ADVERTISEMENT

CWC: ಹಿಮದಂಗಳದಲ್ಲಿ ಆಸ್ಟ್ರೇಲಿಯಾ–ಕಿವೀಸ್ ಹಣಾಹಣಿ

ಧರ್ಮಶಾಲಾದಲ್ಲಿ ಜಂಪಾ–ಸ್ಯಾಂಟನರ್ ಸ್ಪಿನ್ ಪೈಪೋಟಿಗೆ ವೇಧಿಕೆ ಸಿದ್ಧ; ವಾರ್ನರ್, ಕಾನ್ವೆ ಮೇಲೆ ಕಣ್ಣು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2023, 23:30 IST
Last Updated 27 ಅಕ್ಟೋಬರ್ 2023, 23:30 IST
 ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಆ್ಯಡಂ ಜಂಪಾ  –ಎಎಫ್‌ಪಿ ಚಿತ್ರ
 ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಆ್ಯಡಂ ಜಂಪಾ  –ಎಎಫ್‌ಪಿ ಚಿತ್ರ   

ಧರ್ಮಶಾಲಾ (ಪಿಟಿಐ):  ಟ್ರಾನ್ಸ್‌ ಟಾಸ್ಮನ್ ಪ್ರತಿಸ್ಪರ್ಧಿಗಳಾದ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಇಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಸೆಣಸಲಿವೆ.

ಎರಡೂ ಸಾಂಪ್ರದಾಯಿಕ ಎದುರಾಳಿಗಳಾಗಿದ್ದು ರೋಚಕ ಹಣಾಹಣಿಯ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಹೋದ ಸಲದ ರನ್ನರ್ ಅಪ್ ನ್ಯೂಜಿಲೆಂಡ್ ಈ ಸಲವೂ ಉತ್ತಮವಾಗಿ ಆಡುತ್ತಿದೆ. ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದೆ. ಆರಂಭಿಕ ಪಂದ್ಯದಲ್ಲಿಯೇ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಜಯಿಸಿತ್ತು. ತನ್ನ ಐದನೇ ಪಂದ್ಯದಲ್ಲಿ ಭಾರತದ ಎದುರು ಮಣಿದಿತ್ತು. 

ಕಿವೀಸ್ ಬಳಗದ ನಾಯಕ ಕೇನ್ ವಿಲಿಯಮ್ಸನ್ ಈ ಪಂದ್ಯದಲ್ಲಿಯೂ ಆಡುವುದಿಲ್ಲ. ಆದ್ದರಿಂದ ಟಾಮ್ ಲಥಾಮ್ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದ ಬ್ಯಾಟಿಂಗ್ ವಿಭಾಗ ಉತ್ತಮವಾಗಿದೆ. ಡೇವೊನ್ ಕಾನ್ವೆ (249 ರನ್), ಬೆಂಗಳೂರು ಮೂಲದ ರಚಿನ್ ರವೀಂದ್ರ (290 ರನ್) ಹಾಗೂ  ಡೆರಿಲ್ ಮಿಚೆಲ್ (268 ರನ್) ಅಮೋಘ ಲಯದಲ್ಲಿದ್ದಾರೆ. ಕಾನ್ವೆ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದ್ದರು. ರಚಿನ್ ಕೂಡ ಅದೇ ಪಂದ್ಯದಲ್ಲಿ ನೂರರ ಗಡಿ ದಾಟಿದ್ದರು.

ADVERTISEMENT

ಟಾಮ್ ಮತ್ತು ವಿಲ್ ಯಂಗ್ ಲಯಕ್ಕೆ ಮರಳಿದರೆ ತಂಡದ ಬ್ಯಾಟಿಂಗ್ ಮತ್ತಷ್ಟು ಬಲಶಾಲಿಯಾಗುವುದು. ಈ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲು ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್, ಜೋಷ್ ಹ್ಯಾಜಲ್‌ವುಡ್, ಸ್ಪಿನ್ನರ್ ಆ್ಯಡಂ ಜಂಪಾ ಅವರ ಮುಂದಿದೆ.

ಬೌಲಿಂಗ್‌ನಲ್ಲಿ ಮ್ಯಾಟ್ ಹೆನ್ರಿ (10 ವಿಕೆಟ್), ಲಾಕಿ ಫರ್ಗ್ಯುಸನ್ (8 ವಿಕೆಟ್) ಮತ್ತು ಟ್ರೆಂಟ್ ಬೌಲ್ಟ್ (6 ವಿಕೆಟ್) ಎದುರಾಳಿ ಪಡೆಯ ಜೊತೆಯಾಟಗಳನ್ನು ಮುರಿಯುವಲ್ಲಿ ಪರಿಣಾಮಕಾರಿಯಾಗಿದ್ದಾರೆ.

ಕಿವೀಸ್ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ 12 ವಿಕೆಟ್ ಗಳಿಸಿದ್ದು, ಅವರಿಗಿಂತ  ಆಸ್ಟ್ರೇಲಿಯಾದ ಆ್ಯಡಂ ಜಂಪಾ (13) ಒಂದು ವಿಕೆಟ್ ಹೆಚ್ಚು ಗಳಿಸಿದ್ದಾರೆ. ಈ ಪಂದ್ಯದಲ್ಲಿ ಇವರಿಬ್ಬರ ಸತ್ವಪರೀಕ್ಷೆಯೂ ನಡೆಯಲಿದೆ.

ಅದರಲ್ಲೂ ಸ್ಯಾಂಟನರ್ ಅವರಿಗೆ ಆಸ್ಟ್ರೇಲಿಯಾದ ಬ್ಯಾಟರ್‌ಗಳಿಂದ ಕಠಿಣ ಪೈಪೋಟಿ ಎದುರಾಗಬಹುದು. ಟೂರ್ನಿಯ ಮೊದಲೆರಡೂ ಪಂದ್ಯಗಳಲ್ಲಿ ಸೋತಿದ್ದ ಆಸ್ಟ್ರೇಲಿಯಾ ಪುಟಿದೆದ್ದು ಸತತ ಮೂರು ಜಯ ಗಳಿಸಿದೆ. ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್  (332 ರನ್) ಎರಡು ಶತಕ ಗಳಿಸಿದ್ದಾರೆ. ಮಿಚೆಲ್ ಮಾರ್ಷ್ ಕೂಡ ಒಂದು ಶತಕ ಹೊಡೆದು ಉತ್ತಮ ಲಯದಲ್ಲಿದ್ದಾರೆ.

ಆದರೆ ಮಾರ್ನಸ್ ಲಾಬುಷೇನ್ ಮತ್ತು ಸ್ಟೀವ್ ಸ್ಮಿತ್ ಅವರು ಅಬ್ಬರಿಸುತ್ತಿಲ್ಲ. ಇದರಿಂದಾಗಿ ಮಧ್ಯಮ ಕ್ರಮಾಂಕ ದುರ್ಬಲವಾಗಿದೆ.

ಅಲ್ಲದೇ ಆಸ್ಟ್ರೇಲಿಯಾ ತಂಡವು ಫೀಲ್ಡಿಂಗ್‌ ವಿಭಾಗದಲ್ಲಿ ಹೆಚ್ಚು ಸುಧಾರಣೆ ಕಾಣಬೇಕಾದ ಅವಶ್ಯಕತೆ ಇದೆ. ಕ್ಯಾಚ್ ಕೈಚೆಲ್ಲುವುದನ್ನು ಕಡಿಮೆ ಮಾಡಬೇಕಿದೆ.  ಏಕೆಂದರೆ ಕಿವೀಸ್ ಕ್ಷೇತ್ರರಕ್ಷಣೆಯು ಉತ್ತಮವಾಗಿದೆ.

ಉಭಯ ತಂಡಗಳು 2019ರಿಂದ 2022ರವರೆಗೆ  ಮುಖಾಮುಖಿಯಾದ ಐದು ಪಂದ್ಯಗಳಲ್ಲಿಯೂ ಆಸ್ಟ್ರೇಲಿಯಾ ಗೆದ್ದಿದೆ.  ಆ ಸೋಲುಗಳ ಮುಯ್ಯಿ ತೀರಿಸಿಕೊಳ್ಳಲು ಕಿವೀಸ್‌ಗೆ ಇಲ್ಲಿ ಅವಕಾಶ ಇದೆ.

ನ್ಯೂಜಿಲೆಂಡ್ ತಂಡದ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್  –ಪಿಟಿಐ ಚಿತ್ರ
ಆಸ್ಟ್ರೇಲಿಯಾ ತಂಡದ  ನಾಯಕ ಪ್ಯಾಟ್ ಕಮಿನ್ಸ್  –ಎಎಫ್‌ಪಿ ಚಿತ್ರ
ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಲಥಾಮ್‌  –ಎಎಫ್‌ಪಿ ಚಿತ್ರ

ತಂಡಗಳು

ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ) ಸ್ಟೀವ್ ಸ್ಮಿತ್ ಅಲೆಕ್ಸ್ ಕ್ಯಾರಿ ಜೋಷ್ ಇಂಗ್ಲಿಷ್ ಸೀನ್ ಅಬಾಡ್ ಆ್ಯಷ್ಟನ್ ಅಗರ್ ಕ್ಯಾಮರಾನ್ ಗ್ರೀನ್ ಜೋಷ್ ಹ್ಯಾಜಲ್‌ವುಡ್ ಟ್ರಾವಿಸ್ ಹೆಡ್ ಮಿಚೆಲ್ ಮಾರ್ಷ್ ಗ್ಲೆನ್ ಮ್ಯಾಕ್ಸ್‌ವೆಲ್ ಮಾರ್ಕಸ್ ಸ್ಟೊಯಿನಿಸ್ ಡೇವಿಡ್ ವಾರ್ನರ್ ಅ್ಯಡಂ ಜಂಪಾ ಮಿಚೆಲ್ ಸ್ಟಾರ್ಕ್   

ನ್ಯೂಜಿಲೆಂಡ್: ಟಾಮ್ ಲಥಾಮ್ (ನಾಯಕ–ವಿಕೆಟ್‌ಕೀಪರ್) ಟ್ರೆಂಟ್ ಬೌಲ್ಟ್ ಮಾರ್ಕ್ ಚಾಪಮನ್ ಡೆವೊನ್ ಕಾನ್ವೆ (ವಿಕೆಟ್‌ ಕೀಪರ್) ಲಾಕಿ ಫರ್ಗ್ಯುಸನ್ ಮ್ಯಾಟ್ ಹೆನ್ರಿ ಡೆರಿಲ್ ಮಿಚೆಲ್ ಜಿಮ್ಮಿ ನಿಶಾಮ್ ಗ್ಲೆನ್ ಫಿಲಿಪ್ಸ್ ರಚಿನ್ ರವೀಂದ್ರ ಮಿಚೆಲ್ ಸ್ಯಾಂಟನರ್ ಈಶ್ ಸೋಧಿ ಟಿಮ್ ಸೌಥಿ ವಿಲ್ ಯಂಗ್.

ಪಂದ್ಯ ಆರಂಭ: ಬೆಳಿಗ್ಗೆ 10.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಹಾಟ್‌ಸ್ಟಾರ್ ಆ್ಯಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.