ADVERTISEMENT

ICC T-20 World Cup | ಆಸ್ಟ್ರೇಲಿಯಾ ತಂಡದ ವಿಮಾನ ವಿಳಂಬ

ಪಿಟಿಐ
Published 3 ಜೂನ್ 2024, 16:34 IST
Last Updated 3 ಜೂನ್ 2024, 16:34 IST
ಗ್ಲೆನ್ ಮ್ಯಾಕ್ಸ್‌ವೆಲ್ 
ಗ್ಲೆನ್ ಮ್ಯಾಕ್ಸ್‌ವೆಲ್    

ಬ್ರಿಜ್‌ಟೌನ್, ಬಾರ್ಬಡೋಸ್: ವಿಳಂಬವಾಗಿ ಹೊರಟ ವಿಮಾನ,  ಕಳೆದುಹೋದ ಸರಂಜಾಮು ಹಾಗೂ  ಜೋರಾಗಿ ಬೀಸುತ್ತಿದ್ದ ಗಾಳಿಯಲ್ಲಿ ವಿಮಾನದ ಭೂಸ್ಪರ್ಶಕ್ಕೆ ತೊಂದರೆ..

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವು ಇಲ್ಲಿಗೆ ಬಂದಿಳಿದ ವಿಮಾನವು ಈ ಎಲ್ಲ ಸಂಕಷ್ಟಗಳನ್ನು ದಾಟಿ ಕೊನೆಗೂ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಬಂದ ಆಸ್ಟ್ರೇಲಿಯಾ ತಂಡಕ್ಕೆ ಇದು ಸಾಹಸಮಯ ಅನುಭವ ನೀಡಿದ್ದು ಸುಳ್ಳಲ್ಲ. 

‘ಇದೆಲ್ಲದರ ನಡುವೆಯೂ ಕರಾವಳಿಯ ಸಂಜೆಯ ದೃಶ್ಯಾವಳಿಯು ಮನಮೋಹಕವಾಗಿತ್ತು. ನಮ್ಮೆಲ್ಲರ ಮನಸ್ಸಿಗೆ ಮುದ ನೀಡಿತ್ತು’ ಎಂದು ತಂಡದ ಆಲ್‌ರೌಂಡರ್ ಆ್ಯಷ್ಟನ್ ಆಗರ್  ಹೇಳಿದ್ದಾರೆ. 

ADVERTISEMENT

ಐಪಿಎಲ್‌ನಲ್ಲಿ ಆಡಿದ್ದ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರು ತವರಿಗೆ ಮರಳಿದ್ದರು. ಅಲ್ಲಿಂದ ತಂಡದೊಂದಿಗೆ ವಿಂಡೀಸ್‌ಗೆ ಬಂದಿದ್ದಾರೆ. ಆದರೆ, ತಂಡದ ಕೆಲವು ಆಟಗಾರರ ಸರಂಜಾಮು ಕಳೆದಿತ್ತು. ವಿಮಾನಯಾನ ಸಂಸ್ಥೆಯ ಸಿಬ್ಬಂದಿಯ ನೆರವಿನಿಂದ ಲಗೇಜ್ ಹುಡುಕಿ  ತಂಡದ ಆಟಗಾರರಿಗೆ ತಲುಪಿಸಲಾಯಿತು. 

ಮಿಚೆಲ್ ಸ್ಟಾರ್ಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಅಮೆರಿಕ ಮಾರ್ಗವಾಗಿ ಬಾರ್ಬಡೋಸ್‌ಗೆ ಪ್ರಯಾಣಿಸಿದರು. ಆದರೆ ಭಾನುವಾರ ರಾತ್ರಿ ಲಾಸ್‌ ಏಂಜಲೀಸ್‌ನಲ್ಲಿ ವಿಮಾನ ವಿಳಂವಾಗಿದ್ದರಿಂದ ಅವರಿಬ್ಬರೂ ಇಡೀ ರಾತ್ರಿ ಅಲ್ಲಿಯೇ ಕಳೆದರು. ನಂತರ ಮಿಯಾಮಿ ಮಾರ್ಗವಾಗಿ ಕೆರಿಬಿಯನ್‌ ದ್ವೀಪಕ್ಕೆ ಬಂದಿಳಿದರು ಎಂದು ಕ್ರಿಕೆಟ್ ಡಾಟ್‌ ಕಾಮ್ ಡಾಟ್ ಎಯು ವೆಬ್‌ಸೈಟ್ ವರದಿ ಮಾಡಿದೆ. 

‘ಐಪಿಎಲ್‌ನಲ್ಲಿ ದೀರ್ಘ ಸಮಯ ಆಡಿದ ನಂತರ ತವರಿಗೆ ಮರಳಿದ್ದರು. ಆದರೆ ಅವರು ತವರಿನಲ್ಲಿ 48 ಗಂಟೆಗಳಿಗಿಂತಲೂ ಕಡಿಮೆ ಸಮಯ ಇದ್ದರು. ಈಗ ಮತ್ತೆ ಇಲ್ಲಿಗೆ ಬಂದಿದ್ದಾರೆ. ರೂಫ್‌ ಟಾಪ್‌ ಲಾಂಜ್‌ನಲ್ಲಿ ಕುಳಿತು ಕೆರಿಬಿಯನ್ ದ್ವೀಪದಲ್ಲಿ ಸೂರ್ಯಾಸ್ತವನ್ನು ನೋಡುತ್ತ ಪಾನೀಯ ಸೇವಿಸುತ್ತ ಹರಟೆ ಹೊಡೆಯುವುದು ಉಲ್ಲಾಸಮಯವಾಗಿದೆ. ಇದು ತಂಡದಲ್ಲಿ ಪರಸ್ಪರ ಉತ್ತಮ ಬಾಂಧವ್ಯ ರೂಪಿಸುತ್ತದೆ’ ಎಂದು ಆಗರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.