ಮುಂಬೈ (ಪಿಟಿಐ): ತಾವು ಜಾತಿವಾದಿಯಲ್ಲ. ಜಾತಿಯ ಆಧಾರದಲ್ಲಿ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಿಲ್ಲ.ತಮ್ಮ ಮೇಲೆ ಉತ್ತರಾಖಂಡ ಕ್ರಿಕೆಟ್ ಸಂಸ್ಥೆ ಪದಾಧಿಕಾರಿಗಳು ಮಾಡಿರುವ ಆರೋಪವು ಸತ್ಯಕ್ಕೆ ದೂರವಾಗಿದೆ ಎಂದು ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಹೇಳಿದ್ದಾರೆ.
ಅವರು ಈಚೆಗಷ್ಟೇ ಉತ್ತರಾಖಂಡ ತಂಡದ ಕೋಚ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.
’ತಂಡದ ಆಯ್ಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳ ಹಸ್ತಕ್ಷೇಪ ಮತ್ತು ಪಕ್ಷಪಾತದಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ‘ ಎಂದು ಜಾಫರ್ ಪ್ರಕಟಿಸಿದ್ದರು.
ಅದರ ನಂತರ ಉತ್ತರಾಖಂಡ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಮಹಿಮ್ ವರ್ಮಾ, ’ಜಾಫರ್ ಅವರು ಮುಸ್ಲಿಂ ಆಟಗಾರರ ಪರವಾಗಿದ್ದರು‘ ಎಂದು ನೀಡಿದ್ದ ಹೇಳಿಕೆಯು ಮಾಧ್ಯಮದಲ್ಲಿ ವರದಿಯಾಗಿತ್ತು.
ಈ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿರುವ ಜಾಫರ್, ’ಈ ಆರೋಪವು ವಿಷಾದನೀಯ. ಇಕ್ಬಾಲ್ ಅಬ್ದುಲ್ಲಾ ಎಂಬ ಆಟಗಾರನನ್ನು ನಾನು ತಂಡದ ನಾಯಕನನ್ನಾಗಿ ನೇಮಕ ಮಾಡಲು ಪ್ರಯತ್ನಿಸಿದ್ದೆ ಎಂದು ಆರೋಪಿಸಿರುವುದೂ ತಪ್ಪು‘ ಎಂದಿದ್ದಾರೆ.
’ಡೆಹ್ರಾಡೂನ್‌ನಲ್ಲಿ ತರಬೇತಿ ಶಿಬಿರ ನಡೆದಾಗ ಬಯೋಬಬಲ್ ಜಾರಿಯಲ್ಲಿತ್ತು. ಆಗ ಎರಡು –ಮೂರು ಶುಕ್ರವಾರಗಳಂದು ನಮಾಜ್ ಸಲ್ಲಿಸಲು ಬಂದಿದ್ದ ಮೌಲ್ವಿ , ಮೌಲಾನಾಗಳನ್ನು ನಾನು ಆಹ್ವಾನಿಸಿದ್ದೆ ಎಂದೂ ಆರೋಪಿಸಿದ್ದಾರೆ. ಅದೂ ಸುಳ್ಳು. ನಾನು ಯಾರನ್ನೂ ಕರೆಸಿರಲಿಲ್ಲ. ಇಕ್ಬಾಲ್ ಅಬ್ದುಲ್ಲಾ (ಆಟಗಾರ) ಅವರು ನನ್ನ ಮತ್ತು ಮ್ಯಾನೇಜರ್ ಅನುಮತಿ ಪಡೆದು ಶುಕ್ರವಾರದ ಪ್ರಾರ್ಥನೆ ವ್ಯವಸ್ಥೆ ಮಾಡಿದ್ದರು‘ ಎಂದು ಜಾಫರ್ ಸ್ಪಷ್ಟಪಡಿಸಿದ್ದಾರೆ.
’ನಾವು ಪ್ರತಿನಿತ್ಯದ ಪ್ರಾರ್ಥನೆಯನ್ನು ನಮ್ಮ ಕೋಣೆಗಳಲ್ಲಿಯೇ ಮಾಡುತ್ತೇವೆ. ಆದರೆ ಶುಕ್ರವಾರದಂದು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲು ಇಕ್ಬಾಲ್ ಈ ರೀತಿ ಮಾಡಿದ್ದರು. ನೆಟ್ಸ್ ಅಭ್ಯಾಸದ ನಂತರ ಐದು ನಿಮಿಷಗಳವರೆಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೆವು. ನಾನು ಜಾತಿವಾದಿಯಾಗಿದ್ದರೆ, ನೆಟ್ಸ್ ಅಭ್ಯಾಸದ ಸಮಯವನ್ನು ಬದಲಿಸಿ ಪ್ರಾರ್ಥನೆಗೆ ಅವಕಾಶ ಕಲ್ಪಿಸುತ್ತಿದ್ದೆ. ಆದರೆ ನನ್ನ ಮನೋಭಾವ ಅಂತದ್ದಲ್ಲ‘ ಎಂದು ಮುಂಬೈನ ಜಾಫರ್ ವಿವರಿಸಿದರು.
’ಇದೇನೂ ಅಂತಹ ದೊಡ್ಡ ವಿಷಯವೇನಲ್ಲ. ಅದನ್ನೂ ಈ ರೀತಿ ಯಾಕೆ ಬಿಂಬಿಸುತ್ತಿದ್ದಾರೆ ಗೊತ್ತಿಲ್ಲ‘ ಎಂದೂ ಹೇಳಿದ್ದಾರೆ.
2020ರ ಜೂನ್‌ನಲ್ಲಿ ಜಾಫರ್ ಅವರು ಉತ್ತರಾಖಂಡ ಕೋಚ್ ಆಗಿ ನೇಮಕವಾಗಿದ್ದವು. ಒಂದು ವರ್ಷದ ಒಪ್ಪಂದ ಮಾಡಿಕೊಂಡಿದ್ದರು. ಈಚೆಗೆ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ತಂಡವು ಐದು ಪಂದ್ಯಗಳನ್ನು ಆಡಿ ಒಂದರಲ್ಲಿ ಗೆದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.