ಸೂರತ್: ಒಂಬತ್ತನೇ ಕ್ರಮಾಂಕದ ಬ್ಯಾಟ್ಸ್‌ಮನ್, ನಾಯಕ ವಿನಯ ಕುಮಾರ್ ಅವರ ಅರ್ಧಶತಕದ ಬೆನ್ನಲ್ಲೇ ಬೌಲರ್‌ಗಳ ಪರಿಣಾಮಕಾರಿ ದಾಳಿಯಿಂದಾಗಿ ಕರ್ನಾಟಕ ತಂಡ, ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಲ್ಲಿ ನಿಂತಿದೆ.
ಇಲ್ಲಿನ ಲಾಲ್‌ಭಾಯಿ ಕಾಂಟ್ರಾಕ್ಟರ್ ಕ್ರೀಡಾಂಗಣದಲ್ಲಿ ಆತಿಥೇಯ ಗುಜರಾತ್ ಎದುರಿನ ಎಲೀಟ್ ‘ಎ’ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ 173 ರನ್‌ಗಳ ಮುನ್ನಡೆ ಗಳಿಸಿದೆ. ಮೂರನೇ ದಿನದಾಟದ ಮುಕ್ತಾಯಕ್ಕೆ ಮೂರು ವಿಕೆಟ್ ಕಳೆದುಕೊಂಡಿರುವ ಗುಜರಾತ್ ಒಟ್ಟಾರೆ 14 ರನ್‌ಗಳಿಂದ ಮುಂದಿದೆ. ಹೀಗಾಗಿ ಕೊನೆಯ ದಿನವಾದ ಸೋಮವಾರದ ಆಟ ಕುತೂಹಲ ಕೆರಳಿಸಿದೆ.
ಮೊದಲ ಇನಿಂಗ್ಸ್‌ನಲ್ಲಿ ಗುಜರಾತ್ ತಂಡವನ್ನು 216 ರನ್‌ಗಳಿಗೆ ಆಲೌಟ್ ಮಾಡಿದ್ದ ಕರ್ನಾಟಕ ಶನಿವಾರದ ಅಂತ್ಯಕ್ಕೆ ಏಳು ವಿಕೆಟ್‌ಗಳನ್ನು ಕಳೆದುಕೊಂಡು 348 ರನ್ ಗಳಿಸಿತ್ತು. ಚೊಚ್ಚಲ ಪಂದ್ಯ ಆಡಿದ ಶರತ್ (47) ಅರ್ಧಶತಕದ ಅಂಚಿನಲ್ಲಿದ್ದರು. ವಿನಯ ಕುಮಾರ್ 16 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ವೈಯಕ್ತಿಕ ಮೊತ್ತಕ್ಕೆ ಒಂದು ರನ್ ಕೂಡ ಸೇರಿಸದೆ ಭಾನುವಾರ ಬೆಳಿಗ್ಗೆ ದಿನದಾಟದ ಎರಡನೇ ಓವರ್‌ನಲ್ಲಿ ಶರತ್ ಔಟಾದರು.
ಆದರೆ ವಿನಯಕುಮಾರ್ (51; 99 ಎಸೆತ, 1 ಸಿಕ್ಸರ್, 5 ಬೌಂಡರಿ) ಅಮೋಘ ಬ್ಯಾಟಿಂಗ್ ಮೂಲಕ ಮಿಂಚಿದರು. ಒಂಬತ್ತನೇ ವಿಕೆಟ್‌ಗೆ ರೋನಿತ್ ಮೋರೆ ಜೊತೆ 33 ರನ್ ಸೇರಿಸಿದ ಅವರು ಕೊನೆಯ ವಿಕೆಟ್‌ಗೆ ಪ್ರತೀಕ್ ಜೈನ್ ಅವರೊಂದಿಗೆ ಎರಡು ರನ್‌ಗಳ ಜೊತೆಯಾಟ ಆಡಿ ಔಟಾದರು.
ಆರಂಭಿಕ ಪೆಟ್ಟು:ಭಾರ್ಗವ್–ರುಜುಲ್ ಜೊತೆಯಾಟದ ವೈಭವ: ಭಾರಿ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಗುಜರಾತ್‌ಗೆ ಕರ್ನಾಟಕದ ಬೌಲರ್‌ಗಳು ಆರಂಭದಲ್ಲೇ ಪೆಟ್ಟು ನೀಡಿದರು. ಖಾತೆ ತೆರೆಯುವ ಮೊದಲೇ ಕಥನ್ ಡಿ.ಪಟೇಲ್ ಅವರನ್ನು ಚೊಚ್ಚಲ ಪಂದ್ಯ ಆಡುತ್ತಿರುವ ಎಡಗೈ ಮಧ್ಯಮ ವೇಗಿ ಪ್ರತೀಕ್ ಜೈನ್ ಎಲ್‌ಬಿಡಬ್ಲ್ಯು ಬಲೆಯಲ್ಲಿ ಕೆಡವಿದರು. ತಂಡದ ಮೊತ್ತ ಆರು ರನ್‌ಗಳಾಗಿದ್ದಾಗ ಅಪಾಯಕಾರಿ ಪ್ರಿಯಾಂಕ್ ಪಾಂಚಾಲ್ ಅವರನ್ನು ಆಫ್ ಸ್ಪಿನ್ನರ್ ಕೆ.ಗೌತಮ್ ಔಟ್ ಮಾಡಿದರು.
ಭಾರ್ಗವ್ ಮೆರಾಯ್ ಮತ್ತು ರುಜುಲ್ ಭಟ್ ಮೂರನೇ ವಿಕೆಟ್‌ಗೆ 134 ರನ್‌ಗಳನ್ನು ಸೇರಿಸಿ ತಂಡವನ್ನು ಇನಿಂಗ್ಸ್ ಸೋಲಿನ ಆತಂಕದಿಂದ ಪಾರು ಮಾಡಿದರು. 49ನೇ ಓವರ್‌ನಲ್ಲಿ ಈ ಜೊತೆಯಾಟವನ್ನು ಮುರಿದ ರೋನಿತ್ ಮೋರೆ ಕರ್ನಾಟಕ ಪಾಳಯದಲ್ಲಿ ಸಂಭ್ರಮ ಮೂಡಿಸಿದರು. ಭಾರ್ಗವ್ ಮೆರಾಯ್ (74; 130 ಎ, 8 ಬೌಂ) ಔಟಾದ ನಂತರವೂ ರುಜುಲ್ ಭಟ್ (82; 220ಎ, 8 ಬೌಂ) ಅವರ ಬ್ಯಾಟಿಂಗ್ ವೈಭವ ಮುಂದುವರಿಯಿತು. ನಾಲ್ಕನೇ ವಿಕೆಟ್‌ಗೆ ಅವರೊಂದಿಗೆ 47 ರನ್ ಸೇರಿಸಿದ ಮನ್‌ಪ್ರೀತ್ ಜುನೇಜ ಕ್ರೀಸ್‌ನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.