ಜೆದ್ದಾ: ಬಿಹಾರದ 13 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸ್ ಬರೋಬ್ಬರಿ ₹ 1.10 ಕೋಟಿಗೆ ಖರೀದಿಸಿದೆ.
ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯುತ್ತಿರುವ ಹರಾಜಿನಲ್ಲಿ ಈ ಆಟಗಾರನಿಗಾಗಿ ರಾಜಸ್ಥಾನ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪೈಪೋಟಿ ನಡೆಸಿದವು. ಹೀಗಾಗಿ, ಕೇವಲ ₹ 30 ಲಕ್ಷ ಮೂಲ ಬೆಲೆ ಹೊಂದಿದ್ದ ಇವರಿಗೆ ಕೋಟಿ ಬೆಲೆ ಬಂದಿತು.
ಇದರೊಂದಿಗೆ, ವೈಭವ್ ಅವರು ಐಪಿಎಲ್ ಹರಾಜಿನಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದಾರೆ.
ವೈಭವ್ ಬಿಹಾರದ ತಾಜ್‌ಪುರ ಎಂಬ ಗ್ರಾಮದಲ್ಲಿ 2011ರ ಮಾರ್ಚ್ 27ರಂದು ಜನಿಸಿದರು. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಾಗ, ವೈಭವ್ ಜನಿಸಿ ಕೇವಲ 5 ದಿನವಾಗಿತ್ತು. ಅವರು, ತಮ್ಮ ನಾಲ್ಕನೇ ವಯಸ್ಸಿನಲ್ಲಿದ್ದಾಗಲೇ ಕ್ರಿಕೆಟ್ ತರಬೇತಿ ಪಡೆಯಲಾರಂಭಿಸಿದ್ದರು. ವರದಿಗಳ ಪ್ರಕಾರ, ರಣಜಿ ಕ್ರಿಕೆಟ್‌ನಲ್ಲಿ ಆಡಿದ ಎರಡನೇ ಅತಿ ಕಿರಿಯ ಎಂಬ ಹೆಗ್ಗಳಿಕೆಯೂ ಈ ಆಟಗಾರನದ್ದು.
ಬಿಹಾರ ಪರ ಐದು ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿರುವ ವೈಭವ್, 10 ಇನಿಂಗ್ಸ್‌ಗಳಲ್ಲಿ ನೂರು ರನ್ ಗಳಿಸಿದ್ದಾರೆ. ಗರಿಷ್ಠ ರನ್ 41.
ಇದೇ ವರ್ಷ ಅಕ್ಟೋಬರ್‌ನಲ್ಲಿ 19 ವರ್ಷದೊಳಗಿನವರ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಕೇವಲ 58 ಎಸೆತಗಳಲ್ಲಿ ಶತಕ ಸಿಡಿಸಿ ಸುದ್ದಿಯಾಗಿದ್ದರು. ಇದು, 19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಭಾರತದ ಪರ ದಾಖಲಾಗಿದೆ. ಒಟ್ಟಾರೆ ಈ ವಿಭಾಗದಲ್ಲಿ ವೇಗದ ಶತಕ ಗಳಿಸಿದ ದಾಖಲೆ ಇರುವುದು ಇಂಗ್ಲೆಂಡ್‌ನ ಮೋಯಿನ್ ಅಲಿ ಹೆಸರಿನಲ್ಲಿ. ಅವರು 2005ರಲ್ಲಿ ಶ್ರೀಲಂಕಾ ಎದುರು ಕೇವಲ 56 ಎಸೆತಗಳಲ್ಲಿ ಮೂರಂಕಿ ದಾಟಿದ್ದರು.
ಜೆದ್ದಾದಲ್ಲಿ ಭಾನುವಾರ ಮತ್ತು ಸೋಮವಾರ ನಡೆಯುತ್ತಿರುವ ಹರಾಜು ಕಣದಲ್ಲಿ 574 ಆಟಗಾರರು ಇದ್ದಾರೆ. ಈ ಪಟ್ಟಿಯಲ್ಲಿ ವೈಭವ್ 491ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. 204 ಸ್ಥಾನಗಳಿಗಾಗಿ 10 ತಂಡಗಳು ಪೈಪೋಟಿ ನಡೆಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.