ADVERTISEMENT

ಪರೀಕ್ಷೆ ಬರೆದಿಲ್ಲ; ಶಾಲೆಗೂ ಹೋಗಿಲ್ಲ!: ‘ಯಶಸ್ವಿ’ಯ ವಿಶ್ವದಾಖಲೆಯ ಯಶೋಗಾಥೆ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ; ಮುಂಬೈ ತಂಡದ ಆಟಗಾರನ ಸಾಧನೆ

ಗಿರೀಶದೊಡ್ಡಮನಿ
Published 17 ಅಕ್ಟೋಬರ್ 2019, 1:14 IST
Last Updated 17 ಅಕ್ಟೋಬರ್ 2019, 1:14 IST
ಯಶಸ್ವಿ ಜೈಸ್ವಾಲ್
ಯಶಸ್ವಿ ಜೈಸ್ವಾಲ್   

ಬೆಂಗಳೂರು: ಆ ಹುಡುಗ ಜನಿಸಿದ್ದು ಉತ್ತರಪ್ರದೇಶದ ಕಡುಬಡತನವಿದ್ದ ಕುಟುಂಬದಲ್ಲಿ. ಮುಂಬೈಗೆ ತನ್ನ ಕುಟುಂಬದೊಂದಿಗೆ ವಲಸೆ ಬಂದಾಗ ಇನ್ನೂ ಹಾಲುಗಲ್ಲದ ಬಾಲಕ. ಪುಟ್ಟ ಚಾಳ್‌ನ ಕೋಣೆಯಲ್ಲಿ ವಾಸ. ಆದರೆ ಇವತ್ತು ಆತ ವಿಶ್ವದಾಖಲೆ ಬರೆದ ಕ್ರಿಕೆಟಿಗ!

ಹೌದು; ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬುಧವಾರ ನಡೆದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಮಿಂಚಿನ ವೇಗದ ದ್ವಿಶತಕ ಹೊಡೆದ, 17 ವರ್ಷದ ಯಶಸ್ವಿ ಜೈಸ್ವಾಲ್‌ನೇ ಆ ಹುಡುಗ. ಮುಂಬೈ ತಂಡವನ್ನು ಇದೇ ಮೊದಲ ಸಲ ಈ ಟೂರ್ನಿಯಲ್ಲಿ ಪ್ರತಿನಿಧಿಸುತ್ತಿರುವ ಎಡಗೈ ಬ್ಯಾಟ್ಸ್‌ಮನ್ ಯಶಸ್ವಿ (203; 154ಎಸೆತ, 17ಬೌಂಡರಿ, 12 ಸಿಕ್ಸರ್) ಜಾರ್ಖಂಡ್ ವಿರುದ್ಧ ತಮ್ಮ ಭುಜಬಲ ಮೆರೆದರು. ಏಕದಿನ ಮಾದರಿಯ ‘ಲಿಸ್ಟ್ ಎ’ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ವಿಶ್ವದಾಖಲೆ ಅವರದ್ದು.

44 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾ ಆಟಗಾರ ಅಲನ್ ಬ್ಯಾರೊ ತಮ್ಮ 20ನೇ ವಯಸ್ಸಿನಲ್ಲಿ ದ್ವಿಶತಕ ಬಾರಿಸಿದ್ದರು. ಆ ಸಾಧನೆ ಮಾಡಿದ ಅತಿ ಕಿರಿಯ ವಯಸ್ಸಿನ ಆಟಗಾರನೆಂಬ ಹೆಗ್ಗಳಿಕೆ ಅವರದ್ದಾಗಿತ್ತು. ಇದೀಗ ಅವರಿಗಿಂತ ಮೂರು ವರ್ಷ ಚಿಕ್ಕವರಾದ ಜೈಸ್ವಾಲ್ಸಾಧನೆ ಮೆರೆದಿದ್ದಾರೆ. ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತಿಗಿಳಿದ ಅವರು ತಮ್ಮ ಹಳೆಯ ನೆನಪುಗಳನ್ನು ಬಿಚ್ಚಿಟ್ಟರು.

ADVERTISEMENT

ಹತ್ತನೇ ವರ್ಷದಿಂದಲೂ ಕ್ರಿಕೆಟ್‌ನತ್ತ ಅಪಾರ ಆಸಕ್ತಿ ಬೆಳೆಸಿಕೊಂಡ ಯಶಸ್ವಿಗೆ ಕಿಟ್ ಖರೀದಿಸಲೂ ಆಗುತ್ತಿರಲಿಲ್ಲ. ಅಪ್ಪನ ಪಾನೀಪುರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡೇ ಕ್ರಿಕೆಟ್‌ ಕನಸಿಗೆ ಬಲ ತುಂಬಿದವರು. ಮುಸ್ಲಿಂ ಕ್ರಿಕೆಟ್‌ ಕ್ಲಬ್‌ನಲ್ಲಿ ಕೆಲವು ಹಿತೈಷಿಗಳ ಸಹಾಯದಿಂದ ಆಡುವ ಅವಕಾಶ ಪಡೆದುಕೊಂಡಿದ್ದರು. ಆದರೂ ವಾಸಸ್ಥಳಕ್ಕೆ ಪರದಾಡಿದ್ದರು. 11ನೇ ವಯಸ್ಸಿನಲ್ಲಿ ಮುಂಬೈನ ಆಜಾದ್ ಮೈದಾನದಲ್ಲಿದ್ದ ಕಾರ್ಮಿಕರೊಂದಿಗೆ ವಾಸವಾಗಿದ್ದರು.

‘ಆ ಕಷ್ಟದ ದಿನಗಳನ್ನು ನಾನು ಮರೆತಿಲ್ಲ. ಆ ಕಷ್ಟಗಳೇ ನನ್ನ ಶಕ್ತಿ ಹೆಚ್ಚಿಸಿವೆ. ಆ ದಿನಗಳಲ್ಲಿ ಎಂದೂ ದುಃಖಿಸಿರಲಿಲ್ಲ. ಬದಲಿಗೆ ಪರಿಸ್ಥಿತಿಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಆಟದತ್ತ ಮಾತ್ರ ಗಮನ ಇಟ್ಟಿದ್ದೆ. ಯಾವಾಗ ನನ್ನ ಪ್ರತಿಭೆಯನ್ನು ಜ್ವಾಲಾ ಸರ್ (ಕೋಚ್) ಗುರುತಿಸಿದರೋ ಆಗ ಜೀವನದ ದಿಕ್ಕು ಬದಲಾಯಿತು. ಅವರು ನನಗೆ ಗಾಡಫಾದರ್’ ಎಂದರು ಯಶಸ್ವಿ.

ಕುಟುಂಬದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅವರಿಗೆ ನಾನು ಚೆನ್ನಾಗಿ ಆಡುತ್ತಿದ್ದೇನೆ ಎಂಬ ವಿಶ್ವಾಸವಿದೆ. ಅವರು ಕ್ರಿಕೆಟ್‌ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಚೆನ್ನಾಗಿ ಆಡು ಎಂದಷ್ಟೇ ಹಾರೈಸುತ್ತಾರೆ’ ಎಂದರು.

ಐದು ದಿನಗಳ ಹಿಂದಷ್ಟೇ ಇದೇ ಮೈದಾನದಲ್ಲಿ ಸಂಜು ಸ್ಯಾಮ್ಸನ್ ದ್ವಿಶತಕ ಹೊಡೆದಿದ್ದರು. ವಿಜಯ್ ಹಜಾರೆ ಟೂರ್ನಿಯಲ್ಲಿ ದ್ವಿಶತಕ ಹೊಡೆದ ಮೂರನೇ ಬ್ಯಾಟ್ಸ್‌ಮನ್‌ ಎಂಬ ಶ್ರೇಯವೂ ಯಶಸ್ವಿಯದ್ದಾಯಿತು.ಹೋದ ವರ್ಷದ ಟೂರ್ನಿಯಲ್ಲಿ ಉತ್ತರಾಖಂಡದ ಕರ್ಣವೀರ್ ಕೌಶಲ್ ಮೊದಲ ಬಾರಿಗೆ ದ್ವಿಶತಕ ಹೊಡೆದಿದ್ದರು. ಇದೇ ಟೂರ್ನಿಯಲ್ಲಿ ಯಶಸ್ವಿಯು ಈಗಾಗಲೇ ಎರಡು ಶತಕಗಳನ್ನೂ ಗಳಿಸಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಯಶಸ್ವಿ ಈಚೆಗೆ ಭಾರತದ 19 ವರ್ಷದೊಳಗಿನವರ ತಂಡದಲ್ಲಿಯೂ ಮಿಂಚಿದ್ದರು.

‘ಸಚಿನ್ ತೆಂಡೂಲ್ಕರ್ ಮತ್ತು ವಾಸೀಂ ಜಾಫರ್ ಅವರ ಬ್ಯಾಟಿಂಗ್ ನನಗೆ ಇಷ್ಟ. ಸದ್ಯ ತಂಡದಲ್ಲಿರುವ ಹಿರಿಯ ಆಟಗಾರರಾದ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಮತ್ತಿತರರು ನೀಡುವ ಪ್ರೋತ್ಸಾಹ ಅಪಾರ. ಅವರೆಲ್ಲರ ಸಹಕಾರದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಎಲ್ಲವೂ ದೇವರ ದಯೆ’ ಎಂದು ಯಶಸ್ವಿ ಕೃತಜ್ಞತೆ ಅರ್ಪಿಸುತ್ತಾರೆ.

ಹೋದ ವರ್ಷ ಅವರು 19 ವರ್ಷದೊಳಗಿನವರ ಭಾರತ ತಂಡದಲ್ಲಿ ಆಡಿದ್ದರು. ತ್ರಿಕೋನ ಅಂತರರಾಷ್ಟ್ರೀಯ ಸರಣಿಯಲ್ಲಿಯೂ ಮಿಂಚಿದ್ದರು. ಯಶಸ್ವಿ ಆಟದಲ್ಲಿ ಬರೀ ಸಿಕ್ಸರ್‌ ಮತ್ತು ಬೌಂಡರಿಗಳಿಂದಲೇ ಅವರ ಖಾತೆಗೆ 140 ರನ್‌ಗಳು ಹರಿದುಬಂದವು. ಮೊದಲ ವಿಕೆಟ್‌ ಜೊತೆಯಾಟದಲ್ಲಿ ಆದಿತ್ಯ ತಾರೆ ಅವರೊಂದಿಗೆ 200 ರನ್‌ಗಳನ್ನೂ ಪೇರಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಸಿದ್ಧೇಶ್ ಲಾಡ್ ಜೊತೆಗೆ 105 ರನ್‌ಪೇರಿಸಿದರು. ಇದರಿಂದಾಗಿ ತಂಡವು 50 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 358 ರನ್‌ ಗಳಿಸಿತು.

ಅದಕ್ಕುತ್ತರವಾಗಿ ಜಾರ್ಖಂಡ್ 46.4 ಓವರ್‌ಗಳಲ್ಲಿ 319 ರನ್‌ ಗಳಿಸಿತು. ತಂಡದ ಸೌರಭ್ ತಿವಾರಿ (77) ಅರ್ಧಶತಕ ಮತ್ತು ವಿರಾಟ್ ಸಿಂಗ್ (100 ರನ್) ಶತಕ ವ್ಯರ್ಥವಾದವು. ಮುಂಬೈ 39 ರನ್‌ಗಳಿಂದ ಗೆದ್ದಿತು.

ಅಯ್ಯೋ, ಮೊನ್ನೆಹತ್ತನೇ ತರಗತಿ ಪರೀಕ್ಷೆ ಬರೆಯಬೇಕಿತ್ತು
‘ಅಯ್ಯೋ, ಮೊನ್ನೆ 14ರಂದು ಹತ್ತನೇ ತರಗತಿ ಪರೀಕ್ಷೆ ಬರೆಯಬೇಕಿತ್ತು. ಆದರೆ ಮ್ಯಾಚ್ ಇತ್ತು. ಇಲ್ಲಿಯೇ ಆಡುತ್ತಿದ್ದೆ. ಪರೀಕ್ಷೆ ಬರೆಯಲಿಲ್ಲ’ ಎಂದು ಯಶಸ್ವಿ ನಕ್ಕರು. ’ನಿಮ್ಮ ಶಾಲೆ ಯಾವುದು?’ ಎಂದು ಕೇಳಿದ್ದಕ್ಕೆ, ‘ಇಲ್ಲಪ್ಪಾ. ಶಾಲೆಗೆ ಹೋಗಿಲ್ಲ. ಖಾಸಗಿಯಾಗಿ ಪರೀಕ್ಷೆ ಕಟ್ಟಿದ್ದೆ’ ಎಂದರು.

‘ನಿಮ್ಮ ವಿಶ್ವದಾಖಲೆಯ ಕುರಿತು ಹೇಗನಿಸುತ್ತದೆ?’ ಎಂದು ಸುದ್ದಿಗಾರರು ಕೇಳಿದಾಗ ಅರೆಕ್ಷಣ ಕಣ್ಣರಳಿಸಿ ನಿಂತರು ಯಶಸ್ವಿ.

‘ಈ ಬಗ್ಗೆ ನನಗೇನೂ ಗೊತ್ತಿಲ್ಲ. ಈಗ ನಿಮ್ಮಿಂದಲೇ ಮೊದಲು ಕೇಳಿದ್ದು. ಬೌಲರ್‌ಗಳ ಎಸೆತಗಳನ್ನು ಹೊಡೆಯುವುದು ರನ್‌ ಗಳಿಸುವುದಷ್ಟೇ ನನ್ನ ಕೆಲಸ. ಅಂದಹಾಗೆ ಏನದು ದಾಖಲೆ’ ಎಂದು ಮರುಪ್ರಶ್ನೆ ಎಸೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.