ADVERTISEMENT

ಫಿಕ್ಸಿಂಗ್ ಮಾಡುವಾಗ ಬುದ್ಧಿ ಇರಲಿಲ್ಲವೇ: ಸಲ್ಮಾನ್‌ ಭಟ್‌ಗೆ ವಾನ್ ತಿರುಗೇಟು

ಪಾಕ್ ಆಟಗಾರ ಸಲ್ಮಾನ್‌ ಭಟ್‌ಗೆ ಮೈಕೆಲ್ ವಾನ್ ತಿರುಗೇಟು

ಪಿಟಿಐ
Published 16 ಮೇ 2021, 19:11 IST
Last Updated 16 ಮೇ 2021, 19:11 IST
ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್
ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್   

ಲಂಡನ್: ‘ಅಂದು ಪಂದ್ಯ ಫಿಕ್ಸಿಂಗ್‌ ಮಾಡುವಾಗ ನಿಮ್ಮ ಬುದ್ಧಿ ಎಲ್ಲಿ ಹೋಗಿತ್ತು. ಈಗ ತೋರಿಸುತ್ತಿರುವ ಜಾಣತನ ಆಗ ಬಳಸಬೇಕಿತ್ತು‘–

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅವರು ಪಾಕಿಸ್ತಾನ ಮಾಜಿ ಆಟಗಾರ ಸಲ್ಮಾನ್ ಭಟ್ ಅವರಿಗೆ ನೀಡಿರುವ ತಿರುಗೇಟು ಇದು.

ಈಚೆಗೆ ವಾನ್ ಅವರು ‘ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಮತ್ತು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಬ್ಬರೂ ಶ್ರೇಷ್ಠ ಆಟಗಾರರು. ಆದರೆ ವಿರಾಟ್ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಜಾಹೀರಾತುಗಳಿಂದ ಅಪಾರ ಹಣವನ್ನೂ ಗಳಿಸುತ್ತಿದ್ದಾರೆ. ಕೇನ್ ವಿಲಿಯಮ್ಸನ್ ಭಾರತದಲ್ಲಿ ಜನಿಸಿದ್ದರೆ ಬಹುಶಃ ಕೊಹ್ಲಿಯನ್ನೂ ಮೀರಿಸುತ್ತಿದ್ದರು‘ ಎಂದು ಟ್ವೀಟ್ ಮಾಡಿದ್ದರು.

ADVERTISEMENT

ಈ ಹೇಳಿಕೆಗೆ ತಮ್ಮ ಯೂಟ್ಯೂಬ್ ವಿಡಿಯೊದಲ್ಲಿ ಪ್ರತಿಕ್ರಿಯಿಸಿರುವ ಸಲ್ಮಾನ್, ‘ಕೊಹ್ಲಿ 70 ಶತಕ ಹೊಡೆದಿದ್ದಾರೆ. ಐಸಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಪಟ್ಟವನ್ನು ಹಲವು ವರ್ಷ ಕಾಯ್ದುಕೊಂಡಿದ್ದಾರೆ. ಅಪಾರ ಜನಸಂಖ್ಯೆಯಿರುವ ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ. ಆದ್ದರಿಂದ ಅವರಿಗೆ ದೊಡ್ಡ ಮಟ್ಟದ ಅಭಿಮಾನಿಗಳ ಬಳಗವಿದೆ. ವಾನ್ ಇಂಗ್ಲೆಂಡ್ ತಂಡಕ್ಕೆ ಉತ್ತಮ ನಾಯಕತ್ವ ಕೊಟ್ಟಿದ್ದವರು. ಟೆಸ್ಟ್‌ನಲ್ಲಿ ಒಳ್ಳೆಯ ಬ್ಯಾಟ್ಸ್‌ಮನ್ ಆಗಿದ್ದರೂ ಏಕದಿನ ಕ್ರಿಕೆಟ್‌ನಲ್ಲಿ ಒಂದೂ ಶತಕ ಗಳಿಸಿಲ್ಲ. ಅಂತಹವರು ಇನ್ನೊಬ್ಬರ ದಾಖಲೆಗಳ ಬಗ್ಗೆ ಮಾತನಾಡುವುದು ತಮಾಷೆಯ ಸಂಗತಿ‘ ಎಂದಿದ್ದರು.

ಇದರಿಂದ ಕೆರಳಿರುವ ವಾನ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹತ್ತು ವರ್ಷಗಳ ಹಿಂದೆ ಸಲ್ಮಾನ್ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ನಿಷೇಧ ಶಿಕ್ಷೆ ಅನುಭವಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.