ಬೆಂಗಳೂರು: ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯಲ್ಲಿ ರನ್‌ಗಳ ಹೊಳೆ ಹರಿಸಿದ್ದ ಮಯಂಕ್ ಅಗರವಾಲ್ ತವರಿನ ತಂಡಕ್ಕೆ ಮರಳಿದ್ದಾರೆ.
ಇದರಿಂದಾಗಿ; ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಆಡಲಿರುವ ಕರ್ನಾಟಕದ ಬಲ ದುಪ್ಪಟ್ಟಾಗಿದೆ. ಎದುರಾಳಿ ತಂಡ ಛತ್ತೀಸಗಡದ ಒತ್ತಡವೂ ಹೆಚ್ಚಿದೆ!
ಕ್ವಾರ್ಟರ್‌ಫೈನಲ್‌ನಲ್ಲಿ ಮಳೆಯ ಆಟದ ಬಲದಿಂದ ಸೆಮಿಫೈನಲ್ ಪ್ರವೇಶಿಸಿದ್ದ ಛತ್ತೀಸಗಡಕ್ಕೆ ಅಮೋಘ ಲಯದಲ್ಲಿರುವ ಆತಿಥೇಯರ ಭಯ ಇದ್ದೇ ಇತ್ತು. ಇದೀಗ ಮಯಂಕ್ ಕೂಡ ಕಣಕ್ಕಿಳಿಯಲಿರುವುದು ಕರ್ನಾಟಕದ ಬ್ಯಾಟಿಂಗ್ ವಿಭಾಗಕ್ಕೆ ನೂರಾನೆ ಬಲ ಸೇರಿದಂತಾಗಿದೆ. ಟೆಸ್ಟ್‌ನಲ್ಲಿ ಒಂದು ದ್ವಿಶತಕ ಮತ್ತು ಶತಕ ಬಾರಿಸಿ ಬಂದಿದ್ದಾರೆ. 2017–18ರಲ್ಲಿ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಗೆದ್ದ ಸಂದರ್ಭದಲ್ಲಿ ಮಯಂಕ್ ಸರಣಿಶ್ರೇಷ್ಠರಾಗಿದ್ದರು.
ಟೂರ್ನಿಯ ಕಳೆದ ಒಂಬತ್ತು ಪಂದ್ಯಗಳಲ್ಲಿ ಒಟ್ಟು 500ಕ್ಕೂ ಹೆಚ್ಚು ರನ್ ಗಳಿಸಿರುವ ನಾಯಕ ಮನೀಷ್ ಪಾಂಡೆ, ಆರಂಭಿಕ ಎಡಗೈ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್, 400ಕ್ಕೂ ಹೆಚ್ಚು ರನ್ ಹೊಡೆದಿರುವ ಕೆ.ಎಲ್. ರಾಹುಲ್, ಅವಕಾಶ ಸಿಕ್ಕಾಗಲೆಲ್ಲ ಮಿಂಚಿರುವ ರೋಹನ್ ಕದಂ ಅಮೋಘ ಲಯದಲ್ಲಿದ್ದಾರೆ. ಎ ಗುಂಪಿನಲ್ಲಿ ಹೈದರಾಬಾದ್ ಎದುರು ಮಾತ್ರ ಪಾಂಡೆ ಬಳಗ ಸೋತಿತ್ತು. ಇದೇ ಛತ್ತೀಸಗಡದ ಎದುರು ರಾಹುಲ್ ಅರ್ಧಶತಕ ಮತ್ತು ಪಾಂಡೆ ಶತಕ ಹೊಡೆದಿದ್ದರು.
ಪುದುಚೇರಿ ಎದುರು ನಡೆದಿದ್ದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ದೇವದತ್ತ, ರಾಹುಲ್ ಮತ್ತು ರೋಹನ್ ಅರ್ಧಶತಕಗಳನ್ನು ಹೊಡೆದಿದ್ದರು. ಆ ಪಂದ್ಯದಲ್ಲಿ ಬೆಳಗಾವಿಯ ರೋಹನ್‌ಗೆ ಮೂರನೇ ಕ್ರಮಾಂಕಕ್ಕೆ ಬಡ್ತಿ ನೀಡಲಾಗಿತ್ತು. ಸತತ ವೈಫಲ್ಯ ಅನುಭವಿಸಿರುವ ಕರುಣ್ ನಾಯರ್ ಅವರನ್ನು ಐದನೇ ಕ್ರಮಾಂಕದಲ್ಲಿ ಇಳಿಸಲಾಗಿತ್ತು. ಆದರೆ ಆ ದಿನ ಅವರಿಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ ವಿಕೆಟ್‌ಕೀಪರ್ ಬಿ.ಆರ್. ಶರತ್‌ಗೆ ವಿಶ್ರಾಂತಿ ನೀಡಲಾಗಿತ್ತು. ರಾಹುಲ್ ಕೀಪಿಂಗ್ ನಿರ್ವಹಿಸಿದ್ದರು. ಶರತ್ ಬದಲು ಸ್ಥಾನ ಗಿಟ್ಟಿಸಿದ್ದ ಪ್ರವೀಣ್ ದುಬೆ ಬೌಲಿಂಗ್‌ನಲ್ಲಿ ಮಿಂಚಿದ್ದರು. ಅದರಿಂದಾಗಿ ಇದೇ ತಂಡ ಸಂಯೋಜನೆಯು ನಾಲ್ಕರ ಘಟ್ಟದಲ್ಲಿಯೂ ಮುಂದುವರಿಯುವ ಸಾಧ್ಯತೆ ಇದೆ. ದೇವದತ್ತ ಮತ್ತು ರಾಹುಲ್ ಆರಂಭಿಕ ಜೋಡಿಯಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿರುವುದರಿಂದ ಮಯಂಕ್ ಮೂರನೇ ಕ್ರಮಾಂಕಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಮಯಂಕ್ ಇನಿಂಗ್ಸ್ ಆರಂಭಿಸಿದರೆ, ದೇವದತ್ತ ಅಥವಾ ರಾಹುಲ್ ಮೂರನೇ ಕ್ರಮಾಂಕಕ್ಕೆ ಬರಬಹುದು. ಬೌಲಿಂಗ್ ವಿಭಾಗದಲ್ಲಿ ಕರ್ನಾಟಕಕ್ಕೆ ಅನಿವಾರ್ಯವಾಗಿ ಬದಲಾವಣೆ ಮಾಡುವ ಸಂದರ್ಭ ಇದಾಗಿದೆ. ಟೂರ್ನಿಯಲ್ಲಿ 17 ವಿಕೆಟ್ ಗಳಿಸಿರುವ ಪ್ರಸಿದ್ಧ ಕೃಷ್ಣ ಗಾಯಗೊಂಡಿದ್ದಾರೆ. ಅವರ ಬದಲಿಗೆ ಸ್ಥಾನ ಪಡೆದಿರುವ ಪ್ರತೀಕ್ ಜೈನ್ ಅವರು ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯಬಹುದು.
ಗುಂಪು ಹಂತದಲ್ಲಿ ಮುಂಬೈ ತಂಡವನ್ನು ಸೋಲಿಸಿದ್ದ ಛತ್ತೀಸಗಡವು ಎಂಟರ ಘಟ್ಟದಲ್ಲಿಯೂ ಮುಂಬೈಗೆ ಮುಖಾಮುಖಿಯಾಗಿತ್ತು. ಆದರೆ ಮಳೆಯಿಂದಾಗಿ ಪಂದ್ಯ ಅಪೂರ್ಣವಾದ್ದರಿಂದ ಲೀಗ್ ಹಂತದಲ್ಲಿ ಹೆಚ್ಚು ಗೆಲುವು ಸಾಧಿಸಿದ್ದ ಛತ್ತೀಸಗಡಕ್ಕೆ ಸೆಮಿಫೈನಲ್ ಅರ್ಹತೆ ಲಭಿಸಿದೆ.
ಮಳೆ ಸಾಧ್ಯತೆ
ಕಳೆದ ಐದು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಜೋರಾಗಿಯೇ ಇದೆ. ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯಗಳು ನಡೆಯಲಿರುವ ಬುಧವಾರವೂ ಮಳೆ ಬರುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ಅಂದು ಮಧ್ಯಾಹ್ನದ ವೇಳೆ ಮತ್ತು ಮಂಗಳವಾರ ತಡರಾತ್ರಿ ಮಳೆ ಸುರಿಯುವ ಸಾಧ್ಯತೆ ಇದೆ. ಇದರಿಂದಾಗಿ ಪಂದ್ಯಗಳಿಗೆ ಅಡ್ಡಿಯಾಗಬಹುದು.
ಮಂಗಳವಾರ ಬೆಳಿಗ್ಗೆ ಮತ್ತು ಮಳೆ ಇದ್ದ ಕಾರಣ ತಂಡಗಳು ಅಭ್ಯಾಸ ನಡೆಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.