ಚೆನ್ನೈ: ವೆಸ್ಟ್ ಇಂಡೀಸ್ ಎದುರು ಟಿ20 ಕ್ರಿಕೆಟ್ ಸರಣಿ ಸೋತ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡವು ‘ಅತಿ ಸಾಧಾರಣ ಬಳಗ‘ ಹಾಗೂ ‘ಭ್ರಮೆಯಲ್ಲಿ ತೇಲುತ್ತಿರುವವರು‘ ಎಂದು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಟೀಕಿಸಿದ್ದಾರೆ.
ಶನಿವಾರ ತಡರಾತ್ರಿ ಮುಗಿದ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡವು 8 ವಿಕೆಟ್‌ಗಳಿಂದ ಸೋತಿತು. ಅದರೊಂದಿಗೆ ಆತಿಥೇಯ ವೆಸ್ಟ್ ಇಂಡೀಸ್ ಬಳಗವು 3–2ರಿಂದ ಸರಣಿ ಗೆದ್ದಿತು.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಮಧ್ಯಮವೇಗದ ಬೌಲರ್ ವೆಂಕಟೇಶ್‌ಪ್ರಸಾದ್, ‘ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅತ್ಯಂತ ಸಾಧಾರಣ ತಂಡ ಇದಾಗಿದೆ. ವಿಶ್ವಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲವಾಗಿರುವ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡವು ಸೋತಿದೆ. ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿಯೂ ತಂಡ ಸೋತಿತ್ತು. ಸೋಲುಗಳನ್ನು ಸ್ವೀಕರಿಸಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸುಧಾರಣೆಯತ್ತ ಗಮನ ಹರಿಸಬೇಕು. ಬಾಲಿಶವಾದ ಹೇಳಿಕೆ ನೀಡುವುದನ್ನು ಬಿಡಬೇಕು‘ ಎಂದಿದ್ದಾರೆ.
ಇದೇ ಅಕ್ಟೋಬರ್‌ನಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವೆಸ್ಟ್ ಇಂಡೀಸ್ ವಿಫಲವಾಗಿದೆ. ಐಸಿಸಿಯ ಏಳನೇ ರ‍್ಯಾಂಕ್‌ನಲ್ಲಿದೆ.
‘ಭಾರತ ತಂಡವು ತನ್ನ ಕೌಶಲಗಳಲ್ಲಿ ಸುಧಾರಣೆ ಮಾಡಿಕೊಳ್ಳಬೇಕಿದೆ. ಗೆಲುವಿನ ಹಸಿವು ಮತ್ತು ಉತ್ಕಟತೆಯ ಕೊರತೆ ಎದ್ದು ಕಾಣುತ್ತಿದೆ. ನಾಯಕನಿಗೆ ಯಾವುದೇ ಸ್ವಷ್ಟತೆಯಿದ್ದಂತೆ ಕಾಣುವುದಿಲ್ಲ. ಬೌಲರ್‌ಗಳು ಬ್ಯಾಟಿಂಗ್ ಮಾಡಲು ಹಾಗೂ ಬ್ಯಾಟರ್‌ಗಳು ಬೌಲಿಂಗ್ ಮಾಡಲು ಆಗವುದಿಲ್ಲ. ಆದರೆ, ಆಟಗಾರರ ಆಯ್ಕೆ ಮಾಡುವಾಗಲೂ ತಂಡದ ಒಳಿತನ್ನು ಗಮನದಲ್ಲಿ ಇಡಬೇಕು’ ಎಂದು ವೆಂಕಿ ಇನ್ನೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ಸಂದೇಶಕ್ಕೆ ಕಮೆಂಟ್ ಮಾಡಿದ ಅಭಿಮಾನಿಯೊಬ್ಬರಿಗೆ ಪ್ರತಿಕ್ರಿಯಿಸಿರುವ ವೆಂಕಿ, ‘ನಾಯಕ ಪಾಂಡ್ಯ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರೇ ಸೋಲಿನ ಹೊಣೆ ಹೊರಬೇಕು. ಗೊತ್ತುಗುರಿಯಿಲ್ಲದ ಆಯ್ಕೆಗಳು ನಡೆಯುತ್ತಲೇ ಇವೆ‘ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.