ADVERTISEMENT

Umran Malik | ಬೂಮ್ರಾ ದಾಖಲೆ ಅಳಿಸಿ ಹಾಕಿದ ಜಮ್ಮು ಎಕ್ಸ್‌ಪ್ರೆಸ್‌ ಉಮ್ರಾನ್‌

ಭಾರತದ ಯುವ ವೇಗಿಯ ಹೆಸರಿಗೆ ಹೊಸ ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜನವರಿ 2023, 7:45 IST
Last Updated 4 ಜನವರಿ 2023, 7:45 IST
   

ಬೆಂಗಳೂರು: ಶ್ರೀಲಂಕಾ ವಿರುದ್ಧದ ಮೊದಲ ಟಿ–20 ಪಂದ್ಯದಲ್ಲಿ ಭಾರತದ ಯುವ ವೇಗಿ ಉಮ್ರಾನ್‌ ಮಲಿಕ್ ಅವರು ಅಪರೂಪದ ದಾಖಲೆ ಬರೆದಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದ ಬೌಲಿಂಗ್ ಮಾಡಿದ ಭಾರತದ ವೇಗಿ ಎನ್ನುವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಈ ಪಂದ್ಯದಲ್ಲಿ ಉಮ್ರಾನ್ ಮಲಿಕ್‌ ಗಂಟೆಗೆ 155 ಕಿ.ಮಿ ವೇಗದಲ್ಲಿ ಬೌಲಿಂಗ್‌ ಮಾಡಿ, ಜಸ್‌ಪ್ರೀತ್‌ ಬೂಮ್ರಾ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಈ ಹಿಂದೆ 2018ರ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್‌ ಬೂಮ್ರಾ ಗಂಟೆಗೆ 153.2 ಕಿ.ಮಿ ವೇಗದಲ್ಲಿ ಬೌಲಿಂಗ್‌ ಮಾಡಿ ದಾಖಲೆ ಬರೆದಿದ್ದರು. ಇದೀಗ ಆ ದಾಖಲೆಯನ್ನು 23 ವರ್ಷದ ಯುವ ಬೌಲರ್‌ ಮುರಿದಿದ್ದಾರೆ.

ADVERTISEMENT

ಶ್ರೀಲಂಕಾ ವಿರುದ್ಧದ ಮೊದಲ ಟಿ–20 ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದು, ಅವರ ಆ ಎಸೆತವನ್ನು ಅಂದಾಜಿಸಲಾಗದೇ ಶ್ರೀಲಂಕಾ ತಂಡದ ಕಪ್ತಾನ ದಸುನ್‌ ಶನಕ ಅವರು ವಿಕೆಟ್‌ ಒಪ್ಪಿಸಿದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 162 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ್ದ ಶ್ರೀಲಂಕಾ ತಂಡಕ್ಕೆ ಪಂದ್ಯದ ಕೊನೆಯ ಓವರ್‌ನಲ್ಲಿ ಗೆಲ್ಲಲು 13 ರನ್‌ಗಳ ಅವಶ್ಯಕತೆ ಇತ್ತು. ಈ ಓವರ್ ಬೌಲಿಂಗ್ ಮಾಡಿದ ಎಡಗೈ ಸ್ಪಿನ್ನರ್ ಅಕ್ಷರ್ ಕೇವಲ 11 ರನ್ ನೀಡಿದರು. ಇದರಿಂದಾಗಿ ಭಾರತ ತಂಡವು 2 ರನ್‌ಗಳಿಂದ ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಆತಿಥೇಯ ತಂಡವು ಹೋರಾಟದ ಮೊತ್ತ ಗಳಿಸಲು ಕೂಡ ಅಕ್ಷರ್ ಬ್ಯಾಟಿಂಗ್ ಕಾರಣವಾಗಿತ್ತು. ಅಕ್ಷರ್‌ (ಅಜೇಯ 31; 20ಎ, 4X3, 6X1) ಮತ್ತು ದೀಪಕ್ ಹೂಡಾ (ಅಜೇಯ 41; 23ಎ, 4X1, 6X4) ಇನಿಂಗ್ಸ್‌ನ ಕೊನೆಯ 35 ಎಸೆತಗಳಲ್ಲಿ 68 ರನ್‌ಗಳನ್ನು ಸೂರೆ ಮಾಡಿದರು.

ಲಂಕಾ ಸ್ಪಿನ್ನರ್‌ಗಳ ದಾಳಿಯ ಮುಂದೆ 94 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ಆತಿಥೇಯ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 162 ರನ್‌ ಗಳಿಸಿತು.

ಆರಂಭಿಕ ಬ್ಯಾಟರ್ ಇಶಾನ್ ಕಿಶನ್ (37; 29ಎ) ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದರು. ಆದರೆ, ಪದಾರ್ಪಣೆ ಪಂದ್ಯವಾಡಿದ ಶುಭಮನ್ ಗಿಲ್, ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಒಂದಂಕಿ ಗಳಿಸಿ ನಿರ್ಗಮಿಸಿದರು. ಇದರಿಂದಾಗಿ ತಂಡದ ರನ್‌ ಗಳಿಕೆ ವೇಗ ಕುಂಠಿತವಾಯಿತು.

ಇಶಾನ್ ಜೊತೆಗೂಡಿದ ನಾಯಕ ಹಾರ್ದಿಕ್ ಪಾಂಡ್ಯ (29; 27ಎ, 4X4) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 31 ರನ್‌ ಸೇರಿಸಿದರು. ಇಶಾನ್ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿ ಬಾರಿಸಿದರು. ಒಂದು ಬಾರಿ ಜೀವದಾನ ಪಡೆದ ಹಾರ್ದಿಕ್ ನಾಲ್ಕು ಬಾರಿ ಚೆಂಡನ್ನು ಬೌಂಡರಿಗೆರೆ ದಾಟಿಸಿದರು. ವಣಿಂದು ಹಸರಂಗಾ ಎಸೆತದಲ್ಲಿ ಇಶಾನ್ ಔಟಾಗುವುದರೊಂದಿಗೆ ಜೊತೆಯಾಟ ಮುರಿದುಬಿತ್ತು.

ಸಂಕ್ಷಿಪ್ತ ಸ್ಕೋರು:

ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 162 (ಇಶಾನ್ ಕಿಶನ್ 37, ಹಾರ್ದಿಕ್ ಪಾಂಡ್ಯ 29, ದೀಪಕ್ ಹೂಡಾ ಔಟಾಗದೆ 41, ಅಕ್ಷರ್ ಪಟೇಲ್ ಔಟಾಗದೆ 31, ದಿಲ್ಶಾನ್ ಮಧುಶಂಕಾ 35ಕ್ಕೆ1, ತೀಕ್ಷಣ 29ಕ್ಕೆ1, ಚಾಮಿಕಾ ಕರುಣಾರತ್ನೆ 22ಕ್ಕೆ1, ಧನಂಜಯ್ ಡಿಸಿಲ್ವಾ 6ಕ್ಕೆ1, ಹಸರಂಗಾ 22ಕ್ಕೆ1) .


ಶ್ರೀಲಂಕಾ: 20 ಓವರ್‌ಗಳಲ್ಲಿ 160 (ದಸುನ್ ಶನಕ 45, ವನಿಂದು ಹಸರಂಗ ಡಿಸಿಲ್ವಾ 21, ಚಾಮಿಕಾ ಕರುಣಾರತ್ನೆ 23; ಶಿವಂ ಮಾವಿ 22ಕ್ಕೆ 4, ಉಮ್ರನ್ ಮಲಿಕ್‌ 27ಕ್ಕೆ 2, ಹರ್ಷಲ್ ಪಟೇಲ್‌ 41ಕ್ಕೆ 2).


ಫಲಿತಾಂಶ: ಭಾರತಕ್ಕೆ ಎರಡು ರನ್‌ಗಳ ಜಯ. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.