ADVERTISEMENT

ಬಾಂಗ್ಲಾಗೆ ಯುವ ವಿಶ್ವಕಪ್‌

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿ: ಯಶಸ್ವಿ ಜೈಸ್ವಾಲ್ ಆಟ ವ್ಯರ್ಥ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 18:30 IST
Last Updated 9 ಫೆಬ್ರುವರಿ 2020, 18:30 IST
ಭಾರತ 19 ವರ್ಷದೊಳಗಿನವರ ತಂಡದ ಕಾರ್ತಿಕ್ ತ್ಯಾಗಿ ವಿಕೆಟ್ ಕಬಳಿಸಿದ ಬಾಂಗ್ಲಾದೇಶ 19 ವರ್ಷದೊಳಗಿನವರ ತಂಡದ ಅಭಿಷೇಕ್ ದಾಸ್ ಸಂಭ್ರಮಿಸಿದ ಪರಿ –ಎಎಫ್‌ಪಿ ಚಿತ್ರ
ಭಾರತ 19 ವರ್ಷದೊಳಗಿನವರ ತಂಡದ ಕಾರ್ತಿಕ್ ತ್ಯಾಗಿ ವಿಕೆಟ್ ಕಬಳಿಸಿದ ಬಾಂಗ್ಲಾದೇಶ 19 ವರ್ಷದೊಳಗಿನವರ ತಂಡದ ಅಭಿಷೇಕ್ ದಾಸ್ ಸಂಭ್ರಮಿಸಿದ ಪರಿ –ಎಎಫ್‌ಪಿ ಚಿತ್ರ   
""

ಪೊಷೆಸ್ಟ್ರೂಮ್‌: ಸಂಘಟಿತ ಆಟದ ಬಲದಿಂದ ಬಾಂಗ್ಲಾದೇಶ ತಂಡ ಮೊದಲ ಬಾರಿಗೆ ಯುವ (19 ವರ್ಷದೊಳಗಿನವರ) ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಗೆದ್ದುಕೊಂಡಿತು. ಸೆನ್ವೆಸ್‌ಪಾರ್ಕ್‌ನಲ್ಲಿ ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಮೂರು ವಿಕೆಟ್‌ಗಳಿಂದ (ಡಕ್‌ವರ್ತ್‌–ಲೂಯಿಸ್‌ ನಿಯಮದ ಆಧಾರದಲ್ಲಿ) ಈ ಹಿಂದಿನ ವಿಜೇತ ಭಾರತ ತಂಡವನ್ನು ಸೋಲಿಸಿತು.

ಪ್ರಿಯಂ ಗರ್ಗ್ ಬಳಗವನ್ನು 177 ರನ್‌ಗಳಿಗೆ ಕಟ್ಟಿಹಾಕಿದ ಬಾಂಗ್ಲಾ ದೇಶ ತಂಡದವರು, 42.1 ಓವರುಗಳಲ್ಲಿ ಏಳು ವಿಕೆಟ್‌ಗೆ 170 ರನ್‌ ಗಳಿಸಿ ಗೆಲುವಿನ ಸಂಭ್ರಮ ಆಚರಿಸಿದರು. ಬಾಂಗ್ಲಾದೇಶ ಇನಿಂಗ್ಸ್‌ನ ಕೊನೆಯ ಹಂತದಲ್ಲಿ ಮಳೆಯಾದ ಕಾರಣ ಗೆಲುವಿನ ಗುರಿಯನ್ನು 46 ಓವರುಗಳಲ್ಲಿ 170 ರನ್‌ಗಳಿಗೆ ನಿಗದಿಮಾಡಲಾಗಿತ್ತು. ಮಳೆ ಬಂದಾಗ ಆ ತಂಡ 7 ವಿಕೆಟ್‌ಗೆ 163 ರನ್‌ (41 ಓವರ್‌) ಗಳಿಸಿತ್ತು.

ಬಾಂಗ್ಲಾದೇಶ, ಯುವ ವಿಶ್ವಕಪ್‌ ಗೆದ್ದ ಏಳನೇ ತಂಡವೆನಿಸಿತು. ಮಾತ್ರವಲ್ಲ, ಆ ದೇಶಕ್ಕೆ ಇದು ಐಸಿಸಿ ಟೂರ್ನಿಯೊಂದರ ಮೊದಲ ಪ್ರಶಸ್ತಿ ಕೂಡ. ಬೆನ್ನು ಬೆನ್ನಿಗೆ ವಿಶ್ವಕಪ್‌ ಗೆಲುವಿನ ಗುರಿಯಲ್ಲಿದ್ದ ಭಾರತ ತಂಡಕ್ಕೆ ನಿರಾಸೆಯಾಯಿತು. ವಾಸ್ತವದಲ್ಲಿ, 2016ರ ಫೈನಲ್‌ ನಂತರ ಈ ಟೂರ್ನಿಯಲ್ಲಿ ಭಾರತಕ್ಕೆ ಇದು ಮೊದಲ ಸೋಲು ಕೂಡ.

ADVERTISEMENT

ಬಾಂಗ್ಲಾದೇಶ ಕುಸಿಯುವಂತೆ ಕಾಣುತ್ತಿದ್ದಾಗ ನಾಯಕ– ವಿಕೆಟ್‌ ಕೀಪರ್‌ ಅಕ್ಬರ್‌ ಅಲಿ (ಔಟಾಗದೇ 43) ಅವರು ಎರಡು ಉಪಯುಕ್ತ ಜೊತೆಯಾಟಗಳಲ್ಲಿ ಪಾಲ್ಗೊಂಡು ತಂಡವನ್ನು ಗೆಲುವಿನತ್ತ ಒಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬಾಂಗ್ಲಾ, ಕೇವಲ 9 ಓವರ್‌ಗಳ ಒಳಗೆ ವಿಕೆಟ್‌ ನಷ್ಟವಿಲ್ಲದೇ 50 ರನ್‌ ಹೊಡೆದು ಉತ್ತಮ ಆರಂಭ ಮಾಡಿತ್ತು. ಆದರೆ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯಿ (10–3–30–4) ಅವರ ಪರಿಣಾಮಕಾರಿ ದಾಳಿಯಿಂದ ಒಂದು ಹಂತದಲ್ಲಿ ಪಂದ್ಯ ರೋಚಕವಾಗುವಂತೆ ಕಂಡಿತ್ತು. ಬಾಂಗ್ಲಾದೇಶದ ಆರು ವಿಕೆಟ್‌ಗಳು 102 ರನ್‌ಗಳಿಗೆ ಉರುಳಿದಾಗ ಭಾರತ ಮರಳಿ ಹಿಡಿತ ಪಡೆಯುವಂತೆ ಕಂಡಿತ್ತು.

ಆದರೆ, 25 ರನ್‌ ಗಳಿಸಿದ್ದಾಗ ಗಾಯಗೊಂಡಿದ್ದ ಆರಂಭ ಆಟಗಾರ ಪರ್ವೇಜ್‌ ಹುಸೇನ್‌ (79 ಎಸೆತಗಳಲ್ಲಿ 47) ಈ ಹಂತದಲ್ಲಿ ಆಟಕ್ಕೆ ಮರಳಿದರು. ಸಂಯಮದಿಂದ ಆಡುತ್ತಿದ್ದ ನಾಯಕ ಅಕ್ಬರ್‌ ಅಲಿ (77 ಎಸೆತ, 4 ಬೌಂ, 1ಸಿ) ಜೊತೆಗೂಡಿ 41 ರನ್‌ ಸೇರಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಪರ್ವೇಜ್‌ ನಿರ್ಗಮನದ (7 ವಿಕೆಟ್‌ಗೆ 143) ನಂತರ ಅಕ್ಬರ್‌, ರಕಿಬುಲ್ ಹಸನ್‌ (ಔಟಾಗದೇ 9, 25 ಎಸೆತ) ಜೊತೆ ತಂಡವನ್ನು ಗೆಲುವಿನ ದಡ ಸೇರಿಸಿದರು.

‌ಇದಕ್ಕೆ ಮೊದಲು ಬಾಂಗ್ಲಾದೇಶ ಬಿಗುವಾದ ದಾಳಿ ಸಂಘಟಿಸಿ, ಭಾರತ ತಂಡ ದೊಡ್ಡ ಮೊತ್ತ ಗಳಿಸದಂತೆ ನಿಯಂತ್ರಿಸಿತ್ತು. ಆರಂಭ ಆಟಗಾರ ಯಶಸ್ವಿ ಜೈಸ್ವಾಲ್‌ (121 ಎಸೆತಗಳಲ್ಲಿ 88, 8 ಬೌಂ, 1 ಸಿ) ಮತ್ತೊಮ್ಮೆ ಗುಣಮಟ್ಟದ ಬ್ಯಾಟಿಂಗ್‌ ಪ್ರದರ್ಶಿಸಿದರು.

ಬೌಲಿಂಗ್‌ ಆರಂಭಿಸಿದ ಶರೀಪುಲ್‌ ಇಸ್ಲಾಂ (31ಕ್ಕೆ2) ಮತ್ತು ತಂಜೀಮ್‌ ಹಸನ್‌ ಶಕೀಬ್‌ (28ಕ್ಕೆ2) ಅವರು ಭಾರತದ ಆರಂಭ ಆಟಗಾರರು ರನ್‌ಗಳಿಗೆ ತಡಕಾಡುವಂತೆ ಮಾಡಿದರು. ಮಧ್ಯಮ ವೇಗಿ ಅಭಿಷೇಕ್‌ ದಾಸ್‌ (40ಕ್ಕೆ3) ಅವರ ಮೊದಲ ಓವರ್‌ನಲ್ಲೇ ದಿವ್ಯಾಂಶ್‌ ಸಕ್ಸೇನಾ, ಮಹಮದುಲ್ಲಾ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದಾಗ ಭಾರತದ ಮೊತ್ತ 6.4 ಓವರುಗಳಲ್ಲಿ ಕೇವಲ 9 ರನ್‌ ಆಗಿತ್ತು.

ಜೈಸ್ವಾಲ್‌ ಜೊತೆಗೂಡಿದ ತಿಲಕ್‌ ವರ್ಮಾ (38, 65 ಎಸೆತ) ತಂಡಕ್ಕೆ ಚೇತರಿಕೆ ನೀಡಿ ಎರಡನೇ ವಿಕೆಟ್‌ಗೆ ಅತ್ಯುಪಯುಕ್ತ 94 ರನ್‌ ಸೇರಿಸಿದರು. ಆದರೆ ವರ್ಮಾ ವಿಕೆಟ್‌ ಪತನದ ನಂತರ ಬಾಂಗ್ಲಾ ತಂಡ ಮೇಲುಗೈ ಪಡೆಯಿತು. ಕೊನೆಯ ಎಂಟು ವಿಕೆಟ್‌ಗಳು 75 ರನ್ನಿಗೆ ಉರುಳಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.