ಬೆಂಗಳೂರು: ಮೊಹಸಿನ್ ಖಾನ್ (25ಕ್ಕೆ4) ಮತ್ತು ಧನುಷ್ ಗೌಡ (40ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್‌ನಿಂದಾಗಿ ತಮಿಳುನಾಡು ತಂಡವು ವಿಜಯ್ ಮರ್ಚಂಟ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಅಲ್ಪಮೊತ್ತಕ್ಕೆ ಕುಸಿಯಿತು.
ಬುಧವಾರ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯದಲ್ಲಿ ತಮಿಳುನಾಡು ತಂಡವು 66.3 ಓವರ್‌ಗಳಲ್ಲಿ 190 ರನ್ ಗಳಿಸಿ ಆಲೌಟ್ ಆಯಿತು.
ಅದಕ್ಕುತ್ತರವಾಗಿ ಕರ್ನಾಟಕ ತಂಡವು ದಿನದಾಟದ ಕೊನೆಗೆ 21 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 46 ರನ್ ಗಳಿಸಿತು.
ಕರ್ನಾಟಕದ ವಿಶಾಲ್ ಕುಮಾರ್ ಮತ್ತು ಧನುಷ್ ಗೌಡ ಅವರು ಬೆಳಿಗ್ಗೆ ಇನಿಂಗ್ಸ್‌ನ ಆರಂಭದಲ್ಲಿಯೇ ತಮಿಳುನಾಡಿಗೆ ಬಲವಾದ ಪೆಟ್ಟುಕೊಟ್ಟರು.ಮೂರನೇ ಓವರ್‌ನಲ್ಲಿ ವಿಶಾಲ್ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಅನಿರುದ್ಧ ಕೃಷ್ಣನ್ ಔಟಾದರು. ನಾಲ್ಕನೇ ಓವರ್‌ನಲ್ಲಿ ಧನುಷ್ ಅವರ ಎಸೆತದಲ್ಲಿ ಅತೀಶ್ ರಾಜರಾಜೇಂದ್ರನ್ ಕೂಡ ನಿರ್ಗಮಿಸಿದರು. ಇದರಿಂದಾಗಿ ತಂಡವು 11 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ಆರ್. ಬದರೀನಾಥ್ (83; 145ಎಸೆತ, 13ಬೌಂಡರಿ) ಮತ್ತು ಜಯಂತ್ ಶ್ರೀಕಾಂತ್ (52; 102ಎ, 9ಬೌಂ) ಅರ್ಧಶತಕಗಳನ್ನು ಬಾರಿಸಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಡೆಯಲು ಪ್ರಯತ್ನಿಸಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 106 ರನ್ ಗಳಿಸಿದರು. ಬದರೀನಾಥ್ ವಿಕೆಟ್ ಕಬಳಿಸಿದ ಧನುಷ್ ಈ ಜೊತೆಯಾಟವನ್ನು ಮುರಿಯುವಲ್ಲಿ ಸಫಲರಾದರು.
ಆದರೆ ಅವರಿಬ್ಬರೂ ಔಟಾದ ನಂತರ ಬಂದ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. ಮೊಹಸಿನ್ ಖಾನ್ ಅವರು ತಮ್ಮ ದಾಳಿಯ ಮೂಲಕ ಮಧ್ಯಮಕ್ರಮಾಂಕಕ್ಕೆ ಪೆಟ್ಟು ಕೊಟ್ಟರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ತಮಿಳುನಾಡು: 66.3 ಓವರ್‌ಗಳಲ್ಲಿ 190 (ಆರ್. ಬದರಿನಾಥ್ ಅಣ್ಣಾದೊರೈ 83, ಜಯಂತ್ ವಿ ಶ್ರೀಕಾಂತ್ 52, ರಾಹುಲ್ ಅಯ್ಯಪ್ಪನ್ 19, ವಿಶಾಲ್ ಕುಮಾರ್ 47ಕ್ಕೆ2, ಧನುಷ್ ಗೌಡ 40ಕ್ಕೆ3, ಮೊಹಸಿನ್ ಖಾನ್ 25ಕ್ಕೆ4) ಕರ್ನಾಟಕ: 21 ಓವರ್‌ಗಳಲ್ಲಿ 2ಕ್ಕೆ46 (ವಿಶಾಲ್ ಓನತ್ ಬ್ಯಾಟಿಂಗ್ 19, ಅಚ್ಯುತ್ ಭಾಸ್ಕರ್ 24ಕ್ಕೆ1)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.