ರಾಜ್‌ಕೋಟ್: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಐದನೇ ಬಾರಿ ಪ್ರಶಸ್ತಿ ಜಯದ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ಗುರುವಾರ ನಾಲ್ಕರ ಘಟ್ಟದ ಪಂದ್ಯದಲ್ಲಿ ರಾಜಸ್ಥಾನವನ್ನು ಎದುರಿಸಲಿದೆ.
ತನ್ನ ಬಲಿಷ್ಠ ಬೌಲಿಂಗ್ ಪಡೆಯ ಮೇಲೆಯೇ ಹೆಚ್ಚು ಅವಲಂಬಿತವಾಗಿರುವ ಕರ್ನಾಟಕ ತಂಡಕ್ಕೆ ಉತ್ತಮ ಬ್ಯಾಟರ್‌ಗಳು ಇರುವ ರಾಜಸ್ಥಾನ ಕಠಿಣ ಸವಾಲೊಡ್ಡಲು ಸಿದ್ಧವಾಗಿದೆ. ಕಳೆದ ಕೆಲವು ವರ್ಷಗಳಿಂದ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ನಾಕೌಟ್ ಹಂತದಲ್ಲಿ ಎಡವುತ್ತಿರುವ ಕರ್ನಾಟಕ ತಂಡವು ರಾಜಸ್ಥಾನವನ್ನು ಮಣಿಸುವ ಛಲದಲ್ಲಿದೆ. ಸಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಕ್ವಾರ್ಟರ್‌ಫೈನಲ್ ಪ್ರವೇಶಿಸಿತ್ತು. ಎಂಟರ ಘಟ್ಟದಲ್ಲಿ ವಿದರ್ಭ ತಂಡವನ್ನು ಮಣಿಸಿತ್ತು.
ಆ ಪಂದ್ಯದಲ್ಲಿ ವೇಗಿ ವೈಶಾಖ ವಿಜಯಕುಮಾರ್ ನಾಲ್ಕು ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ತಮ್ಮ ಚೆಂದದ ಸ್ವಿಂಗ್ ಮತ್ತು ಮಧ್ಯಮವೇಗದ ಎಸೆತಗಳ ಮೂಲಕ ಬ್ಯಾಟರ್‌ಗಳ ನಿದ್ದೆಗೆಡಿಸಿರುವ ವಾಸುಕಿ ಕೌಶಿಕ್ ರನ್‌ಗಳನ್ನು ನಿಯಂತ್ರಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಅಲ್ಲದೇ ಪ್ರಮುಖ ಜೊತೆಯಾಟಗಳನ್ನು ಮುರಿಯುವಲ್ಲಿಯೂ ಸಮರ್ಥರಾಗಿದ್ದಾರೆ. ಅವರ ಮುಂದೆ ಈಗ ಅಬ್ಬರದ ಬ್ಯಾಟರ್ ಮಹಿಪಾಲ್ ಲೊಮ್ರೊರ್, ಕುನಾಲ್ ಸಿಂಗ್ ರಾಥೋಡ್ ಮತ್ತು ದೀಪಕ್ ಹೂಡಾ ಅವರನ್ನು ನಿಯಂತ್ರಿಸುವ ಸವಾಲು ಇದೆ.
ಮನೋಜ್ ಬಾಂಢಗೆ ಮತ್ತು ಸ್ಪಿನ್ನರ್ ಜೆ ಸುಚಿತ್ ಕೂಡ ಉತ್ತಮ ಲಯಲ್ಲಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ಅರ್ಧಶತಕ ಗಳಿಸಿದ್ದ ಆರ್. ಸಮರ್ಥ್ ಮತ್ತು ಮಯಂಕ್ ಮತ್ತೊಮ್ಮೆ ಮಿಂಚಿದರೆ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ದೊರೆಯುವುದು ಖಚಿತ. ಅನುಭವಿ ಮನೀಷ್ ಪಾಂಡೆ, ನಿಕಿನ್ ಜೋಸ್ ಮತ್ತು ಕೃಷ್ಣನ್ ಶ್ರೀಜಿತ್ ಅವರ ಮೇಲೆ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬುವ ಹೊಣೆ ಇದೆ. ಅವರು ಉತ್ತಮ ಲಯದಲ್ಲಿರುವ ರಾಜಸ್ಥಾನ ತಂಡದ ಬೌಲರ್‌ಗಳಾದ ಖಲೀಲ್ ಅಹಮದ್ ಅನಿಕೇತ್ ಚೌಧರಿ ಮತ್ತು ಅರಾಫತ್ ಖಾನ್ ಎದುರು ತಮ್ಮ ಸಾಮರ್ಥ್ಯ ಮೆರೆದರೆ ಕರ್ನಾಟಕದ ಫೈನಲ್ ಕನಸು ನನಸಾಗಬಹುದು.
2020ರಲ್ಲಿ ಕೊನೆಯ ಬಾರಿಗೆ ಕರ್ನಾಟಕ ಪ್ರಶಸ್ತಿ ಜಯಿಸಿತ್ತು. ರಾಜಸ್ಥಾನ ತಂಡವು 2006–07ರಲ್ಲಿ ರನ್ನರ್ಸ್ ಅಪ್ ಆಗಿತ್ತು.
ಪಂದ್ಯ ಆರಂಭ: ಮಧ್ಯಾಹ್ನ 1.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.