ADVERTISEMENT

ಶ್ರೀಲಂಕಾ ಕ್ರಿಕೆಟ್ ಪ್ರವಾಸ | ಯುವ ಆಟಗಾರರಿಗೆ ಸುವರ್ಣಾವಕಾಶ: ದ್ರಾವಿಡ್

ಶ್ರೀಲಂಕಾಕ್ಕೆ ತೆರಳಲಿರುವ ಶಿಖರ್ ಧವನ್ ಬಳಗ

ಪಿಟಿಐ
Published 27 ಜೂನ್ 2021, 16:25 IST
Last Updated 27 ಜೂನ್ 2021, 16:25 IST
ಶಿಖರ್ ಧವನ್ ಮತ್ತು ರಾಹುಲ್ ದ್ರಾವಿಡ್ 
ಶಿಖರ್ ಧವನ್ ಮತ್ತು ರಾಹುಲ್ ದ್ರಾವಿಡ್    

ಮುಂಬೈ: ಅನಿರೀಕ್ಷಿತವಾಗಿ ಲಭಿಸಿರುವ ಅವಕಾಶಗಳನ್ನು ಯುವ ಆಟಗಾರರು ಸದುಪಯೋಗಪಡಿಸಿಕೊಳ್ಳಬೇಕು. ಶ್ರೀಲಂಕಾದಲ್ಲಿ ನಡೆಯಲಿರುವ ಸರಣಿಯಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸಲು ಇದು ಸದಾವಕಾಶ ಎಂದು ಭಾರತ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಜುಲೈನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಗಳಲ್ಲಿ ಆಡಲು ಶಿಖರ್ ಧವನ್ ನಾಯಕತ್ವದ ತಂಡವು ತೆರಳಲಿದೆ. ಪ್ರಯಾಣಕ್ಕೂ ಮುನ್ನ ಭಾನುವಾರ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ದ್ರಾವಿಡ್ ಮಾತನಾಡಿದರು.

‘ಇದೊಂದು ಚುಟುಕು ಅವಧಿಯ ಪ್ರವಾಸವಾಗಿದೆ. ಮೊದಲೇ ಇದನ್ನು ಯಾರೂ ಊಹಿಸಿರಲಿಲ್ಲ. ಆಯಾಚಿತವಾಗಿ ಒದಗಿಬಂದಿದೆ. ಆಟಗಾರರು ತಮ್ಮ ಸಾಮರ್ಥ್ಯ ಸಾಬೀತುಮಾಡಲು ಉತ್ತಮ ವೇದಿಕೆಯಾಗಿದೆ. ಏಕದಿನ ಅಥವಾ ಟಿ20 ಪಂದ್ಯಗಳಲ್ಲಿ ತಮಗೆ ಲಭಿಸುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಏಕೆಂದರೆ, ಈ ಸರಣಿಯನ್ನು ಆಯ್ಕೆ ಸಮಿತಿಯ ಸದಸ್ಯರು ವೀಕ್ಷಿಸಲಿದ್ದಾರೆ‘ ಎಂದು ರಾಹುಲ್ ಹೇಳಿದರು.

ADVERTISEMENT

ಈ ತಂಡದಲ್ಲಿ ಆರು ಜನ ಹೊಸಬರಿಗೆ ಅವಕಾಶ ಕೊಡಲಾಗಿದೆ. ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಕಾತುರರಾಗಿದ್ದಾರೆ.

‘ಇದೇ ತಂಡದಲ್ಲಿರುವ ಕೆಲವು ಆಟಗಾರರು ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಟಿ20 ವಿಶ್ವಕಪ್ ಟೂರ್ನಿ ಕೂಡ ಸಮೀಪಿಸುತ್ತಿದೆ. ಆದ್ದರಿಂದ ಆಯ್ಕೆಗಾರರ ಗಮನ ಸೆಳೆಯಲು ಇದು ಸಕಾಲ‘ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಹಾಜರಿದ್ದ ನಾಯಕ ಧವನ್, ‘ಇದು ಉತ್ತಮ ತಂಡವಾಗಿದೆ. ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನೋಭಾವದ ಆಟಗಾರರು ಇದ್ದಾರೆ. ಅದರಿಂದಾಗಿ ನಾವು ಉತ್ತಮ ಫಲಿತಾಂಶ ಪಡೆಯುವ ಭರವಸೆ ಮೂಡಿದೆ. ಟೂರ್ನಿಯಲ್ಲಿ ಆಡಲು ಬಹಳ ಉತ್ಸುಕರಾಗಿದ್ದೇವೆ‘ ಎಂದರು.

ತಂಡದಲ್ಲಿ 20 ಆಟಗಾರರು ಇದ್ದಾರೆ. ಕರ್ನಾಟಕದ ದೇವದತ್ತ ಪಡಿಕ್ಕಲ್, ಕೃಷ್ಣಪ್ಪ ಗೌತಮ್ ಪದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ. ಜುಲೈ 13ರಿಂದ ಸರಣಿ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.