ADVERTISEMENT

IND-W vs SA-W: ಭಾರತ ವನಿತೆಯರಿಗೆ 10 ವಿಕೆಟ್ ಜಯ

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ 1–1 ಸಮಬಲ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 17:39 IST
Last Updated 9 ಜುಲೈ 2024, 17:39 IST
ವಿಕೆಟ್ ಗಳಿಸಿದ ಸಂಭ್ರಮದಲ್ಲಿ ಪೂಜಾ ವಸ್ತ್ರಾಕರ್
ಪಿಟಿಐ ಚಿತ್ರ
ವಿಕೆಟ್ ಗಳಿಸಿದ ಸಂಭ್ರಮದಲ್ಲಿ ಪೂಜಾ ವಸ್ತ್ರಾಕರ್ ಪಿಟಿಐ ಚಿತ್ರ   

ಚೆನ್ನೈ: ಮಧ್ಯಮ ವೇಗದ ಬೌಲರ್ ಪೂಜಾ ವಸ್ತ್ರಾಕರ್ (13ಕ್ಕೆ4) ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದ ನಂತರ ಸ್ಮೃತಿ ಮಂದಾನ (54, 40ಎ, 4x8, 6x2) ಅವರು  ಬಿರುಸಿನ ಅರ್ಧ ಶತಕ ಹೊಡೆದು ಭಾರತ ತಂಡ, ಕೊನೆಯ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 10 ವಿಕೆಟ್‌ಗಳ ಸುಲಭ ಜಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದರೊಂದಿಗೆ ಮೂರು ಪಂದ್ಯಗಳ ಸರಣಿ ಮಂಗಳವಾರ 1–1ರಲ್ಲಿ ಸಮನಾಯಿತು. ಪೂಜಾ ಅವರಿಗೆ ಸೂಕ್ತ ಬೆಂಬಲ ನೀಡಿದ ಎಡಗೈ ಸ್ಪಿನ್ನರ್‌ ರಾಧಾ ಯಾದವ್‌ 6 ರನ್ನಿಗೆ 3 ವಿಕೆಟ್ ಪಡೆದರು.

ಟಾಸ್‌ ಗೆದ್ದ ಭಾರತ ಪ್ರವಾಸಿ ತಂಡವನ್ನು ಬ್ಯಾಟಿಂಗಿಗೆ ಇಳಿಸಿ 17.1 ಓವರುಗಳಲ್ಲಿ ಕೇವಲ 84 ರನ್‌ಗಳಿಗೆ ಕಟ್ಟಿಹಾಕಿತು. ಈ ಸಣ್ಣ ಮೊತ್ತವನ್ನು ಬೆನ್ನಟ್ಟಿದ ಭಾರತ 55 ಎಸೆತಗಳು ಉಳಿದಿರುವಂತೆ ವಿಕೆಟ್‌ ನಷ್ಟವಿಲ್ಲದೇ 88 ರನ್‌ ಹೊಡೆಯಿತು.

ADVERTISEMENT

ಉತ್ತಮ ಲಯದಲ್ಲಿರುವ ಮಂದಾನ ಜೊತೆ ಇನಿಂಗ್ಸ್ ಆರಂಭಿಸಿದ ಶಫಾಲಿ ವರ್ಮಾ 27 ರನ್ (25ಎ) ಗಳಿಸಿ ಅಜೇಯರಾಗುಳಿದರು. ನದೈನ್ ಡಿ ಕ್ಲಾರ್ಕ್‌ ಮಾಡಿದ 11ನೇ ಓವರಿನ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಮಂದಾನ ಭಾರತದ ಗೆಲುವನ್ನು ಪೂರೈಸಿದರು. ಇದು ಅವರು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಳಿಸಿದ 24ನೇ ಅರ್ಧ ಶತಕ.

ಇದಕ್ಕೆ ಮೊದಲು ದಕ್ಷಿಣ ಆಫ್ರಿಕಾ ಇನಿಂಗ್ಸ್‌ನಲ್ಲಿ ಮೂವರು ಮಾತ್ರ ಎರಡಂಕಿ ಮೊತ್ತ ಗಳಿಸಿದರು. ನಾಲ್ಕನೇ ಓವರಿನಲ್ಲಿ ನಾಯಕಿ ಲಾರಾ ವೊಲ್ವಾರ್ಟ್ (9) ಅವರ ವಿಕೆಟ್‌ ಪಡೆಯುವ ಮೂಲಕ ಶ್ರೇಯಾಂಕಾ ಪಾಟೀಲ ಭಾರತಕ್ಕೆ ಯಶಸ್ಸು ಗಳಿಸಿಕೊಟ್ಟರು. ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಆಟ ಆಡಿದ್ದ ತಾಜ್ಮಿನ್ ಬ್ರಿಟ್ಸ್‌ (20, 23ಎ) ಈ ಪಂದ್ಯದಲ್ಲೂ ಹೆಚ್ಚಿನ ಕಾಣಿಕೆ ನೀಡಿದರು. ಅವರು ಮೂರನೆಯವರಾಗಿ ನಿರ್ಗಮಿಸಿದ ನಂತರ ತಂಡ ಕುಸಿಯಿತು.

ಸ್ಕೋರುಗಳು: ದಕ್ಷಿಣ ಆಫ್ರಿಕಾ ಮಹಿಳಾ ತಂಡ: 17.1 ಓವರುಗಳಲ್ಲಿ 84 (ತಾಜ್ಮಿನ್‌ ಬ್ರಿಟ್ಸ್‌ 20, ಮರೈಝನ್ ಕಾಪ್ 10, ಅನ್ನೇಕೆ ಬಾಷ್‌ 17; ಪೂಜಾ ವಸ್ತ್ರಾಕರ್ 13ಕ್ಕೆ4, ರಾಧಾ ಯಾದವ್‌ 6ಕ್ಕೆ3, ಅರುಂಧತಿ ರೆಡ್ಡಿ 14ಕ್ಕೆ1, ಶ್ರೇಯಾಂಕ ಪಾಟೀಲ 19ಕ್ಕೆ1, ದೀಪ್ತಿ ಶರ್ಮಾ 21ಕ್ಕೆ1); ಭಾರತ ಮಹಿಳಾ ತಂಡ: 10.5 ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 88 (ಶಫಾಲಿ ವರ್ಮಾ ಔಟಾಗದೇ 27, ಸ್ಮೃತಿ ಮಂದಾನ ಔಟಾಗದೇ 54). ಪಂದ್ಯದ ಮತ್ತು ಸರಣಿಯ ಆಟಗಾರ್ತಿ: ಪೂಜಾ ವಸ್ತ್ರಾಕರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.