ರಾಜ್‌ಕೋಟ್: ಕರ್ನಾಟಕ ತಂಡವು ಸೋಮವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಬೆಂಗಳೂರಿನ ಕರುಣ್ ನಾಯರ್ ಅವರು ಇರುವ ವಿದರ್ಭ ತಂಡವನ್ನು ಎದುರಿಸಲಿದೆ.
ಕರ್ನಾಟಕ ತಂಡವು ಸಿ ಗುಂಪಿನಲ್ಲಿ ಕೇವಲ ಹರಿಯಾಣ ವಿರುದ್ಧ ಮಾತ್ರ ಸೋತಿತ್ತು. ಉಳಿದಿದ್ದ ಪಂದ್ಯಗಳಲ್ಲಿ ಜಯಿಸಿ ಎಂಟರ ಘಟ್ಟ ತಲುಪಿದೆ. ಆದರೆ ಗುಂಪು ಹಂತದಲ್ಲಿ ರನ್‌ಗಳ ಹೊಳೆ ಹರಿಸಿದ್ದ ದೇವದತ್ತ ಪಡಿಕ್ಕಲ್ ಮತ್ತು ಭರವಸೆಯ ವೇಗಿ ವಿದ್ವತ್ ಕಾವೇರಪ್ಪ ದಕ್ಷಿಣ ಆಫ್ರಿಕಾ ಕ್ಕೆ ಭಾರತ ಎ ತಂಡದೊಂದಿಗೆ ತೆರಳಿದ್ದಾರೆ. ಆದ್ದರಿಂದ ಆರಂಭಿಕ ಜೋಡಿ ಮಯಂಕ್ ಅಗರವಾಲ್ ಮತ್ತು ಆರ್. ಸಮರ್ಥ್ ಅವರ ಮೇಲೆಯೇ ಹೆಚ್ಚಿನ ನಿರೀಕ್ಷೆ ಇದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಇವರಿಬ್ಬರೂ ಮಿಂಚಿದ್ದರು. ಆದರೆ ನಂತರದ ಪಂದ್ಯಗಳಲ್ಲಿ ಅವರಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ
ಅನುಭವಿ ಮಯಂಕ್ ಅಗರವಾಲ್ ಅವರ ಮೇಲೆ ಮಧ್ಯಮ ಕ್ರಮಾಂಕವನ್ನು ಗಟ್ಟಿಗೊಳಿಸುವ ಹೊಣೆ ಇದೆ. ಯುವ ಆಟಗಾರರಾದ ಅಭಿನವ್ ಮನೋಹರ್, ನಿಕಿನ್ ಜೋಸ್, ವಿಕೆಟ್‌ಕೀಪರ್ ಬ್ಯಾಟರ್ ಬಿ.ಆರ್. ಶರತ್ ಮತ್ತು ಕೃಷ್ಣನ್ ಶ್ರೀಜಿತ್ ಅವರಿಗೆ ತಮ್ಮ ಪ್ರತಿಭೆ ತೋರ್ಪಡಿಸುವ ಅವಕಾಶ ಇದಾಗಲಿದೆ. ಮಧ್ಯಮವೇಗಿ ವಾಸುಕಿ ಕೌಶಿಕ್, ವೈಶಾಖ ವಿಜಯಕುಮಾರ್, ಸ್ಪಿನ್ನರ್ ಕೆ ಗೌತಮ್ ಅವರ ಮೇಲೆಯೂ ನಿರೀಕ್ಷೆಯ ಭಾರವಿದೆ.
ಈ ಹಿಂದೆಯೂ ನಾಕ್‌ಔಟ್ ಹಂತಗಳಲ್ಲಿ ಎದುರಾಳಿ ತಂಡಗಳಿಗೆ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದ ವಿದರ್ಭ ತಂಡದಲ್ಲಿ ಈ ಬಾರಿ ಕರ್ನಾಟಕ ಕರುಣ್ ನಾಯರ್ ಇದ್ದಾರೆ. ಭಾರತ ತಂಡದಲ್ಲಿಯೂ ಆಡಿರುವ ಅನುಭವಿ ಕರುಣ್ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ್ದರು. ಇದೇ ಮೊದಲ ಬಾರಿಗೆ ಅವರು ತಮ್ಮ ‘ತವರಿನ ತಂಡ’ವನ್ನು ಎದುರಿಸಲಿದ್ದಾರೆ. ಅನುಭವಿ ಬೌಲರ್ ಉಮೇಶ್ ಯಾದವ್ ಮತ್ತು ರಜನೀಶ್ ಗುರ್ಬಾನಿ ಅವರನ್ನು ಎದುರಿಸುವ ಸವಾಲು ಕರ್ನಾಟಕದ ಬ್ಯಾಟರ್‌ಗಳ ಮುಂದಿದೆ.
ತಂಡಗಳು
ಕರ್ನಾಟಕ: ಮಯಂಕ್ ಅಗರವಾಲ್ (ನಾಯಕ), ಬಿ.ಆರ್. ಶರತ್, ಅಭಿನವ್ ಮನೋಹರ್, ಕೆ. ಗೌತಮ್, ಮನೋಜ್ ಬಾಂಢಗ, ಮನೀಷ್ ಪಾಂಡೆ, ಆರ್. ಸಮರ್ಥ್, ನಿಕಿನ್ ಜೋಸ್, ಜೆ. ಸುಚಿತ್, ಎಂ. ವೆಂಕಟೇಶ್, ವಿ. ಕೌಶಿಕ್, ವೈಶಾಖ ವಿಜಯಕುಮಾರ್, ಕೃಷ್ಣನ್ ಶ್ರೀಜಿತ್, ಶುಭಾಂಗ್ ಹೆಗ್ಡೆ.
ವಿದರ್ಭ: ಅಥರ್ವ್ ತೈಡೆ (ನಾಯಕ), ಧ್ರುವ ಶೋರೆ, ಅಮನ್ ಮೊಕಾಡೆ, ಕರುಣ್ ನಾಯರ್, ಅಕ್ಷಯ್ ವಾಡ್ಕರ್ (ವಿಕೆಟ್‌ಕೀಪರ್), ಹರ್ಷ್ ದುಬೆ, ಶುಭಂ ದುಬೆ, ಅಕ್ಷಯ್ ಕರ್ಣೇವರ್, ಉಮೇಶ್ ಯಾದವ್, ದರ್ಶನ್ ನಾಯ್ಕಂಡೆ, ಯಶ್ ಠಾಕೂರ್, ಜಿತೇಶ್ ಶರ್ಮಾ, ಸಂಜಯ್ ರಘುನಾಥ್, ರಜನೀಶ್ ಗುರ್ಬಾನಿ, ಮೋಹಿತ್ ಕಾಳೆ, ನಚಿಕೇತ್ ಭೂತೆ, ಯಶ್ ಕದಂ.
ಇನ್ನುಳಿದ ಕ್ವಾರ್ಟರ್‌ಫೈನಲ್‌ಗಳು
ಹರಿಯಾಣ–ಬಂಗಾಳ
ರಾಜಸ್ಥಾನ –ಕೇರಳ
ಮುಂಬೈ–ತಮಿಳುನಾಡು
ಪಂದ್ಯಗಳ ಆರಂಭ: ಬೆಳಿಗ್ಗೆ 9
ಸ್ಥಳ: ರಾಜ್‌ಕೋಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.