ADVERTISEMENT

U19 World Cup | ಇಂದು ಮೊದಲ ಸೆಮಿಫೈನಲ್‌; ಭಾರತಕ್ಕೆ ದಕ್ಷಿಣ ಆಫ್ರಿಕಾ ಸವಾಲು

ಪಿಟಿಐ
Published 5 ಫೆಬ್ರುವರಿ 2024, 23:30 IST
Last Updated 5 ಫೆಬ್ರುವರಿ 2024, 23:30 IST
<div class="paragraphs"><p>ಭಾರತ 19 ವರ್ಷದೊಳಗಿನವರ ಕ್ರಿಕೆಟ್‌ ತಂಡದ ಸಚಿನ್‌ ದಾಸ್ ಮತ್ತು ನಾಯಕ ಉದಯ್ ಸಹಾರನ್</p></div>

ಭಾರತ 19 ವರ್ಷದೊಳಗಿನವರ ಕ್ರಿಕೆಟ್‌ ತಂಡದ ಸಚಿನ್‌ ದಾಸ್ ಮತ್ತು ನಾಯಕ ಉದಯ್ ಸಹಾರನ್

   

ಚಿತ್ರಕೃಪೆ: X / @BCCI

ಬೆನೋನಿ: ಪ್ರಶಸ್ತಿಗೆ ನೆಚ್ಚಿನ ತಂಡವಾಗಿರುವ ಭಾರತ, ಮಂಗಳವಾರ ವಿಲ್ಲೊಮೂರ್‌ ಪಾರ್ಕ್‌ನಲ್ಲಿ ನಡೆಯುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ADVERTISEMENT

ಹಾಲಿ ಚಾಂಪಿಯನ್ ಆಗಿರುವ ಭಾರತ ಈ ಬಾರಿ ಟೂರ್ನಿಯಲ್ಲಿ ಸತತ ಐದು ಗೆಲುವುಗಳೊಂದಿಗೆ ಅಮೋಘ ಫಾರ್ಮಿನಲ್ಲಿದೆ. ಪ್ರತಿಭಾನ್ವಿತ ಯುವ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿರುವುದು ತಂಡದ ಸುಲಭ ಗೆಲುವುಗಳಿಗೆ ಕಾರಣವಾಗಿದೆ. ಬ್ಯಾಟರ್‌ಗಳು ರನ್ನಿನ ಹೊಳೆ ಹರಿಸಿದರೆ, ಬೌಲರ್‌ಗಳು ಪರಿಣಾಮಕಾರಿಯಾಗಿದ್ದಾರೆ.

18 ವರ್ಷದ ಮುಶೀರ್ ಖಾನ್ ಅವರು ಎರಡು ಶತಕ, ಒಂದು ಅರ್ಧ ಶತಕದೊಡನೆ ಈ ಟೂರ್ನಿಯಲ್ಲಿ 83.50 ಸರಾಸರಿಯಲ್ಲಿ 334 ರನ್ ಪೇರಿಸಿ ಟೂರ್ನಿಯ ಅಗ್ರ ಬ್ಯಾಟರ್ ಎನಿಸಿದ್ದಾರೆ. ನಾಯಕ ಉದಯ್ ಸಹಾರನ್ ಅವರು 304 ರನ್ (61.60 ಸರಾಸರಿ) ಕಲೆಹಾಕಿದ್ದಾರೆ. ಈ ಹಿಂದಿನ ಸೂಪರ್‌ ಸಿಕ್ಸ್ ಪಂದ್ಯದಲ್ಲಿ ಮತ್ತೊಬ್ಬ ಬ್ಯಾಟರ್‌ ಸಚಿನ್ ದಾಸ್ ಶತಕ ಬಾರಿಸಿದ್ದರು.

ಬೌಲಿಂಗ್‌ನಲ್ಲಿ ತಂಡದ ಉಪನಾಯಕ ಸೌಮಿ ಕುಮಾರ್ ಪಾಂಡೆ ಎಡಗೈ ಸ್ಪಿನ್ ದಾಳಿಯಲ್ಲಿ ಮೂರು ಬಾರಿ ನಾಲ್ಕು ವಿಕೆಟ್‌ ಗೊಂಚಲು ಸಹಿತ 16 ವಿಕೆಟ್‌ಗಳನ್ನು ಬಾಚಿಕೊಂಡಿದ್ದಾರೆ. ಅವರ ಇಕಾನಮಿ ದರ 2.17 ಇದ್ದು, ಟೂರ್ನಿಯ ಯಶಸ್ವಿ ಬೌಲರ್‌ಗಳಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವೇಗದ ಬೌಲರ್‌ಗಳಾದ ನಮನ್ ತಿವಾರಿ (9 ವಿಕೆಟ್‌) ಮತ್ತು ರಾಜ್ ಲಿಂಬಾನಿ (4 ವಿಕೆಟ್‌) ಅವರು ಯಶಸ್ಸು ದೊರಕಿಸಿಕೊಟ್ಟ ನಂತರ ಪಾಂಡೆ ಎದುರಾಳಿಗಳ ಬೆನ್ನೆಲುಬು ಮುರಿಯುತ್ತ ಬಂದಿದ್ದಾರೆ.‌

ಈ ಟೂರ್ನಿಗೆ ನಡೆದ ತ್ರಿಕೋನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೇಸಿಂಗ್ ವೇಳೆ ಭಾರತ ತಂಡ ಎರಡು ಬಾರಿ ಜಯಗಳಿಸಿತ್ತು. ಈ ಅಂಶ ತಂಡಕ್ಕೆ ಹೆಚ್ಚಿನ ಆತ್ಮವಿಶ್ವಾಸ ನೀಡಲಿದೆ.

ಪಾಕಿಸ್ತಾನ ತಂಡ, ಫೆ 8ರಂದು ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

‍ಪಂದ್ಯ ಆರಂಭ: ಮಧ್ಯಾಹ್ನ 1.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.