ಬೆನೊನಿ, ದಕ್ಷಿಣ ಆಫ್ರಿಕಾ: ಆರನೇ ಬಾರಿ ವಿಶ್ವಕಪ್ ಗೆದ್ದು ದಾಖಲೆ ಬರೆಯುವ ಭಾರತದ 19 ವರ್ಷದೊಳಗಿನವರ ತಂಡದ ಕನಸು ಕಮರಿತು.
ಭಾನುವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 79 ರನ್‌ಗಳಿಂದ ಗೆದ್ದು ನಾಲ್ಕನೇ ಸಲ ಪ್ರಶಸ್ತಿ ಜಯಿಸಿತು. 2010ರ ನಂತರ ತಂಡವು ಗೆದ್ದ ವಿಶ್ವಕಪ್ ಇದಾಗಿದೆ. ಇದರೊಂದಿಗೆ 2010 ಮತ್ತು 2018ರಲ್ಲಿ ಭಾರತದ ಎದುರು ಅನುಭವಿಸಿದ್ದ ಸೋಲಿಗೆ ತಿರುಗೇಟು ನೀಡಿತು. ಹೋದ ಬಾರಿ ಚಾಂಪಿಯನ್ ಆಗಿದ್ದ ಭಾರತವು ಈ ಬಾರಿ ರನ್ನರ್ಸ್ ಅಪ್ ಆಯಿತು.
ಆಸ್ಟ್ರೇಲಿಯಾ ವೇಗಿ ಮಹ್ಲಿ ಬಿಯರ್ಡ್‌ಮ್ಯಾನ್ (15ಕ್ಕೆ3) ಅವರ ದಾಳಿಗೆ ಭಾರತ ತಂಡವು ಕುಸಿಯಿತು.
ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಹ್ಯೂಗ್ ವೆಬ್‌ಜೆನ್ (48; 66ಎ) ಮತ್ತು ಹರ್ಜಾಸ್ ಸಿಂಗ್ (55; 64ಎ) ಅವರ ಬ್ಯಾಟಿಂಗ್‌ನಿಂದಾಗಿ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 253 ರನ್ ಗಳಿಸಿತು.
ಇದಕ್ಕುತ್ತರವಾಗಿ ಭಾರತ ತಂಡವು 43.5 ಓವರ್‌ಗಳಲ್ಲಿ 174 ರನ್ ಗಳಿಸಿತು. ಟೂರ್ನಿಯುದ್ದಕ್ಕೂ ಮಿಂಚಿದ್ದ ಉದಯ್ ಸಹರಾನ್, ಸಚಿನ್ ದಾಸ್, ಮುಷೀರ್ ಖಾನ್ ಮತ್ತು ಆದರ್ಶ್ ಸಿಂಗ್ ಅವರನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳು ಸಫಲರಾದರು. ಒಂದು ಹಂತದಲ್ಲಿ ಭಾರತ ತಂಡವು 90 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು.
ಆರಂಭಿಕ ಬ್ಯಾಟರ್ ಆದರ್ಶ್ ಸಿಂಗ್ (47; 77ಎ) ಮತ್ತು ಮುರುಗನ್ ಅಭಿಷೇಕ್ (42; 46ಎ) ಅವರು ತಂಡಕ್ಕೆ ಬಲ ತುಂಬುವ ಪ್ರಯತ್ನ ಮಾಡಿದರು. ಆದರೆ ಉಳಿದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು.
ಆಸ್ಟ್ರೇಲಿಯಾದ ಎಲ್ಲ ಬೌಲರ್‌ಗಳು ಭರ್ತಿ ಆತ್ಮವಿಶ್ವಾಸದಿಂದ ಶಿಸ್ತಿನ ಬೌಲಿಂಗ್ ಮಾಡಿದರು. ಬಿಯರ್ಡ್‌ಮ್ಯಾನ್ ಅಲ್ಲದೇ ರಾಫ್ ಮ್ಯಾಕ್‌ಮಿಲನ್ ಕೂಡ ಮೂರು ವಿಕೆಟ್ ಗಳಿಸಿದರು. ಕ್ಯಾಲಂ ವಿಡ್ಲೆರ್ ಎರಡು ವಿಕೆಟ್ ಗಳಿಸಿದರು. ಸೆಮಿಫೈನಲ್‌ನಲ್ಲಿ ಮಿಂಚಿದ್ದ ಟಾಮ್ ಸ್ಟ್ರೇಕರ್ ಇಲ್ಲಿ ಒಂದು ವಿಕೆಟ್ ಮಾತ್ರ ಪಡೆದರು.
ಹೋದ ವರ್ಷ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೀನಿಯರ್ ತಂಡವು ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಬಳಗದ ಎದುರು ಸೋತಿತ್ತು. ಇದೀಗ ಉದಯ್ ಸಹರಾನ್ ನೇತೃತ್ವದ ಯುವಪಡೆಯೂ ಆಸ್ಟ್ರೇಲಿಯಾ ತಂಡದ ಎದುರು ಮಣಿಯಿತು.
ಸಂಕ್ಷಿಪ್ತ ಸ್ಕೋರು:ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 253 (ಹ್ಯಾರಿ ಡಿಕ್ಸನ್ 42, ಹ್ಯೂಗ್ ವೆಬ್‌ಜೆನ್ 48, ಹರ್ಜಾಸ್ ಸಿಂಗ್ 55, ರಿಯಾನ್ ಹಿಕ್ಸ್ 20, ಒಲಿವರ್ ಪೀಕ್ ಔಟಾಗದೆ 46, ರಾಜ್ ಲಿಂಬಾನಿ 38ಕ್ಕೆ3, ನಮನ್ ತಿವಾರಿ 63ಕ್ಕೆ2) ಭಾರತ: 43.5 ಓವರ್‌ಗಳಲ್ಲಿ 174 (ಆದರ್ಶ್ ಸಿಂಗ್ 47, ಮುಷೀರ್ ಖಾನ್ 22, ಮುರುಗನ್ ಅಭಿಷೇಕ್ 42, ನಮನ್ ತಿವಾರಿ ಔಟಾಗದೆ 14, ಕ್ಯಾಲಂ ವಿಡೇರ್ 35ಕ್ಕೆ2, ಮಹ್ಲಿ ಬಿಯರ್ಡ್‌ಮ್ಯಾನ್ 15ಕ್ಕೆ3, ರ‍್ಯಾಫ್ ಮ್ಯಾಕ್‌ಮಿಲನ್ 43ಕ್ಕೆ3) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 79 ರನ್‌ಗಳ ಜಯ. ಪಂದ್ಯ ಶ್ರೇಷ್ಠ: ಮಹ್ಲಿ ಬಿಯರ್ಡ್‌ಮ್ಯಾನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.