ADVERTISEMENT

ಆಟದ ಮ್ಯಾಜಿಕ್‌ಗೆ ವಯಸ್ಸಿನ ಲಾಜಿಕ್ ಯಾಕೆ?

ವಿಕ್ರಂ ಕಾಂತಿಕೆರೆ
Published 13 ಮೇ 2019, 3:42 IST
Last Updated 13 ಮೇ 2019, 3:42 IST
ಇಮ್ರಾನ್ ತಾಹೀರ್‌, ಅಮಿತ್ ಮಿಶ್ರಾ, ಮಹೇಂದ್ರ ಸಿಂಗ್ ಧೋನಿ, ಕ್ರಿಸ್ ಗೇಲ್‌, ಯುವರಾಜ್ ಸಿಂಗ್‌
ಇಮ್ರಾನ್ ತಾಹೀರ್‌, ಅಮಿತ್ ಮಿಶ್ರಾ, ಮಹೇಂದ್ರ ಸಿಂಗ್ ಧೋನಿ, ಕ್ರಿಸ್ ಗೇಲ್‌, ಯುವರಾಜ್ ಸಿಂಗ್‌   

ಇಂಡಿಯನ್ ಸೂಪರ್ ಲೀಗ್ (ಐಪಿಎಲ್) ಹಬ್ಬ ಮುಗಿಯಿತು. ರಿಷಭ್ ಪಂತ್, ಪೃಥ್ವಿ ಶಾ, ರಯಾನ್ ಪರಾಗ್ ಮುಂತಾದ ಕುಡಿ ಮೀಸೆಯ ಆಟಗಾರರು ವಿಜೃಂಭಿಸಿದ ಟೂರ್ನಿ ಕ್ರಿಕೆಟ್ ನ ರಸಗಳಿಗೆಗಳನ್ನು ಕ್ರೀಡಾಪ್ರಿಯರ ಮನಸ್ಸಿನಲ್ಲಿ ಅಚ್ಚು ಮಾಡಿದೆ.

40ರ ಆಸುಪಾಸಿನ ಅನೇಕ ಆಟಗಾರರು ಟೂರ್ನಿಯಲ್ಲಿ ಛಾಪು ಮೂಡಿಸಿದ್ದಾರೆ. ಇ್ರಮಾನ್ ತಾಹೀರ್ ಅವರ ವಿಶಿಷ್ಟ ಸಂಭ್ರಮದ ಶೈಲಿ, ಎಬಿ ಡಿವಿಲಿಯರ್ಸ್ ಅವರ ‘360 ಡಿಗ್ರಿ’ ಬ್ಯಾಟಿಂಗ್ ವೈಭವ, ಕ್ರಿಸ್ ಗೇಲ್ ಅವರ ಆಕಾಶದೆತ್ತರದ ಸಿಕ್ಸರ್ ಗಳು, ಮಹೇಂದ್ರ ಸಿಂಗ್ ಧೋನಿ ಅವರ ಹೆಲಿಕ್ಯಾಪ್ಟರ್ ಶಾಟ್, ಯುವರಾಜ್ ಸಿಂಗ್ ಅವರ ಮೋಹಕ ಫ್ಲಿಕ್, ಯೂಸುಫ್ ಪಠಾಣ್ ಅಬ್ಬರ, ಅಮಿತ್ ಮಿಶ್ರಾ ಗೂಗ್ಲಿ ಮೋಡಿ, ದಿನೇಶ್ ಕಾರ್ತಿಕ್ ಡ್ರೈವ್, ಕಟ್ ಮತ್ತು ಸ್ವೀಪ್ ಸೊಗಸು... ಹೀಗೆ ಹಿರಿಯ ಆಟಗಾರರು ಈ ಟೂರ್ನಿಯಲ್ಲಿ ಪ್ರೇಕ್ಷಕರಿಗೆ ನೀಡಿರುವ ಖುಷಿ ಬಗೆಬಗೆಯದು. ಮುಂದಿನ ವರ್ಷಗಳಲ್ಲೂ ಇವರ ಆಟದ ರಸದೂಟ ಸವಿಯುವ ಸೌಭಾಗ್ಯ ಸಿಗುವುದೇ...?

ಇಮ್ರಾನ್ ತಾಹೀರ್
ದೇಶ - ದಕ್ಷಿಣ ಆಫ್ರಿಕಾ
ವಯಸ್ಸು -40
ತಂಡ -ಚೆನ್ನೈ ಸೂಪರ್ ಕಿಂಗ್ಸ್
ತಂಡದಲ್ಲಿ ಸ್ಥಾನ ಲೆಗ್ ಸ್ಪಿನ್ನರ್
ಪಂದ್ಯಗಳು -15
ವಿಕೆಟ್ -23
ಶ್ರೇಷ್ಠ -12ಕ್ಕೆ4
ಒಟ್ಟಾರೆ ಪಂದ್ಯಗಳು- 53
ವಿಕೆಟ್ -76
ಶ್ರೇಷ್ಠ -12ಕ್ಕೆ4

ADVERTISEMENT

ಆಟ-ಓಟದ ಸಂಭ್ರಮ: ಇಮ್ರಾನ್ ತಾಹೀರ್ ಎಂದಾಕ್ಷಣ ಗಮನಕ್ಕೆ ಬರುವುದು ಸಣ್ಣ ರನ್ ಅಪ್, ಲೆಗ್ ಸ್ಪಿನ್ ಮತ್ತು ಸಂಭ್ರಮ. ವಿಕೆಟ್ ಗಳಿಸಿದಾಗ ಎರಡು ಕೈಗಳನ್ನು ಮೇಲೆತ್ತಿ ಅಂಗಣದ ತುಂದ ಓಡುವ ಅವರ ಸಂತಸವನ್ನು ಸವಿಯುವುದೇ ಮೋಹಕ ನೋಟ. ಐಪಿಎಲ್ ನಲ್ಲಿ ಆಡುತ್ತಿರುವ ಅತಿ ಹಿರಿಯ ಆಟಗಾರನಾದರೂ ವಯಸ್ಸಿಗೆ ಮೀರಿದ ಉತ್ಸಾಹದ ಮೂಲಕ ಅವರು ಪ್ರಸಿದ್ಧಿ ಪಡೆದಿದ್ದಾರೆ. 40ರ ಹರಯದಲ್ಲೂ ವಿಶ್ವದ ವಿವಿಧ ಕಡೆಗಳಲ್ಲಿ ನಡೆಯುವ ಲೀಗ್ ಗಳಲ್ಲಿ ಆಡುವ ತುಡಿತ ಅವರ ಜೀವನೋತ್ಸಾಹವನ್ನು ಸಾರಿ ಹೇಳುತ್ತಿದೆ. ಸದ್ಯ, ಅತಿ ಹೆಚ್ಚು ಅಂದರೆ, 27 ಟೂರ್ನಿಗಳಲ್ಲಿ ಆಡುತ್ತಿರುವ ಏಕೈಕ ಆಟಗಾರ ಅವರು

ಕ್ರಿಸ್ ಗೇಲ್
ದೇಶ -ವೆಸ್ಟ್ ಇಂಡೀಸ್
ವಯಸ್ಸು- 40
ತಂಡ -ಕಿಂಗ್ಸ್ ಇಲೆವನ್ ಪಂಜಾಬ್
ತಂಡದಲ್ಲಿ ಸ್ಥಾನ -ಬ್ಯಾಟ್ಸ್‌ಮನ್
ಪಂದ್ಯಗಳು- 13
ರನ್- 490
ಗರಿಷ್ಠ -99*
‌ಅರ್ಧಶತಕ- 4
ಒಟ್ಟಾರೆ ಪಂದ್ಯಗಳು- 125
ರನ್- 4484
ಗರಿಷ್ಠ -175*
‌ಶತಕ -6
ಅರ್ಧಶತಕ -28
ವಿಕೆಟ್ -18
ಶ್ರೇಷ್ಠ- 21ಕ್ಕೆ3

ಸಿಕ್ಸರ್ ಗೇಲ್: ಕ್ರಿಸ್ ಗೇಲ್ ಎಂದಾಕ್ಷಣ ನೆನಪಿಗೆ ಬರುವುದು ಚೆಂಡನ್ನು ಎತ್ತಿ ಪ್ರೇಕ್ಷಕರ ಕಡೆಗೆ ಅಟ್ಟುವ ದೈತ್ಯ ಆಟಗಾರ. ಆರಂಭದ ಕೆಲವು ಆವೃತ್ತಿಗಳಲ್ಲಿ ಐಪಿಎಲ್ ಎಂದರೆ ಕ್ರಿಸ್ ಗೇಲ್ ಎನ್ನುವಷ್ಟರ ಮಟ್ಟಕ್ಕೆ ಅವರು ಪ್ರಭಾವ ಬೀರಿದ್ದರು. ನಂತರ ಸಪ್ಪೆಯಾದ ಕಾರಣ ಕಳೆದ ಆವೃತ್ತಿಯಲ್ಲಿ ಅವರ ಬೇಡಿಕೆ ಕುಸಿದಿತ್ತು. ಹೀಗಾಗಿ ಕಡಿಮೆ ಮೊತ್ತಕ್ಕೆ, ಕೊನೆಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಖರೀದಿಸಿತ್ತು. 40ರ ಆಸುಪಾಸಿನಲ್ಲಿದ್ದರೂ ಅವರು ತಮ್ಮ ಸಾಮರ್ಥ್ಯ ಕುಗ್ಗಿಲ್ಲ ಎಂಬುದನ್ನು ಈ ಬಾರಿ ಸಾಬೀತು ಮಾಡಿದ್ದಾರೆ. ಕರ್ನಾಟಕದ ಕೆ.ಎಲ್.ರಾಹುಲ್ ಜೊತೆಗೂಡಿ ಅವರು ಈ ಬಾರಿ ಕಿಂಗ್ಸ್ ಇಲೆವನ್ ಗೆ ಉತ್ತಮ ಆರಂಭ ಒದಗಿಸುವಲ್ಲಿ ನೆರವಾಗಿದ್ದರು.

ಯುವರಾಜ್ ಸಿಂಗ್
ದೇಶ- ಭಾರತ
ವಯಸ್ಸು- 38
ತಂಡ- ಮುಂಬೈ ಇಂಡಿಯನ್ಸ್
ತಂಡದಲ್ಲಿ ಸ್ಥಾನ -ಆಲ್ ರೌಂಡರ್
ಪಂದ್ಯಗಳು- 4
ರನ್ -98
ಗರಿಷ್ಠ- 53
ಒಟ್ಟಾರೆ ಪಂದ್ಯಗಳು- 132
ರನ್- 2750
ಗರಿಷ್ಠ- 83
ಅರ್ಧಶತಕ -13
ವಿಕೆಟ್ -36
ಶ್ರೇಷ್ಠ- 29ಕ್ಕೆ4

ಕ್ಯಾನ್ಸರ್ ಗೆ ಸಡ್ಡು ಹೊಡೆದು ಆಟದ ಅಂಗಳಕ್ಕೆ ಮರಳಿದ ಎಡಗೈ ಆಟಗಾರ ಯುವರಾಜ್ ಸಿಂಗ್ ಕೂಡ ಸಿಕ್ಸರ್ ಗಳಿಗೆ ಪ್ರಸಿದ್ಧ. ಟ್ವೆಂಟಿ-20 ಪಂದ್ಯದಲ್ಲಿ ಆರು ಆಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ ಖ್ಯಾತಿಯ ಯುವರಾಜ್ ಈ ಬಾರಿ ಆಡಿದ್ದು ಕಡಿಮೆ ಪಂದ್ಯ. ಆದರೂ ವಯಸ್ಸಿಗೆ ಮೀರಿದ ಸಾಮರ್ಥ್ಯ ತೋರಿದ್ದಾರೆ. ಮುಂಬೈ ತಂಡದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದ್ದಾರೆ.

ಮಹೇಂದ್ರ ಸಿಂಗ್ ಧೋನಿ
ದೇಶ -ಭಾರತ
ವಯಸ್ಸು- 38
ತಂಡ -ಚೆನ್ನೈ ಸೂಪರ್ ಕಿಂಗ್ಸ್
ತಂಡದಲ್ಲಿ ಸ್ಥಾನ -ವಿಕೆಟ್ ಕೀಪರ್ ಬ್ಯಾಟ್ಸ್ ಮನ್
ಪಂದ್ಯಗಳು- 13
ರನ್- 405
ಗರಿಷ್ಠ -84*
ಅರ್ಧಶತಕ -3
ಕ್ಯಾಚ್ -8
ಸ್ಟಂಪ್ಸ್ -5
ಒಟ್ಟಾರೆ ಪಂದ್ಯಗಳು -188
ರನ್ -4421
ಗರಿಷ್ಠ -84*
ಅರ್ಧಶತಕ -23
ಕ್ಯಾಚ್ -95
ಸ್ಟಂಪ್ಸ್ -38

‘ಹೆಲಿಕ್ಯಾಪ್ಟರ್’ ಬೆನ್ನೇರಿ ಧೋನಿ: ಕ್ಯಾಪ್ಟನ್ ಕೂಲ್ ಎಂದೇ ಹೆಸರಾಗಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಲ್ಲೂ ತಂಡವನ್ನು ಶಾಂತವಾಗಿ ಮುನ್ನಡೆಸಿದ್ದಾರೆ. ವಯಸ್ಸು 40ರ ಸನಿಹವಿದ್ದರೂ ನಾಯಕತ್ವ ಮತ್ತು ಆಟಕ್ಕೆ ಯಾವುದೇ ಕುಂದುಂಟಾಗದಂತೆ ಅವರು ಸಾಧನೆ ಮಾಡಿದ್ದಾರೆ. ತಮ್ಮ ಸಹಜ ಶೈಲಿಯ ಹೆಲಿಕ್ಯಾಪ್ಟರ್ ಶಾಟ್ ಮೂಲಕ ರಂಜಿಸಿದ್ದಾರೆ. ಯುವ ಆಟಗಾರ ಹಾರ್ದಿಕ್ ಪಾಂಡ್ಯ ಅವರು ಧೋನಿಯ ಹೆಲಿಕ್ಯಾಪ್ಟರ್ ಶಾಟ್ ‘ಕಾಪಿ’ ಮಾಡಲು ಮುಂದಾಗಿದ್ದರು.

ಯೂಸುಫ್ ಪಠಾಣ್
ದೇಶ -ಭಾರತ
ವಯಸ್ಸು -37
ತಂಡ -ಸನ್ ರೈಸರ್ಸ್ ಹೈದರಾಬಾದ್
ತಂಡದಲ್ಲಿಸ್ಥಾನ -ಆಲ್ ರೌಂಡರ್
ಪಂದ್ಯಗಳು- 10
ರನ್- 40
ಒಟ್ಟಾರೆ ಪಂದ್ಯಗಳು- 174
ರನ್ -3204
ಗರಿಷ್ಠ -100
ಶತಕ- 1
ಅರ್ಧಶತಕ -13
ವಿಕೆಟ್- 42
ಶ್ರೇಷ್ಠ -20ಕ್ಕೆ3

ಭರ್ಜರಿ ಹೊಡೆಗಳ ಆಲ್ ರೌಂಡರ್: ಪಠಾಣ್ ಸಹೋದರರ ಪೈಕಿ ಹಿರಿಯರಾದ ಯೂಸುಫ್ ಬತ್ತದ ಉತ್ಸಾಹಕ್ಕೆ ಹೆಸರಾಗಿದ್ದಾರೆ. ಭರ್ಜರಿ ಹೊಡೆತಗಳ ಆಟಗಾರನಾದ ಯೂಸುಫ್ ಆಫ್ ಬ್ರೆಕ್ ಬೌಲಿಂಗ್ ಮೂಲಕವೂ ಎದುರಾಳಿ ಪಾಳಯದಲ್ಲಿ ಆತಂಕ ಮೂಡಿಸಬಲ್ಲರು. ಈ ಬಾರಿ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗದಿದ್ದರೂ ತಂಡದಲ್ಲಿ ಅವರ ಸಾನ್ನಿಧ್ಯ ಕಿರಿಯ ಆಟಗಾರರಿಗೆ ದಾರಿದೀಪ ಆಗಿದೆ.

ಅಮಿತ್ ಮಿಶ್ರಾ
ದೇಶ -ಭಾರತ
ವಯಸ್ಸು- 37
ತಂಡ- ಡೆಲ್ಲಿ ಕ್ಯಾಪಿಟಲ್ಸ್
ತಂಡದಲ್ಲಿ ಸ್ಥಾನ -ಲೆಗ್ ಸ್ಪಿನ್ನರ್
ಪಂದ್ಯಗಳು -10
ವಿಕೆಟ್- 10
ಶ್ರೇಷ್ಠ -17ಕ್ಕೆ3
ಒಟ್ಟಾರೆ ಪಂದ್ಯಗಳು -146
ವಿಕೆಟ್- 156
ಶ್ರೇಷ್ಠ- 17ಕ್ಕೆ5

ಮಿಶ್ರ ಸಾಧನೆಯ ಆಟಗಾರ: ಲೆಗ್ ಸ್ಪಿನ್ ಬೌಲಿಂಗ್ ಮೂಲಕ ಎಂಥ ಬ್ಯಾಟ್ಸ್ ಮನ್ ಗೂ ಅಪಾಯ ತಂದೊಡ್ಡಬಲ್ಲ ಅಮಿತ್ ಮಿಶ್ರಾ ಅಗತ್ಯ ಬಿದ್ದಾಗ ಬ್ಯಾಟಿಂಗ್ ನಲ್ಲೂ ಮಿಂಚಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಾಡಿರುವ ಸಾಧನೆಗೆ ಅವರ ಕೊಡುಗೆಯೂ ಅಪಾರ. ತಾಳ್ಮೆ ಕಳೆದುಕೊಳ್ಳದ ಅಮಿತ್ ಮಿಶ್ರಾ ವಿಕೆಟ್ ಗಳಿಸಿದಾಗ ಸಂಭ್ರಮಿಸುವ ಪರಿಯೂ ಸರಳ.

ಎಬಿ ಡಿವಿಲಿಯರ್ಸ್
ದೇಶ -ದಕ್ಷಿಣ ಆಫ್ರಿಕಾ
ಪಂದ್ಯಗಳು -13
ತಂಡ -ರಾಯಲ್ ಚಾಲೆಂಜರ್ಸ್ ಬೆಂಗಳೂರು
ರನ್ -442
ಗರಿಷ್ಠ- 82*
ಅರ್ಧಶತಕ -5
ಒಟ್ಟಾರೆ ಪಂದ್ಯಗಳು -154
ರನ್- 4395
ಗರಿಷ್ಠ -133*
ಶತಕ -3
ಅರ್ಧಶತಕ- 33

ಸ್ಫೋಟಕ ‘360 ಡಿಗ್ರಿ’ ಶೈಲಿ: ಕ್ರಿಸ್ ಗೇಲ್ ಅವರಂತೆಯೇ ಎಬಿ ಡಿವಿಲಿಯರ್ಸ್ ಕೂಡ ಐಪಿಎಲ್ ಗೆ ಪರ್ಯಾಯ ಹೆಸರು. ಅಂಗಣದ ಎಲ್ಲ ಮೂಲೆಗೂ ಚೆಂಡನ್ನು ಅಟ್ಟಬಲ್ಲ ಡಿವಿಲಿಯರ್ಸ್ ಬ್ಯಾಟಿಂಗ್ ಶೈಲಿಯೇ ವಿಚಿತ್ರ, ಅಮೋಘ. ಸ್ಪಿನ್ ಇರಲಿ, ವೇಗದ ಬೌಲಿಂಗ್ ಇರಲಿ, ಎಲ್ಲವನ್ನೂ ಒಂದೇ ರೀತಿಯಲ್ಲಿ ಎದುರಿಸುವ ಅವರ ಸಾಮರ್ಥ್ಯ ಅಪಾರ. ಈ ಬಾರಿಯೂ ಐಪಿಎಲ್ ನಲ್ಲಿ ಅವರ ಪ್ರಭೆ ಕುಂದಿರಲಿಲ್ಲ.

ಸ್ಟುವರ್ಟ್ ಬಿನ್ನಿ
ದೇಶ -ಭಾರತ
ವಯಸ್ಸು 3-4
ತಂಡ -ರಾಜಸ್ಥಾನ್ ರಾಯಲ್ಸ್
ತಂಡದಲ್ಲಿ ಸ್ಥಾನ -ಆಲ್ ರೌಂಡರ್
ಪಂದ್ಯಗಳು -9
ರನ್ -70
ವಿಕೆಟ್ -1
ಒಟ್ಟಾರೆ ಪಂದ್ಯಗಳು -95
ರನ್ -880
ಅರ್ಧಶತಕ- 6

ಉತ್ಸಾಹದ ಚಿಲುಮೆ: ಕರ್ನಾಟಕದ ಸ್ಟುವರ್ಟ್ ಬಿನ್ನಿಗೆ ಕ್ರಿಕೆಟ್ ಜೀವಾಳ. ಐಪಿಎಲ್ ನ ಅವಿಭಾಜ್ಯ ಅಂಗವಾಗಿರುವ ಸ್ಟುವರ್ಟ್ ಈ ಬಾರಿ ತಂಡಕ್ಕೆ ಹೆಚ್ಚು ಕಾಣಿಕೆ ನೀಡಲಿಲ್ಲ. ಆದರೂ ಒಂಬತ್ತು ಪಂದ್ಯಗಳಲ್ಲಿ ತಂಡಕ್ಕೆ ತಮ್ಮಿಂದಾದ ಸೇವೆ ಸಲ್ಲಿಸಿದ್ದಾರೆ. ಮಧ್ಯಮ ವೇಗದ ಬೌಲಿಂಗ್ ಮಾಡಬಲ್ಲ ಸ್ಟುವರ್ಟ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಗೂ ಬಲ ತುಂಬಬಲ್ಲ ಆಟಗಾರ. ಜವಾಬ್ದಾರಿಯನ್ನು ನಿಭಾಯಿಸಲು ಈ ಬಾರಿಯೂ ಅವರು ಕೈಲಾದ ಪ್ರಯತ್ನ ಮಾಡಿದ್ದಾರೆ.

ದಿನೇಶ್ ಕಾರ್ತಿಕ್
ದೇಶ- ಭಾರತ
ವಯಸ್ಸು -34
ತಂಡ- ಕೋಲ್ಕತ್ತ ನೈಟ್ ರೈಡರ್ಸ್
ತಂಡದಲ್ಲಿ ಸ್ಥಾನ -ವಿಕೆಟ್ ಕೀಪರ್ ಬ್ಯಾಟ್ಸ್ ಮನ್
ಪಂದ್ಯಗಳು -14
ರನ್ -253
ಕ್ಯಾಚ್ -7
ಒಟ್ಟಾರೆ ಪಂದ್ಯಗಳು -182
ರನ್ -3654
ಕ್ಯಾಚ್ -109
ಸ್ಟಂಪ್ಸ್ -30

ವೃತ್ತಿಜೀವನದ ನಿವೃತ್ತಿ ಅಂಚಿನಲ್ಲಿರುವ ದಿನೇಶ್ ಕಾರ್ತಿಕ್ ವಿಕೆಟ್ ಮುಂದೆಯೂ ವಿಕೆಟ್ ಹಿಂದೆಯೂ ಚಾಕಚಕ್ಯತೆ ಮರೆಯಬಲ್ಲ ಆಟಗಾರ. ಈ ಬಾರಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿರುವ ಅವರು ಐಪಿಎಲ್ ನಲ್ಲಿ ಗರಿಷ್ಠ ಮೊತ್ತವನ್ನು ಈ ವರ್ಷ, 34 ಹರಯದಲ್ಲಿಗಳಿಸಿದ್ದಾರೆ ಎಂಬುದು ಗಮನಾರ್ಹ ವಿಷಯ. ಆಕರ್ಷಕ ಹೊಡೆಗಳು ಅವರ ವೈಶಿಷ್ಟ್ಯ. ಸಂಕಷ್ಟದ ಪರಿಸ್ಥಿತಿಯಲ್ಲಿ ಎದೆಗುಂದದೆ, ಒತ್ತಡ ನಿಭಾಯಿಸಿಕೊಂಡು ಪಂದ್ಯವನ್ನು ‘ಫಿನಿಷ್’ ಮಾಡುವ ಅವರ ಸಾಮರ್ಥ್ಯ ಈ ಬಾರಿಯೂ ಕಳೆಗಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.