ಬೆನೋನಿ (ದಕ್ಷಿಣ ಆಫ್ರಿಕಾ): ಐಸಿಸಿ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದ ಪಾಕಿಸ್ತಾನ 179 ರನ್ ಗಳಿಸಿ ಆಲೌಟ್ ಆಗಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ಬ್ಯಾಟರ್‌ಗಳು, ಆಸಿಸ್ ವೇಗಿಗಳ ಬಿರುಗಾಳಿಯಂಥ ದಾಳಿ ಎದುರು ದಿಕ್ಕೆಟ್ಟರು.
ಪಾಕ್ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದ ವೇಗಿ ಟಾಮ್ ಸ್ಟ್ರಾಕರ್, 9.5 ಓವರ್‌ಗಳಲ್ಲಿ ಒಂದು ಮೇಡನ್ ಸಹಿತ ಕೇವಲ 24 ರನ್ ಬಿಟ್ಟುಕೊಟ್ಟು ಪ್ರಮುಖ 6 ವಿಕೆಟ್‌ಗಳನ್ನು ಕಬಳಿಸಿದರು. ಅವರಿಗೆ ಉತ್ತಮ ಸಹಕಾರ ನೀಡಿದ ಮಹ್ಲಿ ಬಿಯರ್ಡ್‌ಮನ್, ಕಲ್ಲಮ್ ವಿಡ್ಲೆರ್, ರಾಫ್ ಮೆಕ್‌ಮಿಲನ್ ಮತ್ತು ಟಾಮ್ ಕ್ಯಾಂಪ್‌ಬೆಲ್ ತಲಾ ಒಂದೊಂದು ವಿಕೆಟ್ ಕಿತ್ತರು.
ಸಾದ್ ಬೇಗ್ ನೇತೃತ್ವದ ಪಾಕ್ ಯುವ ಪಡೆಯ ಶಮೈಲ್ ಹುಸೇನ್ 17 ರನ್ ಗಳಿಸಿದರೆ, ಅಜಾನ್ ಅವೈಸ್ ಮತ್ತು ಅರಾಫತ್ ಮಿನ್ಹಾಸ್ ತಲಾ 52 ರನ್ ಹೊಡೆದರು. ಈ ಮೂವರನ್ನು ಹೊರತುಪಡಿಸಿದರೆ, ಉಳಿದ ಯಾರಿಗೂ ಎರಡಂಕಿ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.
ಸಾಧಾರಣ ಗುರಿ ಬೆನ್ನತ್ತಿರುವ ಆಸಿಸ್ 5 ಓವರ್‌ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ.
ಸದ್ಯ ಪಾಕಿಸ್ತಾನ ತಂಡದ ಪ್ರಮುಖ ವೇಗಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವೇಗಿ ನಶೀಮ್ ಶಾ ಅವರ ತಮ್ಮ ಉಬೇದ್ ಶಾ, ಪಾಕ್ ಪಡೆಯ ಪ್ರಮುಖ ಅಸ್ತ್ರವಾಗಿದ್ದಾರೆ. ಸದ್ಯದ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಅವರು, ನಿರ್ಣಾಯಕ ಸಂದರ್ಭಗಳಲ್ಲಿ ವಿಕೆಟ್ ಪಡೆಯವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಈ ದಿನವೂ ತಮ್ಮ ತಂಡದ ಜಯಕ್ಕೆ ಕಾರಣರಾಗುವರೇ ಎಂಬುದನ್ನು ಕಾದುನೋಡಬೇಕಿದೆ.
ಗೆದ್ದವರಿಗೆ ಭಾರತದ ಸವಾಲು
ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಜಯ ಸಾಧಿಸಿರುವ ಭಾರತ ತಂಡ ಒಂಬತ್ತನೇ ಸಲ ಫೈನಲ್‌ಗೇರಿದ ಸಾಧನೆ ಮಾಡಿದೆ.
ಇಂದು ನಡೆಯುತ್ತಿರುವ ಎರಡನೇ ಸೆಮಿಫೈನಲ್‌ನಲ್ಲಿ ಗೆದ್ದವರು ಭಾರತದೊಂದಿಗೆ ಭಾನುವಾರ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.
ಭಾರತ–ಪಾಕಿಸ್ತಾನ ತಂಡಗಳು 2006ರಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಕೊನೆಯ ಬಾರಿ ಮುಖಾಮುಖಿ ಆಗಿದ್ದವು. ಆಗ ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ ಮತ್ತು ರವೀಂದ್ರ ಜಡೇಜ ಟಿಂ ಇಂಡಿಯಾ ಪರ ಆಡಿದ್ದರು. ಆದರೆ, ಸರ್ಫರಾಜ್ ಅಹ್ಮದ್ ನೇತೃತ್ವದ ಪಾಕ್ ಪಡೆ ಪ್ರಶಸ್ತಿ ಗೆದ್ದುಕೊಂಡಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಪಾಕ್, 109 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಗುರಿ ಎದುರು ಭಾರತ ಕೇವಲ 79 ರನ್ ಗಳಿಸಿ ಮುಗ್ಗರಿಸಿತ್ತು. 8 ಹಾಗೂ 9ನೇ ಕ್ರಮಾಂಕದಲ್ಲಿ ಆಡಿದ್ದ ಪಿಯೂಷ್ ಚಾವ್ಲಾ ಅಜೇಯ 25 ರನ್ ಮತ್ತು ಪಿನಾಲ್ ಶಾ 16 ರನ್ ಗಳಿಸಿದ್ದರು. ಐವರು ಸೊನ್ನೆ ಸುತ್ತಿದ್ದರು. ಉಳಿದ ನಾಲ್ಕು ಮಂದಿ ಒಂದಂಕ್ಕಿಗಿಂತ ಹೆಚ್ಚು ರನ್ ಗಳಿಸಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.