ದುಬೈ: ಎಸಿಸಿ 19 ವರ್ಷದೊಳಗಿನ ಪುರುಷರ ಏಷ್ಯಾ ಕಪ್ 2023 ಕ್ರಿಕೆಟ್ ಟೂರ್ನಿಯಲ್ಲಿ 'ಎ' ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ನೇಪಾಳ ವಿರುದ್ಧ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಭಾರತ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
ಉದಯೋನ್ಮುಖ ಪ್ರತಿಭೆ ರಾಜ್ ಲಿಂಬಾನಿ ಮಾರಕ ದಾಳಿಗೆ ತತ್ತರಿಸಿದ ನೇಪಾಳ 22.1 ಓವರ್‌ಗಳಲ್ಲಿ 52 ರನ್ನಿಗೆ ಆಲೌಟ್ ಆಯಿತು.
ನೇಪಾಳದ ಪರ ಯಾವ ಬ್ಯಾಟರ್ ಎರಡಂಕಿಯನ್ನು ತಲುಪಲಿಲ್ಲ. ಇತರೆ ರನ್ ರೂಪದಲ್ಲಿ 13 ರನ್ ದಾಖಲಾಗಿತ್ತು.
ನೇಪಾಳ ಬ್ಯಾಟರ್‌ಗಳ ಸ್ಕೋರ್ ಕಾರ್ಡ್ ಹೀಗಿತ್ತು: 1, 7, 0, 2, 4, 0, 7, 4, 2, 8, 4*
18 ವರ್ಷದ ಬರೋಡ ಮೂಲದ ಬೌಲರ್ ಆಗಿರುವ ಲಿಂಬಾನಿ 9.1 ಓವರ್‌ಗಳಲ್ಲಿ 13 ರನ್ ತೆತ್ತು ಏಳು ವಿಕೆಟ್ ಕಬಳಿಸಿ ಮಿಂಚಿದರು. ಇದರಲ್ಲಿ ಮೂರು ಮೇಡನ್ ಓವರ್ ಸೇರಿದ್ದವು.
ಬಳಿಕ ಗುರಿ ಬೆನ್ನಟ್ಟಿದ ಭಾರತ ವಿಕೆಟ್ ನಷ್ಟವಿಲ್ಲದೆ 7.1 ಓವರ್‌ಗಳಲ್ಲಿ ಗೆಲುವು ದಾಖಲಿಸಿತು. ಅರ್ಷಿನ್ ಕುಲಕರ್ಣಿ 43* ಹಾಗೂ ಆದರ್ಶ್ ಸಿಂಗ್ 13* ರನ್ ಗಳಿಸಿ ಅಜೇಯರಾಗುಳಿದರು.
ಅಫ್ಗಾನಿಸ್ತಾನ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದ ಭಾರತ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಪರಾಭವಗೊಂಡಿತ್ತು.
ಡಿಸೆಂಬರ್ 15ರಂದು ಸೆಮಿಫೈನಲ್ ಹಾಗೂ ಡಿ.17ರಂದು ಫೈನಲ್ ಪಂದ್ಯ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.