ADVERTISEMENT

ಐಪಿಎಲ್‌ ಟೀಕಿಸಿದ ಡೇಲ್ ಸ್ಟೇಯ್ನ್‌ಗೆ ಟ್ವಿಟರ್‌ನಲ್ಲಿ ವ್ಯಂಗ್ಯ, ಕುಹಕದ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2021, 14:51 IST
Last Updated 2 ಮಾರ್ಚ್ 2021, 14:51 IST
ಐಪಿಎಲ್‌ನಲ್ಲಿ ಡೇಲ್ ಸ್ಟೇಯ್ನ್ ಬೌಲಿಂಗ್ – ಎಎಫ್‌ಪಿ ಸಂಗ್ರಹ ಚಿತ್ರ
ಐಪಿಎಲ್‌ನಲ್ಲಿ ಡೇಲ್ ಸ್ಟೇಯ್ನ್ ಬೌಲಿಂಗ್ – ಎಎಫ್‌ಪಿ ಸಂಗ್ರಹ ಚಿತ್ರ   

ಬೆಂಗಳೂರು: ಐಪಿಎಲ್ ಟಿ20 ಟೂರ್ನಿಯಲ್ಲಿ ಹಣಕ್ಕೇ ಹೆಚ್ಚು ಮಹತ್ವ ನೀಡಲಾಗುತ್ತಿದೆ ಎಂದು ಟೀಕಿಸಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಡೇಲ್ ಸ್ಟೇಯ್ನ್ ಅವರನ್ನು ಟ್ವಿಟರ್‌ನಲ್ಲಿ ಅನೇಕರು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಈ ಹಿಂದಿನ ಋತುಗಳಲ್ಲಿ ಐಪಿಎಲ್‌ ಪಂದ್ಯಗಳಲ್ಲಿ ಆಡಿ ದುಡ್ಡು ತೆಗೆದುಕೊಂಡಾಗ ಅವರಿಗೆ ಇದು ನೆನಪಿರಲಿಲ್ಲವೇ? ಕಳಪೆ ಪ್ರದರ್ಶನ ತೋರಿದ್ದು ಮರೆತು ಹೋಯಿತೇ?’ ಎಂದೆಲ್ಲಾ ಟ್ವಿಟರ್‌ನಲ್ಲಿ ಸ್ಟೇಯ್ನ್ ಕುರಿತು ವ್ಯಂಗ್ಯದ ಸಂದೇಶಗಳು ಹರಿದಾಡುತ್ತಿವೆ.

‘ಅಚ್ಚರಿಯ ಹೇಳಿಕೆ! ಆದರೆ ಅವರ ಅಭಿಪ್ರಾಯವನ್ನು ಒಪ್ಪಿಕೊಳ್ಳೋಣ. ಐಪಿಎಲ್‌ನಲ್ಲಿ ಇರುವಂತೆ ಉತ್ತಮ ಗುಣಮಟ್ಟದ ಆಟಗಾರರು ಅಲ್ಲಿ (ಪಾಕಿಸ್ತಾನ್ ಸೂಪರ್‌ ಲೀಗ್‌/ ಪಿಎಸ್‌ಎಲ್‌ನಲ್ಲಿ) ಇಲ್ಲದ ಕಾರಣ ಅವರು ಅಲ್ಲಿ ಉತ್ತಮ ಪ್ರದರ್ಶನ ತೋರಬಹುದು’ ಎಂದು ರಿಷು ರಾಜ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಮಾರಾಟವಾಗದ ಈ ಆಟಗಾರ ಐಪಿಎಲ್‌ಗಿಂತಲೂ ಪಿಎಸ್‌ಎಲ್‌ನಲ್ಲಿ ಹೆಚ್ಚು ವಿಕೆಟ್ ಗಳಿಸಬಹುದು ಎಂದು ಆಶಿಶ್ ಶ್ರೀವಾಸ್ತವ ಎಂಬುವವರು ವ್ಯಂಗ್ಯವಾಡಿದ್ದಾರೆ.

ಸ್ಟೇಯ್ನ್ ಅವರು ಐಪಿಎಲ್‌ನಿಂದ ಒಟ್ಟು ₹47 ಕೋಟಿ ಹಾಗೂ ಪಿಎಸ್‌ಎಲ್‌ನಿಂದ ₹36 ಲಕ್ಷ ಗಳಿಸಿದ್ದಾರೆ. ಬಹುಶಃ ಆ ಸಮಯದಲ್ಲಿ ಅವರು ಎಂದಿಗೂ ಹಣದ ಬಗ್ಗೆ ಯೋಚಿಸಲಿಲ್ಲವೇ?’ ಎಂದು ಆಶ್ ಮೆಹ್ತಾ ಎಂಬುವವರು ಪ್ರಶ್ನಿಸಿದ್ದಾರೆ. ಜತೆಗೆ, ಸ್ಟೇಯ್ನ್‌ ಯಾವಾಗಲೆಲ್ಲ ಐಪಿಎಲ್‌ನಲ್ಲಿ ಆಡಿದ್ದಾರೆ ಎಂಬ ವಿವರವುಳ್ಳ ಚಿತ್ರವನ್ನೂ ಲಗತ್ತಿಸಿದ್ದಾರೆ.

‘ನರಿ ಮತ್ತು ದ್ರಾಕ್ಷಿ ಹುಳಿ’ ಕತೆಗೆ ಡೇಲ್ ಸ್ಟೇಯ್ನ್ ಉತ್ತಮ ಉದಾಹರಣೆ. ಅವರೊಬ್ಬ ದಂಥಕತೆ ಎಂಬುದರಲ್ಲಿ ಮಾತಿಲ್ಲ. ಇದು ಕೇವಲ ತಮಾಷೆಗಾಗಿ ಎಂದು ಉಮಂಗ್ ಮಿಶ್ರಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ಸ್ಟೇಯ್ನ್ ಬೌಲಿಂಗ್‌ನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಎಂ.ಎಸ್.ಧೋನಿ ಅವರ ಸ್ಟ್ರೈಕ್‌ರೇಟ್ 109.75 ಇದೆ. ಐಪಿಎಲ್‌ನಲ್ಲಿ ಸ್ಟೇಯ್ನ್ ಬೌಲಿಂಗ್‌ನಲ್ಲಿ 56 ಎಸೆತಗಳಲ್ಲಿ ಧೋನಿ 103 ರನ್ ಗಳಿಸಿದ್ದಾರೆ. ಇದು 183.93 ಸ್ಟ್ರೈಕ್‌ರೇಟ್‌ನೊಂದಿಗೆ’ ಎಂದು ಸುಮಿತ್ ಪಾಂಡೆ ಟ್ವೀಟ್ ಮಾಡಿದ್ದಾರೆ.

ಬಹುಶಃ ಇವರು (ಸ್ಟೇಯ್ನ್) ಸಂದರ್ಶನ ನೀಡುವ ವೇಳೆ ಮದ್ಯಪಾನ ಮಾಡಿರಬಹುದು ಹಾಗೂ ಉತ್ತಮ ಪ್ರದರ್ಶನ ನೀಡುವವರಿಗೆ ಒಳ್ಳೆಯ ಹಣ ನೀಡಲಾಗುತ್ತದೆ ಎಂಬುದನ್ನು ಮರೆತಿರಬೇಕು. 2015ರ ನಂತರ ಕಳೆದ 5 ಐಪಿಎಲ್‌ನಲ್ಲಿ ಅವರು ಗಳಿಸಿದ್ದು ಕೇವಲ 8 ವಿಕೆಟ್ ಎಂದು ‘ಸರ್ಕಾಸ್ಟಿಕ್ ನಾಟ್ ಟಾಕ್ಸಿಕ್’ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.