ಬೆಂಗಳೂರು: ಕರ್ನಾಟಕದ ಮಧ್ಯಮವೇಗಿ ಪ್ರಸಿದ್ಧ ಕೃಷ್ಣ ಅವರ ಬೌಲಿಂಗ್ ಮುಂದೆ ಬಸವಳಿದ ಸೌರಾಷ್ಟ್ರ ತಂಡದ ಗಾಯಕ್ಕೆ ಎಡಗೈ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಉಪ್ಪು ಸವರಿದರು.
ಪ್ರಸಿದ್ಧ (19ಕ್ಕೆ5)ಅಮೋಘ ಬೌಲಿಂಗ್ ಮತ್ತು ದೇವದತ್ತ ಪಡಿಕ್ಕಲ್ (ಔಟಾಗದೆ 103; 104ಎ, 13ಬೌಂ, 1ಸಿ) ಅವರ ಆಕರ್ಷಕ ಶತಕದಿಂದ ಕರ್ನಾಟಕ ತಂಡವು 8 ವಿಕೆಟ್‌ಗಳಿಂದ ಸೌರಾಷ್ಟ್ರದ ಎದುರು ಗೆದ್ದಿತು.
ಕರ್ನಾಟಕ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಪ್ರೇರಕ್ ಮಂಕಡ್ (86; 90ಎಸೆತ, 6ಬೌಂಡರಿ, 5ಸಿಕ್ಸರ್) ಮತ್ತು ಚಿರಾಗ್ ಜಾನಿ (66; 86ಎಸೆತ, 5ಬೌಂಡರಿ, 2ಸಿಕ್ಸರ್) ಅವರ ಆಟದ ಬಲದಿಂದ 47.2 ಓವರ್‌ಗಳಲ್ಲಿ 212 ರನ್ ಗಳಿಸಿತು. ಕರ್ನಾಟಕ ತಂಡವು 36.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 213 ರನ್ ಗಳಿಸಿತು. ಎಂಟರ ಘಟ್ಟದಲ್ಲಿ ತನ್ನ ಸ್ಥಾನ ಖಚಿಪಡಿಸಿಕೊಂಡಿತು. ಲೀಗ್ ಹಂತದ ಕೊನೆಯ ಪಂದ್ಯವನ್ನು 16ರಂದು ಗೋವಾ ಎದುರು ಆಡಲಿದೆ. ಆಲೂರು ಕ್ರೀಡಾಂಗಣದಲ್ಲಿ ಹಣಾಹಣಿ ನಡೆಯಲಿದೆ.
37 ರನ್‌ಗಳಿಗೆ 6 ವಿಕೆಟ್!
ಪಂದ್ಯದ ಆರಂಭದಲ್ಲಿಯೇ ಪ್ರಸಿದ್ಧ ಕೃಷ್ಣ ಕೊಟ್ಟ ಬಲವಾದ ಪೆಟ್ಟಿನಿಂದಾಗಿ ಸೌರಾಷ್ಟ್ರ ತಂಡವು 37 ರನ್‌ಗಳಾಗುಷ್ಟರಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ಅಗ್ರಕ್ರಮಾಂಕದ ಎಲ್ಲ ಬ್ಯಾಟ್ಸ್‌ಮನ್‌ಗಳೂ ಮರಳಿ ಗೂಡು ಸೇರಿದರು.
ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಹಿಮಾಲಯ್ ಬರಾಡ್ ಅವರ ವಿಕೆಟ್ ಕಿತ್ತರು. ಮೂರನೇ ಓವರ್‌ನಲ್ಲಿ ಶೆಲ್ಡನ್ ಜಾಕ್ಸನ್‌ಗೂ ಪೆವಿಲಿಯನ್ ಹಾದಿ ತೋರಿದರು. ಅಭಿಮನ್ಯು ಮಿಥುನ್ ಬದಲಿಗೆ ಸ್ಥಾನ ಪಡೆದ ವಿ. ಕೌಶಿಕ್ ಕೂಡ ಮಿಂಚಿದರು. ಅವರು ಎಂಟನೇ ಓವರ್‌ನಲ್ಲಿ ಸಮರ್ಥ್ ವ್ಯಾಸ್ ವಿಕೆಟ್ ಉರುಳಿಸಿದರು. ಹತ್ತನೇ ಓವರ್‌ನಲ್ಲಿ ವಿಶ್ವರಾಜ್ ಜಡೇಜ ಮತ್ತು ಕಮಲೇಶ್ ಮಕ್ವಾನ ಅವರ ವಿಕೆಟ್ ಕಿತ್ತು ಮಧ್ಯಮಕ್ರಮಾಂಕಕ್ಕೆ ಪೆಟ್ಟುಕೊಟ್ಟರು. ಅನುಭವಿ ಆಟಗಾರ ಅರ್ಪಿತ್ ವಸವದಾ ಅವರನ್ನು ಪ್ರಸಿದ್ಧ ಕ್ಲೀನ್‌ಬೌಲ್ಡ್ ಮಾಡಿದರು.
ಈ ಹಂತದಲ್ಲಿ ಜೊತೆಗೂಡಿದ ಪ್ರೇರಕ್ ಮತ್ತು ಚಿರಾಗ್ ಅವರು ಏಳನೇ ವಿಕೆಟ್ ಜೊತೆಯಾಟದಲ್ಲಿ 150 ರನ್ ಸೇರಿಸಿದರು. ಹೊಳಪು ಕಡಿಮೆಯಾಗಿದ್ದ ಚೆಂಡಿನಲ್ಲಿ ಮಧ್ಯಮವೇಗಿಗಳಿಗೆ ಸ್ವಿಂಗ್ ಮಾಡಲು ಕಷ್ಟವಾಯಿತು. ಅದರ ಲಾಭ ಪಡೆದ ಇವರಿಬ್ಬರೂ ತಂಡಕ್ಕೆ ಗೌರವಯುತ ಮೊತ್ತ ಗಳಿಸಲು ನೆರವಾದರು. ಶತಕದತ್ತ ಹೆಜ್ಜೆ ಇಟ್ಟಿದ ಪ್ರೇರಕ್ ಅವರನ್ನು ಶ್ರೇಯಸ್ ಗೋಪಾಲ್ ಔಟ್ ಮಾಡಿದರೆ, ಚಿರಾಗ್ ವಿಕೆಟ್ ಅನ್ನು ಕೆ. ಗೌತಮ್ ಗಳಿಸಿದರು. ನಂತರ ಮತ್ತೆ ಎರಡು ವಿಕೆಟ್ ಕಬಳಿಸಿದ ಪ್ರಸಿದ್ಧ ಇನಿಂಗ್ಸ್‌ಗೆ ತೆರೆ ಎಳೆದರು.
ದೇವದತ್ತ ಸುಂದರ ಶತಕ: ಈ ಸಲದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ ಆರಂಭವಾದಾಗಿನಿಂದಲೂ ತಾವು ಉತ್ತಮ ಆರಂಭಿಕ ಬ್ಯಾಟ್ಸ್‌ಮನ್ ಎಂಬುದನ್ನು ಸಾಬೀತುಪಡಿಸುತ್ತಿರುವ ದೇವದತ್ತ ಪಡಿಕ್ಕಲ್ ಚೊಚ್ಚಲ ಶತಕವನ್ನೂ ದಾಖಲಿಸಿದರು.
ಅವರ ಆರಂಭಿಕ ಜೊತೆಗಾರ ಕೆ.ಎಲ್. ರಾಹುಲ್ (23 ರನ್) ಪ್ರೇರಕ್ ಮಂಕಡ್ ಎಸೆತದಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು. ಕರುಣ್ ನಾಯರ್ (16 ರನ್) ಮತ್ತೊಮ್ಮೆ ಎಡವಿದರು. ಆದರೆ, ಎಡಗೈ ಬ್ಯಾಟ್ಸ್‌ಮನ್ ದೇವದತ್ತ ಗಟ್ಟಿಯಾಗಿ ನಿಂತರು. ನಾಯಕ ಮನೀಷ್ ಪಾಂಡೆ (ಔಟಾಗದೆ 67; 53ಎಸೆತ, 7ಬೌಂಡರಿ, 2ಸಿಕ್ಸರ್) ಅವರೊಂದಿಗೆ ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 134 ರನ್ ಸೇರಿಸಿದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದರು.
ಈ ಟೂರ್ನಿಯಲ್ಲಿ ಅವರು ಇದುವರೆಗೆ ಒಟ್ಟು ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ.
ವಿವಿಧ ಪಂದ್ಯಗಳ ಸಂಕ್ಷಿಪ್ತ ಸ್ಕೋರುಗಳು
ಸಂಕ್ಷಿಪ್ತ ಸ್ಕೋರು: ಸೌರಾಷ್ಟ್ರ: 47.2 ಓವರ್‌ಗಳಲ್ಲಿ 212 (ಪ್ರೇರಕ್ ಮಂಕಡ್ 86, ಚಿರಾಗ್ ಜಾನಿ 66, ಪ್ರಸಿದ್ಧಕೃಷ್ಣ 19ಕ್ಕೆ5, ವಿ. ಕೌಶಿಕ್ 23ಕ್ಕೆ3), ಕರ್ನಾಟಕ: 36.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 213 (ಕೆ.ಎಲ್. ರಾಹುಲ್ 23 ದೇವದತ್ತ ಪಡಿಕ್ಕಲ್ ಔಟಾಗದೆ 103, ಕರುಣ್ ನಾಯರ್ 16, ಮನೀಷ್ ಪಾಂಡೆ ಔಟಾಗದೆ 67, ಪ್ರೇರಕ್ ಮಂಕಡ್ 33ಕ್ಕೆ2) ಫಲಿತಾಂಶ: ಕರ್ನಾಟಕಕ್ಕೆ 8 ವಿಕೆಟ್‌ಗಳಿಂದ ಜಯ ಮತ್ತು ನಾಲ್ಕು ಪಾಯಿಂಟ್ಸ್.
ಆಲೂರು ಕ್ರೀಡಾಂಗಣ: ಕೇರಳ: 50 ಓವರ್‌ಗಳಲ್ಲಿ 3ಕ್ಕೆ377 (ಸಂಜು ಸ್ಯಾಮ್ಸನ್ ಔಟಾಗದೆ 212, ಸಚಿನ್ ಬೇಬಿ 127, ಲಕ್ಷ್ಯ ಗರ್ಗ್ 73ಕ್ಕೆ1, ದರ್ಶನ್ ಮಿಸಾಲ್ 79ಕ್ಕೆ1) , ಗೋವಾ: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 273 (ಆದಿತ್ಯ ಕೌಶಿಕ್ 58, ಸಗುನ್ ಕಾಮತ್ 20, ತನಿಶ್ ಸಾವಕರ್ 56, ಸುಯಶ್ ಪ್ರಭುದೇಸಾಯಿ 20, ಸಿ.ಎಂ. ಗೌತಮ್ 23, ಸ್ನೇಹಲ್ ಸುಹಾಸ್ ಕೌತಣಕರ್ 31, ಸಂದೀಪ್ ವಾರಿಯರ್ 44ಕ್ಕೆ2, ನಿಧೀಶ್ 57ಕ್ಕೆ2, ಅಕ್ಷಯ್ ಚಂದ್ರನ್ 54ಕ್ಕೆ2) ಫಲಿತಾಂಶ:ಕೇರಳ ತಂಡಕ್ಕೆ 104 ರನ್ ಜಯ ಮತ್ತು ನಾಲ್ಕು ಪಾಯಿಂಟ್ಸ್
ಆಂಧ್ರ: 50 ಓವರ್‌ಗಳಲ್ಲಿ 6ಕ್ಕೆ265 (ಕ್ರಾಂತಿಕುಮಾರ್ 72, ಪ್ರಶಾಂತಕುಮಾರ್ 56, ರಿಕಿ ಭುಯ್ 59, ಕರಣ್ ಶಿಂಧೆ 32 ವರುಣ್ ಆ್ಯರನ್ 54ಕ್ಕೆ2), ಜಾರ್ಖಂಡ್: 49.4 ಓವರ್‌ಗಳಲ್ಲಿ 7ಕ್ಕೆ266 (ಉತ್ಕರ್ಷ್ ಸಿಂಗ್ 49, ಸೌರಭ್ ತಿವಾರಿ 56, ವಿರಾಟ್ ಸಿಂಗ್ 74, ಅನುಕೂಲ್ ರಾಯ್ 33, ಯರ್ರಾ ಪೃಥ್ವಿರಾಜ್ 58ಕ್ಕೆ2)
ಸಿ ಗುಂಪು (ಜೈಪುರ); ತಮಿಳುನಾಡು: 50 ಓವರ್‌ಗಳಲ್ಲಿ 4ಕ್ಕೆ360 (ಅಭಿನವ್ ಮುಕುಂದ್ 147, ಮುರಳಿ ವಿಜಯ್ 24, ವಿಜಯಶಂಕರ್ 90, ದಿನೇಶ್ ಕಾರ್ತಿಕ್ ಔಟಾಗದೆ 65, ಈಶ್ವರ್ ಪಾಂಡೆ 84ಕ್ಕೆ1, ಗೌರವ್ ಯಾದವ್ 68ಕ್ಕೆ1, ಕುಲದೀಪ್ ಸೇನ್ 72ಕ್ಕೆ1), ಮಧ್ಯಪ್ರದೇಶ: 28.4 ಓವರ್‌ಗಳಲ್ಲಿ 149 (ನಮನ್ ಓಜಾ 24, ವೆಂಕಟೇಶ್ ಅಯ್ಯರ್ 25, ಯಶ್ ದುಬೆ 28, ಆನಂದ್ ಬೈಸ್ 34, ಅಭಿಷೇಕ್ ತನ್ವರ್ 39ಕ್ಕೆ2, ರವಿಶ್ರೀನಿವಾಸ್ ಸಾಯಿಕಿಶೋರ್ 42ಕ್ಕೆ2, ಮುರುಗನ್ ಅಶ್ವಿನ್ 13ಕ್ಕೆ3, ಬಾಬಾ ಅಪರಾಜಿತ್ 00ಗೆ 2) ಫಲಿತಾಂಶ: ತಮಿಳುನಾಡು ತಂಡಕ್ಕೆ 211 ರನ್‌ಗಳ ಜಯ.
ತ್ರಿಪುರ: 50 ಓವರ್‌ಗಳಲ್ಲಿ 9ಕ್ಕೆ236 (ಉದ್ಯಾನ್ ಬೋಸ್ 85, ಮಿಲಿಂದ್ ಕುಮಾರ್ 65, ಮಣಿಶಂಕರ್ ಮುರಾಸಿಂಗ್ 31, ಶಿವೆಂದರ್ ಸಿಂಗ್ 48ಕ್ಕೆ3), ರೈಲ್ವೆಸ್; 49 ಓವರ್‌ಗಳಲ್ಲಿ 9ಕ್ಕೆ238 (ಅರಿಂದಮ್ ಘೋಷ್ 60, ಕರ್ಣ ಶರ್ಮಾ ಔಟಾಗದೆ 109, ಮಣಿಶಂಕರ್ ಮುರಾಸಿಂಗ್ 59ಕ್ಕೆ2, ಅಜಯ್ ಸರಕಾರ್ 40ಕ್ಕೆ2, ನೀಲಾಂಬುಜ ವತ್ಸ್ 45ಕ್ಕೆ2) ಫಲಿತಾಂಶ: ರೈಲ್ವೆಸ್ ತಂಡಕ್ಕೆ 1 ವಿಕೆಟ್ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.