ADVERTISEMENT

Asia Cup 2023: ಕೊಲಂಬೊದಲ್ಲಿ ಕೊಹ್ಲಿ, ರಾಹುಲ್ ರನ್‌ ಮಳೆ

ಕ್ರಿಕೆಟ್‌: ಪಾಕಿಸ್ತಾನ ತಂಡಕ್ಕೆ 357 ರನ್‌ ಗುರಿ ನೀಡಿದ ರೋಹಿತ್‌ ಬಳಗ; ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2023, 13:19 IST
Last Updated 11 ಸೆಪ್ಟೆಂಬರ್ 2023, 13:19 IST
<div class="paragraphs"><p>ರಾಹುಲ್ - ಕೊಹ್ಲಿ (ಸಂಗ್ರಹ ಚಿತ್ರ)</p></div>

ರಾಹುಲ್ - ಕೊಹ್ಲಿ (ಸಂಗ್ರಹ ಚಿತ್ರ)

   

ಕೊಲಂಬೊ: ವಿರಾಟ್‌ ಕೊಹ್ಲಿ ಮತ್ತು ಕೆ.ಎಲ್‌.ರಾಹುಲ್‌ ಅವರು ಆರ್‌.ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ ಸುರಿಸಿದ ರನ್‌ ಮಳೆಯ ಮುಂದೆ ಪಾಕಿಸ್ತಾನ ತಂಡ ತತ್ತರಿಸಿತು.

ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ಸೂಪರ್‌ ಫೋರ್‌ ಹಂತದ ಪಂದ್ಯದಲ್ಲಿ ಇವರಿಬ್ಬರು ಗಳಿಸಿದ ಭರ್ಜರಿ ಶತಕದ ನೆರವಿನಿಂದ ರೋಹಿತ್‌ ಶರ್ಮಾ ಬಳಗ, ಪಾಕ್‌ ತಂಡಕ್ಕೆ 357 ರನ್‌ಗಳ ಗುರಿ ನೀಡಿದೆ.

ADVERTISEMENT

ಮೀಸಲು ದಿನವಾದ ಸೋಮವಾರ ಮುಂದುವರಿದ ಪಂದ್ಯದಲ್ಲಿ ಭಾರತ 50 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 356 ರನ್‌ ಕಲೆಹಾಕಿತು. 24.1 ಓವರ್‌ಗಳಲ್ಲಿ 147 ರನ್‌ಗಳಿಂದ ಭಾರತ ಆಟ ಮುಂದುವರಿಸಿತ್ತು. ಗುರಿ ಬೆನ್ನಟ್ಟಿರುವ ಪಾಕ್‌ ತಂಡ ಮಳೆಯಿಂದಾಗಿ ಆಟ ನಿಂತಾಗ 11 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 44 ರನ್‌ ಗಳಿಸಿತ್ತು.

ಕೊಹ್ಲಿ 94 ಎಸೆತಗಳಲ್ಲಿ 122 ರನ್‌ ಗಳಿಸಿದರೆ, ರಾಹುಲ್‌ 106 ಎಸೆತಗಳಲ್ಲಿ 111 ರನ್‌ ಕಲೆಹಾಕಿದರು. ಪಾಕ್‌ ತಂಡದ ವೇಗ ಹಾಗೂ ಸ್ಪಿನ್‌ ದಾಳಿಯನ್ನು ಪುಡಿಗಟ್ಟಿದ ಈ ಜೋಡಿ ಮುರಿಯದ ಮೂರನೇ ವಿಕೆಟ್‌ಗೆ 233 ರನ್‌ ಸೇರಿಸಿತು.

ಏಕದಿನ ಕ್ರಿಕೆಟ್‌ನಲ್ಲಿ 47ನೇ ಶತಕ ಸಾಧನೆ ಮಾಡಿದ ಕೊಹ್ಲಿ, ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ (49 ಶತಕ) ಅವರನ್ನು ಹಿಂದಿಕ್ಕುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟರು.

ಸುಮಾರು ನಾಲ್ಕು ತಿಂಗಳ ಬಳಿಕ ಕಣಕ್ಕಿಳಿದ ಕರ್ನಾಟಕದ ವಿಕೆಟ್‌ ಕೀಪರ್ ಬ್ಯಾಟರ್‌ ರಾಹುಲ್, ಏಕದಿನ ಕ್ರಿಕೆಟ್‌ನಲ್ಲಿ ಆರನೇ ಶತಕ ಪೂರೈಸಿದರು. ತಮ್ಮ ಫಿಟ್‌ನೆಸ್‌ ಬಗ್ಗೆ ಎದ್ದಿದ್ದ ಅನುಮಾನಗಳನ್ನು ಸೊಗಸಾದ ಬ್ಯಾಟಿಂಗ್‌ ಮೂಲಕ ದೂರ ಮಾಡಿದರು. ಐಪಿಎಲ್‌ ಟೂರ್ನಿಯ ವೇಳೆ ಗಾಯಗೊಂಡಿದ್ದ ಅವರು ಮೇ ತಿಂಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ರೋಹಿತ್‌ ಮತ್ತು ಶುಭಮನ್‌ ಗಿಲ್‌ ಅವರು ಭಾನುವಾರ ಮೊದಲ ವಿಕೆಟ್‌ಗೆ ಶತಕದ ಜತೆಯಾಟವಾಡಿ ಭಾರತಕ್ಕೆ ಉತ್ತಮ ಆರಂಭ ನೀಡಿದ್ದರು. ಕೊಹ್ಲಿ ಹಾಗೂ ರಾಹುಲ್‌ ಆರಂಭದ ಕೆಲವು ಓವರ್‌ಗಳನ್ನು ಎಚ್ಚರಿಕೆಯಿಂದ ಎದುರಿಸಿದರು. ಆದರೂ ರನ್‌ ರೇಟ್‌ 7ರ ಆಸುಪಾಸು ಇರುವಂತೆ ನೋಡಿಕೊಂಡರು.

ಪರಿಸ್ಥಿತಿಗೆ ಹೊಂದಿಕೊಂಡ ಬಳಿಕ ಕೊಹ್ಲಿ ಬಿರುಸಿನ ಆಟಕ್ಕಿಳಿದರು. ಬೌಂಡರಿ, ಸಿಕ್ಸರ್‌ಗಳ ಮೂಲಕ ಪಾಕ್‌ ಬೌಲಿಂಗ್‌ ವಿಭಾಗದ ದಿಕ್ಕು ತಪ್ಪಿಸಿದರು. ಪಾಕ್‌ ನಾಯಕ ಬಾಬರ್‌ ಅಜಂ ಅವರು ಬೌಲಿಂಗ್‌ನಲ್ಲಿ ಪದೇ ಪದೇ ಬದಲಾವಣೆ ಮಾಡಿದರೂ ಯಾವುದೇ ಫಲ ದೊರೆಯಲಿಲ್ಲ. ಭಾರತ ತಂಡ ಸೋಮವಾರ ಆಡಿದ 25.5 ಓವರ್‌ಗಳಲ್ಲಿ 209 ರನ್‌ ಕಲೆಹಾಕಿತು.

ಆಕರ್ಷಕ ಡ್ರೈವ್‌ಗಳು, ಅಪ್ಪರ್‌ ಕಟ್ ಹಾಗೂ ಪುಲ್‌ ಶಾಟ್‌ಗಳು ಕೊಹ್ಲಿ ಅವರ ಇನಿಂಗ್ಸ್‌ನ ಮೆರುಗು ಹೆಚ್ಚಿಸಿತು. ರಾಹುಲ್‌ ಅವರು ಲೆಗ್‌ ಸ್ಪಿನ್ನರ್‌ ಶಾದಾಬ್‌ ಖಾನ್‌ ಅವರ ಬೌಲಿಂಗ್‌ನಲ್ಲಿ ಹೊಡೆದ ಸಿಕ್ಸರ್‌ ಸೊಗಸಾಗಿತ್ತು. ರಾಹುಲ್‌ ಭರ್ತಿ 100 ಎಸೆತಗಳಲ್ಲಿ ಶತಕ ಪೂರೈಸಿದರೆ, ಕೊಹ್ಲಿ 84 ಎಸೆತಗಳಲ್ಲಿ ಮೂರಂಕಿಯ ಗಡಿ ದಾಟಿದರು.

ರಾಹುಲ್‌ ಇನಿಂಗ್ಸ್‌ ಭಾರತ ತಂಡದ ವ್ಯವಸ್ಥಾಪನ ಮಂಡಳಿಗೆ ಹೆಚ್ಚಿನ ಸಂತಸ ನೀಡಿರುವುದರಲ್ಲಿ ಅನುಮಾನವಿಲ್ಲ. ವಿಶ್ವಕಪ್‌ ಟೂರ್ನಿಗೆ ತಾನು ಸಜ್ಜಾಗಿದ್ದೇನೆ ಎಂಬ ಸಂದೇಶವನ್ನು ಅವರು ಈ ಇನಿಂಗ್ಸ್‌ ಮೂಲಕ ಕಳುಹಿಸಿದರು.

ಭಾರತಕ್ಕೆ ಪ್ರಮುಖ ‘ಬೆದರಿಕೆ’ ಎನಿಸಿಕೊಂಡಿದ್ದ ಪಾಕ್‌ ತಂಡದ ಎಡಗೈ ವೇಗಿ ಶಾಹೀನ್‌ ಶಾ ಆಫ್ರಿದಿ ಅವರನ್ನು ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಸಮರ್ಥವಾಗಿ ಎದುರಿಸಿದರು. ಅವರು 10 ಓವರ್‌ಗಳಲ್ಲಿ 79 ರನ್‌ಗಳನ್ನು ಬಿಟ್ಟುಕೊಟ್ಟರು. ವೇಗದ ಬೌಲರ್‌ ಹ್ಯಾರಿಸ್‌ ರವೂಫ್‌ ಗಾಯದ ಕಾರಣ ಸೋಮವಾರ ಕಣಕ್ಕಿಳಿಯದೇ ಇದ್ದುದು ಪಾಕ್‌ ತಂಡದ ಬೌಲಿಂಗ್‌ನ ಶಕ್ತಿ ಅಲ್ಪ ಕುಂದುವಂತೆ ಮಾಡಿತು.

ಕೊಹ್ಲಿ ಅತಿವೇಗದ 13 ಸಾವಿರ ರನ್‌

ವಿರಾಟ್‌ ಕೊಹ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 13 ಸಾವಿರ ರನ್‌ ಪೂರೈಸಿದ ಸಾಧನೆ ಮಾಡಿದರು. ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಕೊಹ್ಲಿ, 267ನೇ ಇನಿಂಗ್ಸ್‌ನಲ್ಲಿ (278ನೇ ಪಂದ್ಯ) ಈ ಮೈಲಿಗಲ್ಲು ದಾಟಿದರು. ಸಚಿನ್‌ ಅವರು 13 ಸಾವಿರ ರನ್‌ ಪೂರೈಸಲು 321 ಇನಿಂಗ್ಸ್‌ಗಳನ್ನು (330ನೇ ಪಂದ್ಯ) ತೆಗೆದುಕೊಂಡಿದ್ದರು.

ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 13 ಸಾವಿರ ರನ್‌ಗಳ ಗಡಿ ದಾಟಿದ ಐದನೇ ಬ್ಯಾಟರ್‌ ಎನಿಸಿಕೊಂಡರು. ಸಚಿನ್‌ ಅಲ್ಲದೆ ರಿಕಿ ಪಾಂಟಿಂಗ್, ಕುಮಾರ ಸಂಗಕ್ಕಾರ ಹಾಗೂ ಸನತ್‌ ಜಯಸೂರ್ಯ ಈ ಸಾಧನೆ ಮಾಡಿದ್ದಾರೆ.

ಕೊಲಂಬೊದಲ್ಲಿ ಸತತ ನಾಲ್ಕನೇ ಶತಕ

ಕೊಲಂಬೊದ ಆರ್‌.ಪ್ರೇಮದಾಸ ಕ್ರೀಡಾಂಗಣದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಶತಕ ಗಳಿಸಿದ ಸಾಧನೆಯನ್ನು ಕೊಹ್ಲಿ ಮಾಡಿದರು. ಅವರು ಇಲ್ಲಿ ಆಡಿದ್ದ ಈ ಹಿಂದಿನ ಮೂರು ಪಂದ್ಯಗಳಲ್ಲಿ ಕ್ರಮವಾಗಿ 128 (119 ಎ.), 131 (96 ಎ.) ಮತ್ತು 110 ರನ್‌ (116 ಎ.) ಕಲೆಹಾಕಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ ಒಂದೇ ತಾಣದಲ್ಲಿ ಸತತ ನಾಲ್ಕು ಶತಕ ಗಳಿಸಿದ್ದ ದಕ್ಷಿಣ ಆಫ್ರಿಕಾದ ಹಾಶಿಮ್‌ ಆಮ್ಲಾ ಅವರ ದಾಖಲೆಯನ್ನು ಸರಿಗಟ್ಟಿದರು. ಆಮ್ಲಾ, ಸೆಂಚೂರಿಯನ್‌ ಕ್ರೀಡಾಂಗಣದಲ್ಲಿ ಇಂತಹ ಸಾಧನೆ ಮಾಡಿದ್ದರು.

ಭಾರತಕ್ಕೆ ಇಂದು ಲಂಕಾ ಸವಾಲು

ಮಂಗಳವಾರ ನಡೆಯಲಿರುವ ಸೂಪರ್‌ ಫೋರ್‌ ಹಂತದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಬಳಗ, ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಇದರಿಂದ ಭಾರತ ತಂಡ ಸತತ ಮೂರನೇ ದಿನ ಕಣಕ್ಕಿಳಿದಂತಾಗುತ್ತದೆ. ಪಾಕ್‌ ವಿರುದ್ಧ ಭಾನುವಾರ ನಡೆಯಬೇಕಿದ್ದ ಪಂದ್ಯ ಮಳೆಯಿಂದ ಅರ್ಧದಲ್ಲೇ ನಿಂತಿತ್ತು. ಮೀಸಲು ದಿನವಾದ ಸೋಮವಾರ ಮುಂದುವರಿಸಲಾಗಿತ್ತು.

ಶ್ರೀಲಂಕಾ ತಂಡ ಸೂಪರ್‌ ಫೋರ್‌ ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಮಣಿಸಿತ್ತು. ಲೀಗ್‌ ಹಂತದಲ್ಲಿ ಎರಡು ಪಂದ್ಯಗಳನ್ನು ಗೆದ್ದುಕೊಂಡಿದ್ದ ಆತಿಥೇಯ ತಂಡ ಟೂರ್ನಿಯಲ್ಲಿ ಅಜೇಯವಾಗಿ ಉಳಿದುಕೊಂಡಿದೆ.

ಪಂದ್ಯ ಆರಂಭ: ಮಧ್ಯಾಹ್ನ 3

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.