ಪೋರ್ಟ್ ಆಫ್ ಸ್ಪೇನ್ (ಟ್ರಿನಿಡಾಡ್): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, 'ರನ್ ಮಷಿನ್' ಖ್ಯಾತಿಯ ವಿರಾಟ್ ಕೊಹ್ಲಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ.
ಚುಟುಕು ಪಂದ್ಯವಿರಲಿ ಅಥವಾ ಟೆಸ್ಟ್ ಪಂದ್ಯವೇ ಆಗಲಿ ಕೊಹ್ಲಿ ಆಡುವ ಶೈಲಿ, ಸುಲಭವಾಗಿ ಸೋಲೊಪ್ಪಿಕೊಳ್ಳದ ಮನೋಭಾವ, ಮೈದಾನದಲ್ಲಿ ಆಕ್ರಮಣಕಾರಿಯಾಗಿ ಕಂಡರೂ ಹೊರಗೆ ಎಲ್ಲರೊಂದಿಗೆ ಬೆರೆಯುವ ಗುಣ, ಯುವ ಆಟಗಾರರನ್ನು ಬೆಂಬಲಿಸುವ ರೀತಿ ಎಂಥವರನ್ನೂ ಸೆಳೆಯುತ್ತವೆ.
ಆ ಕಾರಣಕ್ಕಾಗಿಯೇ ಅಭಿಮಾನಿಗಳು ಅವರನ್ನು ಭೇಟಿಯಾಗಲು ಹಾತೊರೆಯುತ್ತಾರೆ. ಅಂತಹದೊಂದು ಭಾವುಕ ಕ್ಷಣಕ್ಕೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಪಂದ್ಯವು ಸಾಕ್ಷಿಯಾಯಿತು. ಕೊಹ್ಲಿಯನ್ನು ಭೇಟಿಯಾದ ಖುಷಿಯಲ್ಲಿ ಎದುರಾಳಿ ತಂಡದ ಆಟಗಾರನ ತಾಯಿ ಭಾವೋದ್ವೇಗಕ್ಕೊಳಗಾಗಿ ಕಣ್ಣೀರಿಟ್ಟಿರುವ ಅಪರೂಪದ ಘಟನೆ ನಡೆಯಿತು. ಆ ಸಂದರ್ಭದ ವಿಡಿಯೊದ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
'ಕೊಹ್ಲಿಯನ್ನು ನೋಡಲು ಬರುತ್ತಿದ್ದೇನೆ ಎಂದ ಅಮ್ಮ'
ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ ಟೆಸ್ಟ್ ಪಂದ್ಯವು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಆಡುತ್ತಿರುವ 500ನೇ ಪಂದ್ಯ.
ಈ ಪಂದ್ಯದ ಎರಡನೇ ದಿನದಾಟದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ಕೊಹ್ಲಿ, ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ ಜೋಶುವಾ ಡ ಸಿಲ್ವ ಅವರ ತಾಯಿಯೊಂದಿಗೆ ಮೈದಾನದ ಹೊರಗೆ ಭಾವುಕ ಕ್ಷಣವನ್ನು ಹಂಚಿಕೊಂಡರು.
ಜೋಶುವಾ ಅವರು ತಮ್ಮ ತಾಯಿ ಆಗಮಿಸುತ್ತಿರುವ ಸಂಗತಿಯನ್ನು ಮೊದಲ ದಿನದಾಟದ ವೇಳೆ ಮೈದಾನದಲ್ಲಿಯೇ ಹೇಳಿದ್ದರು. 'ಬೆಳಗ್ಗೆ ಅಮ್ಮ ಕರೆ ಮಾಡಿದ್ದರು. ನನ್ನನ್ನು ನೋಡುವುದಕ್ಕಾಗಿ ಅಲ್ಲ ವಿರಾಟ್ ಕೊಹ್ಲಿಯನ್ನು ನೋಡಲು ಬರುತ್ತಿದ್ದೇನೆ ಎಂದು ಹೇಳಿದರು. ಅದನ್ನು ನನಗೆ ನಂಬಲು ಆಗಲಿಲ್ಲ' ಎಂದಿದ್ದರು. ಜೋಶುವಾ ಮಾತುಗಳು ಸ್ಟಂಪ್‌ಮೈಕ್‌ನಲ್ಲಿ ರೆಕಾರ್ಡ್ ಆಗಿವೆ.
ಅದರಂತೆ ಶುಕ್ರವಾರ ಕ್ರೀಡಾಂಗಣಕ್ಕೆ ಆಗಮಿಸಿದ ವಿಂಡೀಸ್ ಆಟಗಾರನ ತಾಯಿ, ಕೊಹ್ಲಿಯ ಶತಕದಾಟವನ್ನು ಕಣ್ತುಂಬಿಕೊಂಡರು.
ದಿನದಾಟ ಮುಕ್ತಾಯವಾದ ಬಳಿಕ ಕೊಹ್ಲಿಯನ್ನು ಭೇಟಿಯಾದ ಅವರು, ಅಪ್ಪಿಕೊಂಡು, ಕೆನ್ನೆಗೆ ಮುತ್ತುಕೊಟ್ಟರು. ಬಳಿಕ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಇಷ್ಟಾಗುವ ಹೊತ್ತಿಗೆ ಅವರ ಕಣಂಚಲ್ಲಿ ನೀರು ಜಾರಿತ್ತು.
ಇದನ್ನೂ ಓದಿ: IND vs WI: ಬ್ರಾಡ್ಮನ್ ದಾಖಲೆ ಸರಿಗಟ್ಟಿದ ವಿರಾಟ್, ಇಲ್ಲಿದೆ ಸಾಧನೆಗಳ ಪಟ್ಟಿ
ಬಳಿಕ ಕಣ್ಣೊರೊಸಿಕೊಳ್ಳುತ್ತಲೇ ಮಾತನಾಡಿದ ಅವರು, 'ಕೊಹ್ಲಿ, ನಮ್ಮ ಜೀವಮಾನದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರು. ಹಾಗಾಗಿ ಅವರನ್ನು ಭೇಟಿ ಮಾಡಿದ್ದು ಮತ್ತು ನನ್ನ ಮಗನೂ ಅವರಂತೆಯೇ ಅದೇ ಕ್ಷೇತ್ರದಲ್ಲಿರುವುದು ನನ್ನ ಪಾಲಿಗೆ ಗೌರವವೇ ಸರಿ' ಎಂದಿದ್ದಾರೆ.
'ಕೊಹ್ಲಿಯನ್ನು ನೋಡುವ ಸಲುವಾಗಿಯೇ ನಾನು ಬರುತ್ತಿದ್ದೇನೆ ಎಂದು ಮಗನಿಗೆ ಹೇಳಿದ್ದೆ' ಎಂದೂ ಹೇಳಿಕೊಂಡಿದ್ದಾರೆ.
ಕೊಹ್ಲಿಗೆ 29ನೇ ಶತಕ
ಮೊದಲ ದಿನದಾಟದ ಅಂತ್ಯಕ್ಕೆ 87 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದ ಕೊಹ್ಲಿ, ಎರಡನೇ ದಿನ ಶತಕ ಸಿಡಿಸಿದರು. ಅಮೋಘ ಬ್ಯಾಟಿಂಗ್ ನಡೆಸಿದ ಅವರು 206 ಎಸೆತಗಳಲ್ಲಿ 11 ಬೌಂಡರಿ ಸಹಿತ 121ರನ್ ಗಳಿಸಿ ಔಟಾದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಗಳಿಸಿದ 29ನೇ ಹಾಗೂ ವಿದೇಶದಲ್ಲಿ ಐದು ವರ್ಷಗಳ ಬಳಿಕ ಬಾರಿಸಿದ ಶತಕವಾಗಿದೆ.
ಇದರೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಗಳಿಸಿದ ಒಟ್ಟು ಶತಕಗಳ ಸಂಖ್ಯೆ ಇದೀಗ 76ಕ್ಕೆ ಏರಿದೆ. ಹೆಚ್ಚು ಸಲ ಮೂರಂಕಿ ಮುಟ್ಟಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಭಾರತದವರೇ ಆದ ಸಚಿನ್ ತೆಂಡೂಲ್ಕರ್ (100) ಅಗ್ರ ಸ್ಥಾನದಲ್ಲಿದ್ದು, ಕೊಹ್ಲಿ ಎರಡನೇಯವರಾಗಿದ್ದಾರೆ.
ಕೊಹ್ಲಿ ಶತಕ ಗಳಿಸಿದ್ದಷ್ಟೇ ಅಲ್ಲ, ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (57), ನಾಯಕ ರೋಹಿತ್ ಶರ್ಮ (80), ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜ (61) ಮತ್ತು ಆರ್ ಅಶ್ವಿನ್ (56) ವಿಂಡೀಸ್ ವಿರುದ್ಧ ಅರ್ಧಶತಕ ಗಳಿಸಿದರು. ಇವರೆಲ್ಲರ ಆಟದ ಬಲದಿಂದ ಭಾರತ ತಂಡ ಮೊದಲ ಇನಿಂಗ್ಸ್ 438 ರನ್ ಗಳಿಸಿ ಆಲೌಟ್ ಆಗಿದೆ.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿರುವ ಆತಿಥೇಯ ತಂಡ 1 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ.
ಆರಂಭಿಕ ಬ್ಯಾಟರ್ ತೇಜನಾರಾಯಣ ಚಂದರಪಾಲ್ (33) ಔಟಾಗಿದ್ದು, 37 ರನ್ ಕಲೆಹಾಕಿರುವ ಕ್ರೇಗ್ ಬ್ರಾಥ್‌ವೇಟ್ ಮತ್ತು 14 ರನ್ ಗಳಿಸಿರುವ ಕಿರ್ಕ್ ಮೆಕೆಂಝಿ ಕ್ರೀಸ್‌ನಲ್ಲಿದ್ದಾರೆ. ಇನ್ನೂ ಮೂರು ದಿನಗಳ ಆಟ ಬಾಕಿ ಇದೆ.
ಭಾರತ vs ವೆಸ್ಟ್ ಇಂಡೀಸ್ ನೂರನೇ ಪಂದ್ಯ
ಈ ಪಂದ್ಯವು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿರುವ ನೂರನೇ ಟೆಸ್ಟ್ ಪಂದ್ಯ ಎಂಬುದು ವಿಶೇಷ.
ಇಲ್ಲಿಯವರೆಗೆ ಆಡಿರುವ 99 ಪಂದ್ಯಗಳ ಪೈಕಿ ಭಾರತ 23ರಲ್ಲಿ ಗೆದ್ದಿದ್ದರೆ, ವಿಂಡೀಸ್ ಪಡೆ 30 ಜಯ ಸಾಧಿಸಿದೆ. ಉಳಿದ 46 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.
ಸದ್ಯ ನಡೆಯುತ್ತಿರುವ ಟೂರ್ನಿಯ ಮೊದಲ ಪಂದ್ಯವನ್ನು ಗೆದ್ದಿರುವ ರೋಹಿತ್ ಶರ್ಮ ಪಡೆ, ಈ ಪಂದ್ಯವನ್ನೂ ಗೆದ್ದು ಕ್ಲೀನ್ ಸ್ವೀಪ್ ಮಾಡುವ ಲೆಕ್ಕಾಚಾರದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.