ADVERTISEMENT

ಐಸಿಸಿ ರ‍್ಯಾಂಕಿಂಗ್: ಅಗ್ರ ಹತ್ತರಲ್ಲಿ ವಿರಾಟ್ ಕೊಹ್ಲಿ

ಪಿಟಿಐ
Published 3 ಜನವರಿ 2024, 13:22 IST
Last Updated 3 ಜನವರಿ 2024, 13:22 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ದುಬೈ: ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡದ ನಡುವಿನ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಐಸಿಸಿಯು ನೂತನ ಟೆಸ್ಟ್ ರ‍್ಯಾಂಕಿಂಗ್‌ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬ್ಯಾಟಿಂಗ್‌ ವಿಭಾಗದ ರ‍್ಯಾಂಕಿಂಗ್‌ನಲ್ಲಿ 761 ಅಂಕಗಳೊಂದಿಗೆ ಒಂಬತ್ತನೇ ಸ್ಥಾನಕ್ಕೇರಿರುವ ವಿರಾಟ್‌ ಕೊಹ್ಲಿ, ಅಗ್ರ ಹತ್ತರೊಳಗೆ ಸ್ಥಾನ ಪಡೆದಿರುವ ಏಕೈಕ ಭಾರತೀಯ ಬ್ಯಾಟ್ಸ್‌ಮನ್‌ ಆಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪ್ರಥಮ ಇನ್ನಿಂಗ್ಸ್‌ನಲ್ಲಿ 38 ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ 76 ರನ್‌ ಗಳಿಸಿದ್ದ ಕೊಹ್ಲಿ, ಸುದೀರ್ಘ ಅವಧಿಯ ಬಳಿಕ ಅಗ್ರ ಹತ್ತರೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ಕಳೆದ ಪಂದ್ಯದಲ್ಲಿ ಹರಿಣಗಳ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಲು ವಿಫಲವಾಗಿದ್ದ ನಾಯಕ ರೋಹಿತ್‌ ಶರ್ಮಾ 719 ಅಂಕಗಳೊಂದಿಗೆ ನಾಲ್ಕು ಸ್ಥಾನ ಕುಸಿದು 14ನೇ ಸ್ಥಾನ ಪಡೆದಿದ್ದಾರೆ. ಕಳೆದ ಪಂದ್ಯದ ಶತಕವೀರರಾದ ಕನ್ನಡಿಗ ಕೆ.ಎಲ್‌. ರಾಹುಲ್‌ 11 ಸ್ಥಾನ ಏರಿಕೆಯಾಗಿದ್ದು, 51ನೇ ಸ್ಥಾನ ಪಡೆದಿದ್ದಾರೆ ಹಾಗೂ ದಕ್ಷಿಣ ಆಫ್ರಿಕಾದ ಡೀನ್‌ ಎಲ್ಗರ್‌ 19ಸ್ಥಾನಗಳ ಏರಿಕೆಯೊಂದಿಗೆ 17ನೇ ಸ್ಥಾನ ಪಡೆದಿದ್ದಾರೆ.

ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ 864 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ಇಂಗ್ಲೆಂಡ್‌ನ ಜೋ ರೂಟ್‌(859) ಹಾಗೂ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌(820) ಕ್ರಮವಾಗಿ ಎರಡು ಮತ್ತು ಮೂರನೆಯ ಸ್ಥಾನದಲ್ಲಿದ್ದಾರೆ. ಅಚ್ಚರಿ ಎಂಬಂತೆ ನ್ಯೂಜಿಲೆಂಡ್‌ನ ಡೇರಿಲ್‌ ಮಿಚೆಲ್‌(786) ಮೂರು ಸ್ಥಾನಗಳ ಏರಿಕೆಯೊಂದಿಗೆ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದು, ಉಸ್ಮಾನ್‌ ಖ್ವಾಜಾ, ಬಾಬರ್‌ ಅಜಂ ಮತ್ತು ಟ್ರಾವಿಸ್‌ ಹೆಡ್‌ ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜ(446), ಹಾಗೂ ರವಿಚಂದ್ರನ್‌ ಅಶ್ವಿನ್‌(348) ಮೊದಲೆರಡು ಸ್ಥಾನಗಳಲ್ಲಿ ಮುಂದುವರೆದಿದ್ದು, ಬಾಂಗ್ಲಾದ ಶಕೀಬ್‌ ಅಲ್‌ ಹಸನ್‌ ಮೂರನೇ ಸ್ಥಾನ ಪಡೆದಿದ್ದಾರೆ.

ಬೌಲರ್‌ಗಳ ವಿಭಾಗದಲ್ಲಿ 872 ಅಂಕಗಳೊಂದಿಗೆ ರವಿಚಂದ್ರನ್‌ ಅಶ್ವಿನ್‌ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದು, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ(854) ಎರಡನೇ ಸ್ಥಾನ ಹಾಗೂ ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್ (841) ಮೂರನೇ ಸ್ಥಾನ ಪಡೆದಿದ್ದಾರೆ.

ಆರ್. ಅಶ್ವಿನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.