ಬೆಂಗಳೂರು: ಹೋದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿದ್ದ ಶಿವಂ ದುಬೆ ಈಗ ಚುಟುಕು ಕ್ರಿಕೆಟ್‌ನಲ್ಲಿಯೂ ತಮ್ಮ ಆಟ ತೋರಿಸಲು ಸಿದ್ಧರಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಅವರು ಆಡುತ್ತಿದ್ದಾರೆ. ಕಣಕ್ಕಿಳಿಯುವ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಈಚೆಗೆ ಮುಂಬೈ ತಂಡದ ಎಡಗೈ ಬ್ಯಾಟ್ಸ್‌ಮನ್ ಶಿವಂ ಅವರು ಐಪಿಎಲ್ ಹರಾಜು ಪ್ರಕ್ರಿಯೆಯ ಮುನ್ನಾದಿನವೇ ರಣಜಿ ಪಂದ್ಯದಲ್ಲಿ ಐದು ಎಸೆತಗಳಲ್ಲಿ ಐದು ಸಿಕ್ಸರ್ ಹೊಡೆದು ಮಿಂಚಿದ್ದರು. ನಂತರ ಅವರು ಆರ್‌ಸಿಬಿಯಿಂದ ಐದು ಕೋಟಿ ರೂಪಾಯಿ ಮೌಲ್ಯ ಪಡೆದು ತಂಡ ಸೇರಿದ್ದರು. ಹೋದ ತಿಂಗಳು ಬೆನ್ನು ನೋವಿನಿಂದ ಬಳಲಿದ್ದ ಅವರು ಈಗ ಚೇತರಿಸಿಕೊಂಡಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಉತ್ಸಾಹದಿಂದ ಮಾತನಾಡಿದರು.
‘ನಾನು ಸ್ವಲ್ಪ ಒತ್ತಡದಲ್ಲಿದ್ದೆ. ಆದರೆ ಈಗ ಪರವಾಗಿಲ್ಲ. ಪ್ರತಿಯೊಬ್ಬ ಕ್ರಿಕೆಟಿಗನಿಗೂ ಭಾರತ ತಂಡದಲ್ಲಿ ಮತ್ತು ಐಪಿಎಲ್‌ನಲ್ಲಿ ಆಡುವ ಗುರಿ ಇರುತ್ತದೆ. ಪ್ರತಿಷ್ಠಿತ ಐಪಿಎಲ್‌ನಲ್ಲಿ ಆಡುವ ನನ್ನ ಕನಸು ಈಗ ಕೈಗೂಡುತ್ತಿದೆ’ ಎಂದರು.
‘ಮಧ್ಯಮ ಕ್ರಮಾಂಕದಲ್ಲಿ ಆಡುವ ಹೊಣೆಯನ್ನು ನನಗೆ ನೀಡಲಾಗಿದೆ. ಫಿನಿಷರ್ ಆಗಿ ಹೊರಹೊಮ್ಮುವ ಗುರಿ ನನ್ನದು. ಆರು ಆಥವಾ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಹೋಗ ಬೇಕು ಎಂದು ಕೋಚ್ ಆಶಿಶ್ ನೆಹ್ರಾ ಮತ್ತು ಗ್ಯಾರಿ (ಕರ್ಸ್ಟನ್) ಸರ್ ಹೇಳಿದ್ದಾರೆ. ತಂಡದ ಅಗತ್ಯಕ್ಕೆ ತಕ್ಕಂತೆ ಆಡುವುದು ನನ್ನ ಜವಾಬ್ದಾರಿ’ ಎಂದು ದುಬೆ ಹೇಳಿದರು.
ತಮಗೆ ಹರಾಜು ಪ್ರಕ್ರಿಯೆಯಲ್ಲಿ ಲಭಿಸಿದ ಮೌಲ್ಯದ ಕುರಿತು ಪ್ರತಿಕ್ರಿಯಿಸಿದ ಅವರು, ‘ಐದು ಕೋಟಿ ರೂಪಾಯಿ ಕುರಿತು ಹೆಚ್ಚು ಯೋಚಿಸುತ್ತಿಲ್ಲ. ನಾನು ಇಲ್ಲಿರುವುದು ಕ್ರಿಕೆಟ್ ಆಡಲು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದೆ. ಆದ್ದರಿಂದ ಐಪಿಎಲ್‌ನಲ್ಲಿ ಅವಕಾಶ ಲಭಿಸುವ ನಿರೀಕ್ಷೆ ಇತ್ತು. ಅದು ನಿಜವಾಗಿದೆ. ಆದರೆ, ಹಣ ಎಷ್ಟು ಸಿಗಬಹುದು ಎಂದು ಯೋಚಿಸಿರಲಿಲ್ಲ’ ಎಂದರು. ಶಿವಂ ದುಬೆ ಅವರು ಮುಂಬೈ ಕ್ರಿಕೆಟ್ ವಲಯದಲ್ಲಿ ದೊಡ್ಡ ಹೊಡೆತಗಳ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ. ‘ಪವರ್ ಹಿಟ್ಟರ್‘ ಆಗಿದ್ದಾರೆ.
‘ಇದೊಂದು ದೈವದತ್ತ ಕಾಣಿಕೆಯಾಗಿದೆ. ನಾನು ಚಿಕ್ಕವನಿದ್ದಾಗ ಬಹಳಷ್ಟು ಸಿಕ್ಸರ್‌ಗಳನ್ನು ಹೊಡೆಯುತ್ತಿದ್ದೆ. ಆದ್ದರಿಂದ ಕೋಚ್ ಗಳು ನನ್ನ ತಂದೆಗೆ, ನಿಮ್ಮ ಮಗ ಬಹಳ ಬಲಶಾಲಿ ಇದ್ದಾನೆ ಎಂದು ಹೇಳು ತ್ತಿದ್ದರು. ಈಗಲೂ ಅದೇ ಲಯ ಮುಂದುವರಿಸಿದ್ದೇನೆ’ ಎಂದು ನಕ್ಕರು ದುಬೆ.
‘ಮಧ್ಯಮವೇಗಿಯಾಗಿಯೂ ನಾನು ಸಫಲತೆ ಕಾಣಬೇಕು. ಅದಕ್ಕಾಗಿ ಎಸೆತಗಳಲ್ಲಿ ವೇಗವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ವಿಶೇಷ ಕೌಶಲ ರೂಢಿಸಿಕೊಳ್ಳುತ್ತಿದ್ದೇನೆ. ಅಭ್ಯಾಸ ಮಾಡುತ್ತಿದ್ದೇನೆ. ಬೌಲಿಂಗ್ ಆಲ್‌ರೌಂಡರ್ ಅಥವಾ ಬ್ಯಾಟಿಂಗ್ ಆಲ್‌ರೌಂಡರ್ ಎಂದು ಗುರುತಿಸಿಕೊಳ್ಳಲು ನನಗೆ ಇಷ್ವವಿಲ್ಲ. ಆದರೆ, ಪರಿಣತ ಆಲ್‌ರೌಂಡರ್ ಆಗಿ ಬೆಳೆಯುವ ಗುರಿ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.