ಕಪ್ಪು ಕನ್ನಡಕ. ತಲೆಗೊಂದು ಕ್ಯಾಪ್. ಅದರ ಎಡೆಯಿಂದ ಜಾರುವ ಉದ್ದನೆಯ ಕೂದಲು. ಈ ವಿಶಿಷ್ಟ ಲುಕ್ ಮೂಲಕ ಅಂಪೈರ್ ಪಶ್ಚಿಮ್ ಪಾಠಕ್ ಕ್ರಿಕೆಟ್ ಪ್ರಿಯರ ಗಮನ ಸೆಳೆದಿದ್ದಾರೆ. 2014 ಮತ್ತು 2015ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಕಾರ್ಯನಿರ್ವಹಿಸಿದ್ದ ಪಶ್ಚಿಮ್ ಪಾಠಕ್ ಐದು ವರ್ಷಗಳ ನಂತರ ಈ ಬಾರಿ ಮತ್ತೆ ಕಾಣಿಸಿಕೊಂಡರು. ಈ ವರ್ಷ ಉದ್ದನೆಯ ಕೂದಲು ಅವರ ಮೇಲೆ ಕಣ್ಣು ಬೀಳಲು ಕಾರಣವಾಯಿತು. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ನಡುವಿನ ಹಣಾಹಣಿ ಈ ಬಾರಿ ಪಶ್ಚಿಮ್ ಕಾರ್ಯನಿರ್ವಿಹಿಸಿದ ಮೊದಲ ಪಂದ್ಯ. ಅವರೇ ಹೇಳುವಂತೆ ಎರಡು ವರ್ಷಗಳಿಂದ ಕೂದಲು ಕತ್ತರಿಸದೇ ಬಿಟ್ಟಿದ್ದಾರೆ. ಹೀಗಾಗಿ ಈ ಸಲದ ಐಪಿಎಲ್‌ನಲ್ಲಿ ’ವೀಕ್ಷಕರ‘ ಕಮೆಂಟ್‌ಗಳಿಗೆ ‘ಗುರಿ‘ಯಾಗಿದ್ದಾರೆ.
ವಿಶಿಷ್ಟ ರೀತಿಯಲ್ಲಿ ಐಪಿಎಲ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದೇ ತಡ, ಸಾಮಾಜಿಕ ತಾಣಗಳಲ್ಲಿ ಅವರ ಬಗ್ಗೆ ಬಗೆ ಬಗೆಯ ಹೇಳಿಕೆಗಳು ಬರತೊಡಗಿದವು. ‘ರಾಕ್ ಸ್ಟಾರ್ ಅಂಪೈರ್‘, ‘ಡಿಜೆ ಅಂಪೈರ್’ ಎಂಬಿತ್ಯಾದಿ ವಿಶೇಷಣಗಳು ಅವರ ಹೆಸರಿಗೆ ಸೇರಿದವು. ಅನೇಕ ಮಂದಿ ವೈಯಕ್ತಿಕವಾಗಿಯೂ ಸಂದೇಶ ಕಳುಹಿಸಿ ಅಭಿನಂದನೆ ಹೇಳಿದ್ದಾರೆ. ಕೆಲವರು ಕೂದಲಿನ ’ಗುಟ್ಟು‘ ತಿಳಿಯಲು ಪ್ರಯತ್ನಿಸಿದ್ದಾರೆ ಎಂದು ಪಶ್ಚಿಮ್ ಹೇಳಿಕೊಂಡಿದ್ದಾರೆ.
ಮುಂಬೈನಲ್ಲಿ ಜನಿಸಿ ಬೆಳೆದ ಪಶ್ಚಿಮ್ ಪಾಠಕ್, ಲೆಕ್ಕಪರಿಶೋಧಕರಾಗಿದ್ದರು. ಆದರೆ ಕ್ರಿಕೆಟ್ ಮೇಲಿನ ಒಲವು ಅವರನ್ನು ಅಂಪೈರಿಂಗ್ ಪರೀಕ್ಷೆ ಬರೆಯಲು ಪ್ರೇರೇಪಿಸಿತು. 2009ರಿಂದ ಕ್ರಿಕೆಟ್ ಕಣದಲ್ಲಿದ್ದು ರಣಜಿ ಸೇರಿದಂತೆ ದೇಶಿ ಟೂರ್ನಿಗಳಲ್ಲಿ ಕಾರ್ಯನಿರ್ವಹಿಸಿದ ನಂತರ ಎರಡು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ಕಾಯ್ದಿರಿಸಿದ ಅಂಪೈರ್ ಆಗಿದ್ದರು. 2012ರಲ್ಲಿ ಮಹಿಳೆಯರ ಎರಡು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲೂ ’ತೀರ್ಪುಗಾರ‘ ಆಗಿದ್ದರು.
2015ರ ವಿಜಯ್ ಹಜಾರೆ ಟೂರ್ನಿಯಲ್ಲಿ ಹೆಲ್ಮೆಟ್ ಧರಿಸಿ ಕಣಕ್ಕೆ ಇಳಿದು ಅವರು ಗಮನ ಸೆಳೆದಿದ್ದರು. ತಮಿಳುನಾಡಿನ ದಿಂಡಿಗಲ್‌ನಲ್ಲಿ ನಡೆದ ಆತಿಥೇಯ ತಂಡ ಮತ್ತು ಪಂಜಾಬ್ ನಡುವಿನ ರಣಜಿ ಪಂದ್ಯದಲ್ಲಿ ಅಂಪೈರ್ ಜಾನ್ ವಾರ್ಡ್ಸ್ ಅವರ ತಲೆಗೆ ಚೆಂಡು ಬಡಿದ ಘಟನೆಯ ನಂತರ ಪಶ್ಚಿಮ್ ಈ ನಿರ್ಧಾರ ಕೈಗೊಂಡಿದ್ದರು. ಘಟನೆ ನಡೆದಾಗ ಪಶ್ಚಿಮ್ ಅವರು ಸ್ಕ್ವೇರ್ ಲೆಗ್‌ನಲ್ಲಿದ್ದರು. ಮೊಣಕಾಲ ಮೇಲೆ ಕೈಯೂರಿ ನಿಲ್ಲುವ ಶೈಲಿಯೂ ಅವರದೇ ವೈಶಿಷ್ಟ್ಯ.
ನೋಡಲು ಗಂಭೀರವಾಗಿದ್ದರೂ ಪಶ್ಚಿಮ್ ಪಾಠಕ್ ಮೃದು ಸ್ವಭಾವದ ವ್ಯಕ್ತಿ. ಈ ಬಾರಿಯ ಐಪಿಎಲ್‌ನ ಪಂದ್ಯವೊಂದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನೋವಿನಿಂದ ಬಳಲುತ್ತಿದ್ದ ಸಂದರ್ಭದಲ್ಲಿ ವಾತ್ಸಲ್ಯದಿಂದ ಸಂತೈಸಿದ್ದನ್ನು ಅಶ್ವಿನ್ ಆ ನಂತರ ನೆನಪಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.