ADVERTISEMENT

ಫಿಟ್‌ನೆಸ್ ಪರೀಕ್ಷೆಯಲ್ಲಿ ವರುಣ್ ಅನುತ್ತೀರ್ಣ, ನಟರಾಜನ್‌ಗೆ ಭುಜದ ನೋವು

ಇಂಗ್ಲೆಂಡ್‌ ವಿರುದ್ಧದ ಟ್ವೆಂಟಿ–20 ಕ್ರಿಕೆಟ್‌ ಸರಣಿ:

ಪಿಟಿಐ
Published 10 ಮಾರ್ಚ್ 2021, 11:35 IST
Last Updated 10 ಮಾರ್ಚ್ 2021, 11:35 IST
ವರುಣ್ ಚಕ್ರವರ್ತಿ
ವರುಣ್ ಚಕ್ರವರ್ತಿ   

ಅಹಮದಾಬಾದ್‌: ಭಾರತದ ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಫಿಟ್‌ನೆಸ್‌ ಪರೀಕ್ಷೆಯಲ್ಲಿ ಮತ್ತೊಮ್ಮೆ ಅನುತ್ತೀರ್ಣರಾಗಿದ್ದು, ಇಂಗ್ಲೆಂಡ್‌ ವಿರುದ್ಧ ಟ್ವೆಂಟಿ–20 ಕ್ರಿಕೆಟ್ ಸರಣಿಯಿಂದ ಹೊರಗುಳಿಯಲಿದ್ದಾರೆ. ಭುಜದ ನೋವಿನಿಂದ ಬಳಲುತ್ತಿರುವ ವೇಗಿ ನಟರಾಜನ್ ಕೂಡ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ. ಮೊದಲ ಪಂದ್ಯ ಶುಕ್ರವಾರ ನಡೆಯಲಿದೆ.

ವರುಣ್ ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಫಿಟ್‌ನೆಸ್‌ ಟೆಸ್ಟ್‌ಗೆ ಒಳಗಾದರು. ಭುಜದ ನೋವಿನಿಂದ ಬಳಲುತ್ತಿರುವ ಯಾರ್ಕರ್ ಪರಿಣತ ನಟರಾಜನ್ ಇನ್ನಷ್ಟೇ ತಂಡವನ್ನು ಸೇರಿಕೊಳ್ಳಬೇಕಿದೆ.

‘ಭುಜದ ಗಾಯದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರಣಿಯಿಂದವರುಣ್ ಹೊರಗುಳಿದಿದ್ದರು. ಚೇತರಿಸಿಕೊಂಡ ಬಳಿಕ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ–20 ಸರಣಿಗೆ ಆಯ್ಕೆ ಮಾಡಲಾಗಿತ್ತು. ಎನ್‌ಸಿಎದ ಪುನಶ್ಚೇತನ ಶಿಬಿರದಲ್ಲೂ ಅವರಲ್ಲಿ ಚೇತರಿಕೆಯ ಲಕ್ಷಣಗಳು ಕಂಡುಬಂದಿದ್ದವು. ಆದಾಗ್ಯೂ ಅವರು ಯೊಯೊ ಪರೀಕ್ಷೆಯಲ್ಲಿ (ಕನಿಷ್ಠ ಎರಡು ಬಾರಿ ಎರಡು ಕಿ.ಮೀ. ಓಟ) ವಿಫಲರಾಗಿದ್ದಾರೆ‘ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಅಕ್ಟೋಬರ್‌ನಿಂದ ತವರು ತಂಡ ತಮಿಳುನಾಡು ಪರ ಒಂದೂ ಸ್ಪರ್ಧಾತ್ಮಕ ಪಂದ್ಯವಾಡದ ವರುಣ್ ಚಕ್ರವರ್ತಿ ಅವರನ್ನು ಚೇತನ್ ಶರ್ಮಾ ನೇತೃತ್ವದ ಸಮಿತಿಯು ಈ ಸರಣಿಗೆ ಆಯ್ಕೆ ಮಾಡಿದ್ದು ಏಕೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

‘ಮುಷ್ತಾಕ್ ಅಲಿ ಟ್ವೆಂಟಿ–20 ಟೂರ್ನಿಯ ಸಂದರ್ಭದಲ್ಲಿ ವರುಣ್‌ ಪುನಶ್ಚೇತನ ಶಿಬಿರದಲ್ಲಿದ್ದರು. ಆದರೆ ಆ ಬಳಿಕ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಒಂದೂ ಪಂದ್ಯವನ್ನು ಅವರು ಆಡಲಿಲ್ಲ. ಅವರ ಫಿಟ್‌ನೆಸ್ ಮೌಲ್ಯಮಾಪನ ಮಾಡಿದ್ದು ಹೇಗೆ? ಆಯ್ಕೆಗಾರರಿಗೆ ವರುಣ್ ವಿಚಾರ ಒಂದು ಪಾಠವಾಗಿದೆ‘ ಎಂದು ಅಧಿಕಾರಿ ನುಡಿದರು.

ವರುಣ್ ಚಕ್ರವರ್ತಿ ಅವರ ಬದಲಿಗೆ, ಈಗಾಗಲೇ ಜೀವಸುರಕ್ಷಾ (ಬಯೋಬಬಲ್‌) ವಲಯದಲ್ಲಿರುವ ರಾಹುಲ್ ಚಾಹರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.