ಬೆಂಗಳೂರು: 2024ರ ಟಿ–20 ವಿಶ್ವಕಪ್ ಗಮನದಲ್ಲಿರಿಸಿಕೊಂಡು ಹಾಗೂ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಕೊಡುವ ಸಲುವಾಗಿ ಟಿ–20 ಮಾದರಿಯ ಕ್ರಿಕೆಟ್‌ಗೆ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡದೇ ಇರಲು ಬಯಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಜತೆಗೆ ಚುಟುಕು ಕ್ರಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಅವರನ್ನು ದೀರ್ಘಾವಧಿ ನಾಯಕನಾಗಿ ಮುಂದುವರಿಸಲಾಗುವುದು ಎಂದೂ ಎನ್‌ಡಿಟಿವಿ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಜನವರಿ 7 ರಂದು ಚೇತನ್ ಶರ್ಮಾ ನೇತೃತ್ವದಲ್ಲಿ ಹೊಸ ಆಯ್ಕೆ ಸಮಿತಿ ರಚನೆ ಆಗಿದ್ದು, ಶೀಘ್ರವೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಜತೆಗೆ ಈ ಬಗ್ಗೆ ಮಾತನಾಡಲಿದೆ ಎಂದು ಗೊತ್ತಾಗಿದೆ. ಆಲ್ಲದೇ ಟಿ–20ಗೆ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಯುವ ತಂಡ ಬೇಕು ಎಂದು ಬಿಸಿಸಿಐ ಬಯಸಿದೆ ಎಂದು ತಿಳಿದು ಬಂದಿದೆ.
ಇದರ ಸಲುವಾಗಿಯೇ ಇತ್ತೀಚೆಗೆ ಅಂತ್ಯಗೊಂಡ ಶ್ರೀಲಂಕಾ ವಿರುದ್ಧದ ಟಿ–20 ಸರಣಿಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಕೈ ಬಿಡಲಾಗಿತ್ತು. ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಯುವ ತಂಡಕ್ಕೆ ಅವಕಾಶ ನೀಡಲಾಗಿತ್ತು.
ಶ್ರೀಲಂಕಾದ ವಿರುದ್ಧ ಟಿ–20 ಸರಣಿಯಲ್ಲಿ ಭಾರತ ತಂಡ 2–1 ಅಂತರದಿಂದ ಸರಣಿ ಗೆದ್ದಿತ್ತು. ಆ ಮೂಲಕ ನಾಯಕನಾಗಿ ಮೊದಲ ಸರಣಿಯಲ್ಲೇ ಹಾರ್ದಿಕ್ ಪಾಂಡ್ಯ ಯಶಸ್ಸು ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.