ನವದೆಹಲಿ: ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ 19 ವರ್ಷದೊಳಗಿನವರ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತ ತಂಡವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿನಂದಿಸಿದ್ದಾರೆ. ಇದೇ ವೇಳೆ ಆಟಗಾರರಿಗೆ 40 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ತಂಡವನ್ನು ಅಭಿನಂದಿಸಿ ಟ್ವೀಟಿಸಿರುವ ಗಂಗೂಲಿ 'ಅತ್ಯುತ್ತಮ ರೀತಿಯ ಪ್ರದರ್ಶನದ ಮೂಲಕ ವಿಶ್ವಕಪ್ ಗೆದ್ದಿರುವ 19 ವರ್ಷದೊಳಗಿನ ತಂಡ, ಸಿಬ್ಬಂದಿ ಹಾಗೂ ಆಯ್ಕೆದಾರರಿಗೆ ಅಭಿನಂದನೆಗಳು...ಅವರಿಗೆ ಪ್ರೋತ್ಸಾಹಕವಾಗಿ ನಾವು 40 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದೇವೆ. ಆದರೆ, ಅವರ ಪ್ರಯತ್ನ ಬೆಲೆ ಕಟ್ಟಲಾರದಂಥದ್ದು...' ಎಂದು ಬಿಸಿಸಿಐನ ಟ್ಯಾಗ್ ಮಾಡಿ ಪ್ರಕಟಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ಆಲ್–ರೌಂಡ್ ಪ್ರದರ್ಶನ ನೀಡಿದ ಭಾರತ ತಂಡವು ಇಂಗ್ಲೆಂಡ್ ಎದುರು ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಮೂಲಕ ಭಾರತ ತಂಡವು ಐದನೇ ಬಾರಿಗೆ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಕಿರೀಟ ತನ್ನದಾಗಿಸಿಕೊಂಡಿದೆ. ಈ ಹಿಂದೆ, 2000, 2008, 2012 ಹಾಗೂ 2018ರಲ್ಲಿ ಭಾರತ ವಿಶ್ವಕಪ್ ಗೆದ್ದಿತ್ತು.
ಬಿಬಿಸಿಐ ಕಾರ್ಯದರ್ಶಿ ಜಯ್ ಶಾ ಸಹ ಈ ಕುರಿತು ಟ್ವೀಟಿಸಿದ್ದು, '19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರುವ ಪ್ರತಿ ಆಟಗಾರರಿಗೆ 40 ಲಕ್ಷ ರೂಪಾಯಿ ಹಾಗೂ ಸಿಬ್ಬಂದಿಗೆ 25 ಲಕ್ಷ ರೂಪಾಯಿ ಬಹುಮಾನ ಪ್ರಕಟಿಸಲು ಹರ್ಷಿಸುತ್ತೇನೆ. ಭಾರತದ ಕೀರ್ತಿ ಪತಾಕೆಯನ್ನು ಎತ್ತರಕ್ಕೇರಿಸಿರುವಿರಿ...' ಎಂದಿದ್ದಾರೆ.
ಭಾರತದ ರಾಜ್ ಬಾವಾ (5/31) ಮತ್ತು ರವಿ ಕುಮಾರ್ (4/34) ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್, ಜೇಮ್ಸ್ ರಿವ್ ಅವರ ಆಟದ ನೆರವಿನಿಂದ (95) 189 ರನ್ ದಾಖಲಿಸಿತು. 91 ರನ್ ಗಳಿಸುವಷ್ಟರಲ್ಲೇ ಇಂಗ್ಲೆಂಡ್ 7 ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿತ್ತು. ಜೇಮ್ಸ್ ರಿವ್ ಮತ್ತು ಜೇಮ್ಸ್ ಸೇಲ್ಸ್ ಜೊತೆಯಾಟದಿಂದಾಗಿ ತಂಡವು ಸವಾಲಿನ ಮೊತ್ತ ದಾಖಲಿಸಲು ನೆರವಾಯಿತು.
ಭಾರತವು 47.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿ ಗೆಲುವು ಸಾಧಿಸಿತು. ಶೇಕ್ ರಶೀದ್ ಮತ್ತು ನಿಶಾಂತ್ ಸಿಂಧು ತಲಾ ಅರ್ಧ ಶತಕ ದಾಖಲಿಸಿದರೆ, 35 ರನ್ ಗಳಿಸುವ ಮೂಲಕ ರಾಜ್ ಬ್ಯಾಟಿಂಗ್‌ನಲ್ಲೂ ನಿರ್ಣಾಯಕ ಪಾತ್ರ ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.