ನವದೆಹಲಿ: ಭಾರತದಲ್ಲಿ ನಡೆಸಲು ಉದ್ದೇಶಿಸಿದ್ದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ತಿಳಿಸಿದೆ.
ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಯುಎಇಯಲ್ಲಿ ಟೂರ್ನಿಯನ್ನು ಆಯೋಜಿಸಲು ಸಿದ್ಧ ಇರುವುದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ (ಐಸಿಸಿ) ತಿಳಿಸಲಾಗಿದೆ. ದೇಶದಲ್ಲಿ ಕೋವಿಡ್ ಆತಂಕ ಇನ್ನೂ ಇದೆ. ಪ್ರಯಾಣ ನಿರ್ಬಂಧಗಳು ಕೂಡ ಜಾರಿಯಲ್ಲಿವೆ. ಇಂಥ ಸಂದರ್ಭದಲ್ಲಿ ಟೂರ್ನಿ ಆಯೋಜನೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದು ಕಷ್ಟಸಾಧ್ಯ’ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ತಿಳಿಸಿದ್ದಾರೆ.
ಅರ್ಹತಾ ಸುತ್ತಿನ ಪಂದ್ಯಗಳನ್ನು ಒಮಾನ್‌ನಲ್ಲಿ ಆಯೋಜಿಸಲಾಗುವುದು. ಉಳಿದ ಪಂದ್ಯಗಳು ದುಬೈ, ಅಬುಧಾಬಿ ಮತ್ತು ಶಾರ್ಜಾದಲ್ಲಿ ನಡೆಯಲಿವೆ ಎಂದು ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ಮುಂದೂಡಿರುವ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲು ಬಿಸಿಸಿಐ ಈಗಾಗಲೇ ನಿರ್ಧರಿಸಿದೆ. ಟೂರ್ನಿಯನ್ನು ಎಲ್ಲಿ ಆಯೋಜಿಸಲಾಗುತ್ತದೆ ಎಂಬುದನ್ನು ಜೂನ್ ಅಂತ್ಯದೊಳಗೆ ತಿಳಿಸುವಂತೆ ಬಿಸಿಸಿಐಗೆ ಐಸಿಸಿ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.