ADVERTISEMENT

ಅಂತಿಮ ಪಂದ್ಯದಲ್ಲೂ ಸೋತ ಕರ್ನಾಟಕ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಪಂಜಾಬ್‌ಗೆ ಜಯ

ಗಿರೀಶದೊಡ್ಡಮನಿ
Published 8 ಅಕ್ಟೋಬರ್ 2018, 20:26 IST
Last Updated 8 ಅಕ್ಟೋಬರ್ 2018, 20:26 IST
ಬಿ.ಆರ್‌.ಶರತ್‌ –ಪ್ರಜಾವಾಣಿ ಚಿತ್ರ
ಬಿ.ಆರ್‌.ಶರತ್‌ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಈ ಟೂರ್ನಿಯಲ್ಲಿ ನಮ್ಮ ತಂಡವು ಉತ್ತಮವಾಗಿ ಆಡಿಲ್ಲ’– ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡದ ನಿರಾಶಾದಾಯಕ ಆಟದ ಕುರಿತು ಮುಖ್ಯ ಕೋಚ್ ಯರೇಗೌಡ ಅವರ ನಿರಾಶೆಯ ನುಡಿಗಳಿವು.

ಕೋಚ್ ಸ್ಥಾನದ ಹೊಣೆ ವಹಿಸಿಕೊಂಡ ನಂತರ ಅವರ ಮೊದಲ ಟೂರ್ನಿ ಇದಾಗಿದೆ. ಆದರೆ ಕರ್ನಾಟಕ ತಂಡವು ಎಲೀಟ್ ‘ಎ’ ಗುಂಪಿನ ಹಂತದಲ್ಲಿಯೇ ಸೋತು ನಿರ್ಗಮಿಸಿದೆ.

ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆತಿಥೇಯ ಬಳಗವು 6 ವಿಕೆಟ್‌ಗಳಿಂದ ಪಂಜಾಬ್ ಎದುರು ಸೋತಿತು. ಈ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕಕ್ಕೆಆರ್. ಸಮರ್ಥ್ (54 ರನ್) ಮತ್ತು ಬಿ.ಆರ್. ಶರತ್ (70 ರನ್) ಉತ್ತಮ ಆರಂಭ ನೀಡಿದರು. ಅದರಿಂದಾಗಿ ತಂಡವು 48.2 ಓವರ್‌ಗಳಲ್ಲಿ 296 ರನ್‌ ಗಳಿಸಿತು. ಆದರೆ ಆತಿಥೇಯರ ಕಳಪೆ ಬೌಲಿಂಗ್‌ ಅನ್ನು ಪುಡಿಗಟ್ಟಿದ ಪಂಜಾಬ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅನ ಮೋಲ್ ಪ್ರೀತ್ ಸಿಂಗ್(138; 106, 12ಬೌಂಡರಿ, 5ಸಿಕ್ಸರ್) ಅವರ ಶತಕದ ಬಲದಿಂದ 48.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 297 ರನ್‌ಗಳನ್ನು ಗಳಿಸಿ ಗೆದ್ದಿತು.

ADVERTISEMENT

ತದನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯರೇಗೌಡ ಮತ್ತು ಬೌಲಿಂಗ್ ಕೋಚ್ ಎಸ್. ಅರವಿಂದ್ ತಂಡದ ಒಟ್ಟಾರೆ ನಿರ್ವಹಣೆಯ ಕುರಿತು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಬ್ಯಾಟಿಂಗ್ ವಿಭಾಗದಲ್ಲಿ ನಾವು ಹೆಚ್ಚು ವೈಫಲ್ಯ ಅನುಭವಿಸಿದ್ದೇವೆ. ಒಟ್ಟು ಏಳು ಪಂದ್ಯಗಳಲ್ಲಿ ನಮ್ಮ ತಂಡದ ಬ್ಯಾಟ್ಸ್‌ಮನ್‌ಗಳಿಂದ ದಾಖ ಲಾಗಿದ್ದು ಒಂದು ಶತಕ ಮಾತ್ರ. ಆದರೆ ನಮ್ಮ ತಂಡದ ವಿರುದ್ಧ ಆಡಿದ ಬಳಗ ಗಳಿಂದ ಒಟ್ಟು ಐದು ಶತಕಗಳು ಹೊರ ಹೊಮ್ಮಿವೆ. ಮುಂದಿನ ದಿನಗಳಲ್ಲಿ ಈ ಲೋಪವನ್ನು ತಿದ್ದುವತ್ತ ಗಮನ ನೀಡುತ್ತೇವೆ’ ಎಂದರು.

ಕರ್ನಾಟಕದ ಪರ ಶತಕ ಸಿಡಿಸಿದ್ದ ಏಕೈಕ ಬ್ಯಾಟ್ಸ್‌ಮನ್ ಆರ್. ಸಮರ್ಥ್ ಪಂಜಾಬ್ ಎದುರು ಅರ್ಧಶತಕದ(54; 59ಎಸೆತ, 8ಬೌಂಡರಿ) ಕಾಣಿಕೆ ನೀಡಿದರು. ಇದೇ ಮೊದಲ ಬಾರಿಗೆ ಇನಿಂಗ್ಸ್‌ ಆರಂಭಿಸಿದ ಬಿ.ಆರ್. ಶರತ್ (70; 69ಎಸೆತ, 10ಬೌಂಡರಿ, 1ಸಿಕ್ಸರ್) ಕೂಡ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಅರ್ಧಶತಕ ದಾಖಲಿಸಿದರು.

‘ಈ ಟೂರ್ನಿಯಿಂದ ಹಲವು ಪಾಠಗಳನ್ನು ಕಲಿತಿದ್ದೇವೆ. ಈ ಸೋಲು ಎಚ್ಚರಿಕೆಯ ಗಂಟೆಯಾಗಿದೆ. ಸಮರ್ಥ್, ಕೆ. ಗೌತಮ್, ಬಿ.ಆರ್. ಶರತ್ ಅವರು ಉತ್ತಮವಾಗಿ ಆಡಿರುವುದು ಆಶಾದಾಯಕ. ರಣಜಿ ಟ್ರೋಫಿಯಲ್ಲಿ ನಮ್ಮ ಅಭಿಯಾನ ಆರಂಭವಾಗಲು ಇನ್ನೂ ಒಂದು ತಿಂಗಳು ಬಾಕಿ ಇದೆ. ಹೊಸ ಹುಮ್ಮಸ್ಸಿನೊಂದಿಗೆ ರಣಜಿ ಋತು ಆರಂಭಿಸುತ್ತೇವೆ’ ಎಂದು ಯರೇಗೌಡ ಭರವಸೆ ವ್ಯಕ್ತಪಡಿಸಿದರು.

ಅನಮೋಲ್–ಗಿಲ್ ಜೊತೆಯಾಟ: ಪಂಜಾಬ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅನಮೋಲ್‌ಪ್ರೀತ್ ಸಿಂಗ್ ಮತ್ತು ಶುಭಮನ್ ಗಿಲ್ (77; 93ಎಸೆತ, 7ಬೌಂಡರಿ, 1ಸಿಕ್ಸರ್) ಮೊದಲ ವಿಕೆಟ್‌ಗೆ 198 ರನ್‌ಗಳನ್ನು ಸೇರಿಸಿ ತಂಡದ ಜಯದ ಹಾದಿ ಸುಗಮ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 48.2 ಓವರ್‌ಗಳಲ್ಲಿ 296 (ಆರ್‌.ಸಮರ್ಥ್ 54, ಬಿ.ಆರ್‌.ಶರತ್‌ 70, ಮನೀಷ್‌ ಪಾಂಡೆ 67; ಸಿದ್ದಾರ್ಥ್‌ ಕೌಲ್‌ 41ಕ್ಕೆ5).

ಪಂಜಾಬ್‌: 48.5 ಓವರ್‌ಗಳಲ್ಲಿ 4 ವಿಕೆಟ್‌ಗೆ 297 (ಅನಮೋಲ್‌ ಪ್ರೀತ್‌ ಸಿಂಗ್‌ 138, ಶುಭಮನ್‌ ಗಿಲ್‌ 77, ಯುವರಾಜ್‌ ಸಿಂಗ್‌ 38; ಜೆ.ಸುಚಿತ್‌ 63ಕ್ಕೆ1). ಫಲಿತಾಂಶ: ಪಂಜಾಬ್‌ಗೆ 6 ವಿಕೆಟ್‌ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.