೋದ ವರ್ಷ ಕೊಟ್ಟ ಹಲವು ಅವಕಾಶಗಳಲ್ಲಿ ತಮ್ಮ ’ಚಿತ್ತಚಾಂಚಲ್ಯ‘ದಿಂದ ಆಟದಲ್ಲಿ ವೈಫಲ್ಯ ಅನುಭವಿಸಿದರು. ಅದು ಕನ್ನಡಿಗ ಕೆ.ಎಲ್. ರಾಹುಲ್ ಅವರು ಪ್ರವರ್ಧಮಾನಕ್ಕೆ ಬರಲು ಕಾರಣವಾಯಿತು.
ವಿಜಯ್ ಹಜಾರೆ ಟ್ರೋಫಿ ಸೇರಿದಂತೆ ದೇಶಿ ಪಂದ್ಯಗಳಲ್ಲಿ ರಾಹುಲ್ ತಮ್ಮ ಕೀಪಿಂಗ್ ಕೌಶಲಕ್ಕೆ ಸಾಣೆ ಹಿಡಿದರು. ಅದರ ಪ್ರತಿಫಲ ಈಗ ಲಭಿಸುತ್ತಿದೆ. ಟೆಸ್ಟ್ ತಂಡದಲ್ಲಿ ಕಳೆದುಕೊಂಡಿದ್ದ ಸ್ಥಾನವನ್ನೂ ಗಿಟ್ಟಿಸಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ ನಂತರ ಈ ರಾಹುಲ್ ಕೀಪಿಂಗ್ ಮಾಡುವುದನ್ನು ನೋಡುವ ಅವಕಾಶ ಲಭಿಸಲಿದೆ. ಇದೀಗ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕರಾಗಿ ರನ್‌ಗಳ ಹೊಳೆಯನ್ನೇ ಹರಿಸುತ್ತಿದ್ದಾರೆ. ಆರೆಂಜ್ ಕ್ಯಾಪ್ ಅವರ ತಲೆಯ ಮೇಲೆ ರಾರಾಜಿಸುತ್ತಿದೆ.
12 ಪಂದ್ಯಗಳಲ್ಲಿ ವಿಕೆಟ್‌ಕೀಪಿಂಗ್ ಮಾಡಿರುವ ಅವರು ಒಂಬತ್ತು ಕ್ಯಾಚ್‌ಗಳನ್ನು ಪಡೆದಿದ್ದಾರೆ. ಇದರಿಂದಾಗಿ ಸಹಜವಾಗಿಯೇ ಅವರು ಟೆಸ್ಟ್, ಏಕದಿನ ಮತ್ತು ಟಿ20 ಮಾದರಿಗಳಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಇದು ಅವರ ಅರ್ಹತೆ ಮತ್ತು ಪರಿಶ್ರಮಕ್ಕೆ ಸಂದ ಫಲ.
ಆದರೆ, ತಂಡದಲ್ಲಿ ಸ್ಥಾನ ಲಭಿಸಿದರೆ, ನಿರುಮ್ಮಳವಾಗಿರುವಂತೆ ಇಲ್ಲ. ಏಕೆಂದರೆ ವಿಕೆಟ್‌ಕೀಪಿಂಗ್‌ನಲ್ಲಿ ಭವಿಷ್ಯ ರೂಪಿಸಿಕೊಳ್ಳುವತ್ತ ಚಿತ್ತ ನೆಟ್ಟ ಯುವಪಡೆಯೂ ಇವರ ಹಿಂದೆ ಇದೆ. ಧೋನಿ ದಾಖಲೆಗಳನ್ನು ಮೀರಿ ನಿಲ್ಲುವ ಸವಾಲೂ ಇದೆ. ಇಶಾನ್ ಕಿಶನ್, ಎನ್. ಜಗದೀಶನ್, ಭರತ್ ಮತ್ತಿತರರು ಈ ಸಾಲಿನಲ್ಲಿದ್ದಾರೆ. ಧೋನಿ ನಿವೃತ್ತಿಯು ಅವಕಾಶದ ಹೆಬ್ಬಾಗಿಲು ತೆರೆದಿದೆ. ಆದರೆ ಈ ಎಲ್ಲ ಭರಾಟೆಯಲ್ಲಿ ಪಾರ್ಥಿವ್ ಮತ್ತು ದಿನೇಶ್ ಸ್ಥಾನ ಎಲ್ಲಿದೆ?
ಈ ಹಿಂದೆ ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ ನೆರಳಿನಲ್ಲಿ ಅಮೋಲ್ ಮಜುಂದಾರ್, ದಶಕಗಳ ಹಿಂದೆ ಬಿಷನ್ ಸಿಂಗ್ ಬೇಡಿ ಪ್ರಭಾವಳಿಯಲ್ಲಿ ಮಾಯವಾದ ರಾಜೀಂದರ್ ಗೋಯಲ್ ಅವರ ದುರದೃಷ್ಟದ ಕಥೆಗಳು ನಮ್ಮ ಮುಂದಿವೆ. ಅವರಿಗೆ ಭಾರತ ತಂಡದ ಪ್ರವೇಶ ಸಿಕ್ಕಿರಲಿಲ್ಲ. ಆ ಲೆಕ್ಕಕ್ಕೆ ನೋಡಿದರೆ ದಿನೇಶ್ ಮತ್ತು ಪಟೇಲ್ ತುಸು ಅದೃಷ್ಟವಂತರು ಎಂದೇ ಹೇಳಬಹುದು. ಇನ್ನು ಕನ್ನಡಿಗ ರಾಬಿನ್ ಉತ್ತಪ್ಪ ಕೂಡ ರಾಷ್ಟ್ರೀಯ ಬಳಗದಿಂದ ದೂರವೇ ಉಳಿಯುವುದು ಬಹುತೇಕ ಖಚಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.